ಕೋಟ, ಸೆ. 17: ಗ್ರಾಮೀಣ ಭಾಗದ, ಸರಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೌಶಲಗಳ ಕಲಿಕೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಸಮಾಜ ಸೇವಾ ಫೌಂಡೇಶನ್‌ನ ಆದ್ಯತೆಯಾಗಿದೆ ಎಂದು ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಸಿ ಕುಂದರ್ ಅಭಿಪ್ರಾಯಪಟ್ಟರು. ಸರಕಾರಿ ಪದವಿಪೂರ್ವ ಕಾಲೇಜು ಮಣೂರು ಪಡುಕರೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಚಿತ ಕಂಪ್ಯೂಟರ್ ತರಗತಿ ಮತ್ತು ಆನ್‌ಲೈನ್ ಸಿಇಟಿ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೀತಾನಂದ ಫೌಂಡೇಶನ್‌ನ ವತಿಯಿಂದ ನೀಡಿದ ಗುರುತು ಪತ್ರಗಳನ್ನು ವಿದ್ಯಾರ್ಥಿಗಳಿಗೆ ಅವರು ವಿತರಿಸಿದರು.
‘ಫೆಸ್ಟ್ ಡಾಟ್ ಕಾಮ್’ ಉದ್ಘಾಟನೆ: ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನ ವಿಷಯದ ಪರಿಕಲ್ಪನೆಗಳನ್ನು ಆಧರಿಸಿ ರಚಿಸಿದ ಮಾದರಿಗಳ ಪ್ರದರ್ಶನ ‘ಫೆಸ್ಟ್ ಡಾಟ್ ಕಾಮ್’ಗೆ ಆನಂದ ಸಿ ಕುಂದರ್ ಚಾಲನೆ ನೀಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆಯ ಪ್ರಾಂಶುಪಾಲರಾದ ಡಾ. ಸುನೀತಾ, ಪ್ರಾಧ್ಯಾಪಕರಾದ ಶಂಕರ್ ನಾಯ್ಕ್, ಕಾಲೇಜು ಶೈಕ್ಷಣಿಕ ಸಮಿತಿಯ ಸದಸ್ಯರಾದ ಜಯರಾಮ ಶೆಟ್ಟಿ, ಗೀತಾನಂದ ಫೌಂಡೇಶನ್‌ನ ಸಮಾಜಕಾರ್ಯ ವಿಭಾಗದ ಸಂಯೋಜಕ ರವಿಕಿರಣ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡೆನಿಸ್ ಬಾಂಜಿ ಸ್ವಾಗತಿಸಿ, ಉಪನ್ಯಾಸಕ ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.