Monday, June 29, 2026
Monday, June 29, 2026

ಹದಿಹರೆಯ ಬದುಕಿನ ಸಮತೋಲನದ ಪಯಣ- ವಿಶೇಷ ಉಪನ್ಯಾಸ

ಹದಿಹರೆಯ ಬದುಕಿನ ಸಮತೋಲನದ ಪಯಣ- ವಿಶೇಷ ಉಪನ್ಯಾಸ

Date:

ಮಂಗಳೂರು, ಜೂ.28: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ನಾಯಕತ್ವ ಗುಣಗಳ ವಿಕಸನ ಹಾಗೂ ಜೀವನ ಕೌಶಲ್ಯಗಳ ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು, ವಿಶ್ವ ಕೊಂಕಣಿ ಕೇಂದ್ರದ ಸಹಯೋಗದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆದ ನಾಲ್ಕು ದಿನಗಳ ವಸತಿ ಶಿಬಿರದ ಅಂಗವಾಗಿ 3 ನೇ ದಿವಸ (27-06-2026) ಸಂಪನ್ಮೂಲ ವ್ಯಕ್ತಿಯಾಗಿ ಕೌನ್ಸಿಲರ್ ಶ್ರೀಮತಿ ವೆರಿನಾ ಜೋಷ್ನಾ ಅವರು ಹದಿಹರೆಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಥ್ರೂ ದ ಟೈಡ್ಸ್: ಎ ಜರ್ನಿ ಟು ಎ ಬ್ಯಾಲೆನ್ಸ್ಡ್ ಟೀನ್ ಲೈಫ್” ಎಂಬ ವಿಷಯದ ಬಗ್ಗೆ ಪ್ರೇರಣಾದಾಯಕ ಉಪನ್ಯಾಸ ನೀಡಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತಮ್ಮ ಉಪನ್ಯಾಸದಲ್ಲಿ ಅವರು “ಮನುಷ್ಯನ ಜೀವನವು ಸಮುದ್ರದಂತಿದೆ” ಎಂಬ ಸುಂದರ ರೂಪಕದ ಮೂಲಕ ಬದುಕಿನ ವಿವಿಧ ಆಯಾಮಗಳನ್ನು ವಿವರಿಸಿದರು. ಸಮುದ್ರವು ಕೆಲವೊಮ್ಮೆ ಶಾಂತವಾಗಿದ್ದರೆ, ಮತ್ತೊಮ್ಮೆ ಬಿರುಗಾಳಿ, ಅಲೆಗಳ ಅಬ್ಬರ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವಂತೆ, ಮಾನವನ ಜೀವನದಲ್ಲಿಯೂ ನಿರೀಕ್ಷೆಗಳು, ಹೋಲಿಕೆ, ವೈಫಲ್ಯದ ಭಯ, ಏಕಾಂತ, ನಿರಾಕರಣೆ ಮುಂತಾದ ಅನೇಕ ಸವಾಲುಗಳು ಎದುರಾಗುತ್ತವೆ ಎಂದು ತಿಳಿಸಿದರು. ಕೆಲವು ನೋವುಗಳು ಮತ್ತು ಹೋರಾಟಗಳು ಹೊರಗಿನಿಂದ ಕಾಣಿಸದೇ, ಅವನ್ನು ಅನುಭವಿಸುವ ವ್ಯಕ್ತಿಗೆ ಮಾತ್ರ ತಿಳಿದಿರುತ್ತವೆ ಎಂಬುದನ್ನು ಅವರು ಮನದಟ್ಟುಗೊಳಿಸಿದರು.

ಜೀವನದ ಪಯಣದಲ್ಲಿ ಒಳಧ್ವನಿ ದಿಕ್ಸೂಚಿಯಂತೆ ಕಾರ್ಯನಿರ್ವಹಿಸುತ್ತದೆ. ಸಹಾಯಕ ಒಳಧ್ವನಿ ವ್ಯಕ್ತಿಯಲ್ಲಿ ಧೈರ್ಯ, ಆತ್ಮವಿಶ್ವಾಸ, ಕಲಿಯುವ ಮನೋಭಾವ ಮತ್ತು ಮುನ್ನಡೆಯುವ ಶಕ್ತಿಯನ್ನು ಬೆಳೆಸುತ್ತದೆ. ಪರಿಸ್ಥಿತಿಗಳು ಪ್ರತಿಕೂಲವಾಗಿದ್ದರೂ, ಸಕಾರಾತ್ಮಕ ಒಳಧ್ವನಿಯು ಗುರಿಯತ್ತ ಮುನ್ನಡೆಯಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ವ್ಯಕ್ತಿಯ ಸ್ವಭಾವ, ಮನೋಭಾವ, ಸವಾಲುಗಳಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ, ಉತ್ತಮ ಅಭ್ಯಾಸಗಳು ಹಾಗೂ ಭಾವನಾತ್ಮಕ ದೃಢತೆ ಜೀವನದ ಯಶಸ್ಸಿಗೆ ಅಡಿಪಾಯವಾಗಿವೆ. ನಮ್ಮ ಭಾವನೆಗಳನ್ನು ಗುರುತಿಸಿ ಅವುಗಳಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ಕಲಿಯಬೇಕು ಎಂದು ಅವರು ತಿಳಿಸಿದರು. ಸಮುದ್ರದಲ್ಲಿ ಅನೇಕ ದಿಕ್ಕುತಪ್ಪಿಸುವ ಬೆಳಕುಗಳಿದ್ದರೂ, ದೀಪಸ್ತಂಭ ಮಾತ್ರ ಹಡಗಿಗೆ ಸುರಕ್ಷಿತ ದಾರಿಯನ್ನು ತೋರಿಸುವಂತೆ, ಜೀವನದಲ್ಲಿಯೂ ಅನೇಕ ಆಕರ್ಷಣೆಗಳು ಮತ್ತು ದಿಕ್ಕುತಪ್ಪಿಸುವ ಸಂದರ್ಭಗಳು ಎದುರಾಗುತ್ತವೆ. ಆದರೆ ನಾವು ನಮ್ಮ ಜೀವನದ ನಿಜವಾದ ದೀಪಸ್ತಂಭವನ್ನು ಗುರುತಿಸಿ ಅದರ ಮಾರ್ಗದರ್ಶನವನ್ನು ಅನುಸರಿಸಬೇಕು ಎಂದು ಅವರು ಕರೆ ನೀಡಿದರು. ಹದಿಹರೆಯದವರು ಜೀವನದ ಪಯಣದಲ್ಲಿ ಒಬ್ಬಂಟಿಯಾಗಿರುವುದಿಲ್ಲ. ಅಗತ್ಯವಿದ್ದಾಗ ಶಿಕ್ಷಕರು, ಪೋಷಕರು, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಂತಹ ಮಾರ್ಗದರ್ಶಕರ ಸಲಹೆ ಮತ್ತು ಬೆಂಬಲವನ್ನು ಪಡೆಯಬೇಕು ಎಂದು ತಿಳಿಸಿದರು. ಅಲ್ಲದೆ ದಯೆ, ಧೈರ್ಯ, ಪ್ರಾಮಾಣಿಕತೆ, ಜವಾಬ್ದಾರಿ, ಸಹಾನುಭೂತಿ ಮುಂತಾದ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಈ ಮೌಲ್ಯಗಳೇ ನಮ್ಮ ಜೀವನದ ಧ್ರುವ ತಾರೆಯಾಗಿ ಸರಿಯಾದ ದಿಕ್ಕನ್ನು ತೋರಿಸುತ್ತವೆ ಎಂದು ಹೇಳಿದರು. ಕೊನೆಯಲ್ಲಿ ಜೀವನವನ್ನು ಹಡಗಿಗೆ, ಒಳಧ್ವನಿಯನ್ನು ದಿಕ್ಸೂಚಿಗೆ, ಪೋಷಕರು ಹಾಗೂ ಮಾರ್ಗದರ್ಶಕರನ್ನು ದೀಪಸ್ತಂಭಕ್ಕೆ ಮತ್ತು ಸುರಕ್ಷಿತ, ಸಂತೋಷದ ಬದುಕನ್ನು ನಮ್ಮ ಗಮ್ಯಸ್ಥಾನಕ್ಕೆ ಹೋಲಿಸಿ, “ಜೀವನಯಾನದಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಾ ಸುರಕ್ಷಿತವಾಗಿ ಮತ್ತು ಸಂತೋಷದಿಂದ ಗುರಿ ತಲುಪುವುದೇ ಯಶಸ್ಸು” ಎಂಬ ಪ್ರೇರಣಾದಾಯಕ ಸಂದೇಶವನ್ನು ನೀಡಿದರು. ಈ ಉಪನ್ಯಾಸವು ಹದಿಹರೆಯದ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಮತೋಲನ, ಆತ್ಮವಿಶ್ವಾಸ ಹಾಗೂ ಮೌಲ್ಯಾಧಾರಿತ ಬದುಕಿನ ಮಹತ್ವವನ್ನು ಮನದಟ್ಟು ಮಾಡಿತು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ, ಕೇಂದ್ರದ ಉಪಾಧ್ಯಕ್ಷ ಡಿ ರಮೇಶ ನಾಯಕ್ ಮೈರಾ, ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ, ಸುಚಿತ್ರಾ ರಮೇಶ್ ನಾಯಕ್, ಲಕ್ಷ್ಮಿ ಕಿಣಿ, ರವೀಂದ್ರ ನಾಯಕ್ ಕುಂಟಲ್ಪಾಡಿ, ಮತ್ತು ರಾಮಕೃಷ್ಣ ಪ್ರಭು ಮಾರಿಬೆಟ್ಟು, ಸಂದೀಪ್ ಪ್ರಭು ವಗ್ಗ, ಶಿವರಾಂ ಪ್ರಭು ಮಾರಿಬೆಟ್ಟು, ಗಣೇಶ್ ಪ್ರಭು, ಸುಜಾತ ಪ್ರಭು, ವಿಜಯ ಶೆಣೈ ಕೊಡಂಗೆ, ಗೋಪಾಲ ಸಾಮಂತ್, ನಾಗೇಶ ನಾಯಕ್ ಕುಂಟಲ್ಪಾಡಿ, ರಾಜೇಶ್ ಪ್ರಭು ಬನ್ನೂರು, ಮುರಳೀಧರ ಪ್ರಭು ವಗ್ಗ, ಅಕ್ಷತಾ ನಾಯಕ್, ಗೌತಮಿ ನಾಯಕ್ ಕಡೇಶ್ವಾಲಯ ಮುಂತಾದವರು ಉಪಸ್ಥಿತರಿದ್ದರು. ಡಾ ವಿಜಯಲಕ್ಷ್ಮಿ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸೌಜನ್ಯ ನಾಯಕ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ: ಗುಜ್ಜಾಡಿ ಪ್ರಭಾಕರ್ ನಾಯಕ್

ಉಡುಪಿ, ಜೂ.29: ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ...

ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಅಗತ್ಯ: ಎಂ.ಎನ್ ಮಧ್ಯಸ್ಥ

ಕೋಟ, ಜೂ.29: ಮುಂದಿನ ತಲೆಮಾರಿಗಾಗಿ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರೂ...

ಬ್ರಹ್ಮಾವರ: ಕೃಷಿ ಸಖಿಯರ ಮೂರನೇ ಹಂತದ ತರಬೇತಿ ಕಾರ್ಯಕ್ರಮ ಸಂಪನ್ನ

ಬ್ರಹ್ಮಾವರ, ಜೂ.29: ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಕೃಷಿ ವಿಜ್ಞಾನ ಕೇಂದ್ರ...

ಎರ್ಮಾಳು ತೆಂಕ: ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಸಭೆ

ಕಾಪು, ಜೂ.28: ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತಾಗಿ...
error: Content is protected !!