ಮಂಗಳೂರು, ನ.17: ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಇಲ್ಲಿ ನಾರಾಯಣ ನಾಯಕ್ ಕೆ., ನೀಡಿರುವ ರೂ. ಒಂದು ಲಕ್ಷ ಮತ್ತು ಕಾಲೇಜಿನ ಖಾಯಂ ಬೋಧಕ ಸಿಬ್ಬಂದಿಗಳು ನೀಡಿರುವ ಒಂದು ಲಕ್ಷದ ಹದಿನೈದು ಸಾವಿರ ದೇಣಿಗೆಯಿಂದ ಸ್ಥಾಪಿಸಲಾಗಿರುವ ಒಟ್ಟು ರೂ. 2,15,000/- ಮೊತ್ತದ ವಿದ್ಯಾರ್ಥಿವೇತನ ದತ್ತಿ ನಿಧಿಯ ಉದ್ಘಾಟನೆ ನಡೆಯಿತು. ‘ಸ್ಕಾಲರ್‌ಶಿಪ್ ಮಾಸ್ಟರ್’ ಖ್ಯಾತಿಯ ಮತ್ತು ದಾನಿಗಳಾದ ನಾರಾಯಣ ನಾಯಕ್ ಕೆ. ಉದ್ಘಾಟಿಸಿ ವಿದ್ಯಾರ್ಥಿಗಳು ಲಭ್ಯವಿರುವ ವಿದ್ಯಾರ್ಥಿ ವೇತನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ., ಈ ದತ್ತಿ ನಿಧಿಯಿಂದ ಅತ್ಯಧಿಕ ಅಂಕ ಗಳಿಸುವ ತಲಾ ಓರ್ವ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗೆ ಪ್ರತಿ ವರ್ಷ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ತಿಳಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸ್ನಾತಕೋತ್ತರ ಸಂಯೋಜಕಿ ಡಾ. ಅವಿತ ಮರಿಯ ಕೊಡ್ರಾಸ್, ಪ್ರಾಧ್ಯಾಪಕರಾದ ರಘುಪತಿ, ಡಾ. ಮೋಹನ್‌ದಾಸ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.




By
ForthFocus™