ಉಡುಪಿ, ನ.17: ಶತಾಯುಷಿ ಹಿರಿಯ ಸಾಹಿತಿ, ಪತ್ರಕರ್ತ ಅಮ್ಮೆಂಬಳ ಆನಂದ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್.ಪಿ ಅವರು, ಮಾತನಾಡುತ್ತಾ, 1926ರಲ್ಲಿ ಜನಿಸಿದ ಅಮ್ಮೆಂಬಳ ಆನಂದ ಅವರು ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನ. ಅವರು ದೇಶದ ಹೆಸರಾಂತ ನಾಯಕ ಜಾರ್ಜ್ ಫರ್ನಾಂಡಿಸ್ ಅವರ ಸಹಪಾಠಿ ಎಂಬುದು ಅವರ ಬದುಕಿನ ಹೆಮ್ಮೆಯ ಅಧ್ಯಾಯ. ಹಲವಾರು ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿ, ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದವರು. ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ದಿನಕರ ದೇಸಾಯಿ ಪ್ರತಿಷ್ಠಾನದ ಮುಖ್ಯಸ್ಥರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದಾರೆ. ಇಂಥ ಶ್ರೇಷ್ಠ ಮಹಾಪುರುಷರನ್ನು ಗೌರವಿಸುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಮ್ಮೆಂಬಳ ಆನಂದ ಅವರು, ಕನ್ನಡವನ್ನು ಉಳಿಸುವುದು ಕೇವಲ ಭಾಷಣದಿಂದಲ್ಲ, ದೂಷಣೆಯಿಂದಲ್ಲ. ಪರಸ್ಪರ ಪ್ರೀತಿಯಿಂದ ಕೂತು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸಾಹಿತ್ಯದ ಒಡನಾಟ ಹಾಗೂ ಸಂಪರ್ಕವನ್ನು ಬೆಳೆಸಿ ಉಳಿಸಿಕೊಂಡು ಹೋಗಬೇಕು. ಇವತ್ತಿನ ಗೌರವ ಹಲವು ಸಮಾರಂಭಗಳಲ್ಲಿ ಮಾಡುವ ಗೌರವಕ್ಕಿಂತ ಬಹಳ ಸೂಕ್ತ. ಪರಸ್ಪರ ನಾವು ಸಾಹಿತ್ಯದ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಖುಷಿ ಕೊಟ್ಟಿತು ಎಂದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ, ಸುಹಾಸಂ ಅಧ್ಯಕ್ಷೆ ಸಂಧ್ಯಾ ಶೆಣೈ, ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜನಿ ವಸಂತ್, ಜಿಲ್ಲಾ ಸಾಹಿತ್ಯ ಪರಿಷತ್ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್, ರೇಡಿಯೋ ಮಣಿಪಾಲ ಇದರ ಮುಖ್ಯಸ್ಥೆ ಡಾ. ರಶ್ಮಿ ಅಮ್ಮೆಂಬಳ, ದೀಪಾ ಕರ್ಕಿ ಮತ್ತಿತರರು ಉಪಸ್ಥಿತರಿದ್ದು ಹಿರಿಯರನ್ನು ಗೌರವಿಸಿದರು.




By
ForthFocus™