Saturday, September 5, 2026
Saturday, September 5, 2026

ಬೆಳ್ಮಣ್ಣು ತಾಮ್ರಶಾಸನ

ಬೆಳ್ಮಣ್ಣು ತಾಮ್ರಶಾಸನ

Date:

ಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ಣು ಗ್ರಾಮದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಸುತ್ತಲೂ ಬೆಟ್ಟ-ಗುಡ್ಡಗಳಿಂದ ಕೂಡಿದ್ದು, ಜಿಲ್ಲೆಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಪ್ರಾಚೀನ ದೇವಾಲಯ ಎಂಬ ಹೆಗ್ಗಳಿಕೆಗೆ ಪಡೆಯಲು ಮುಖ್ಯ ಕಾರಣವೇನೆಂದರೆ ಇಲ್ಲಿ ಪತ್ತೆಯಾದ ತಾಮ್ರಪಟ ಶಾಸನ, ಶಿಲ್ಪಗಳು ಹಾಗೂ ಇತರ ಪ್ರಾಚೀನ ಕುರುಹುಗಳು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಮೊದಲು 14ನೆಯ ಶತಮಾನದ ಹಿಂದಣ ಯಾವುದೇ ಅಧಿಕೃತ ತಾಮ್ರಶಾಸನವು ದೊರಕಿರಲಿಲ್ಲ ಅದರಲ್ಲೂ ಮುಖ್ಯವಾಗಿ ತುಳುನಾಡನ್ನು ಸುಮಾರು ಒಂದುವರೆ ಸಾವಿರ ವರ್ಷಗಳಷ್ಟು ವಿವಿಧ ರಾಜಮನೆತನಗಳ ಅಡಿಯಲ್ಲಿ ಆಳ್ವಿಕೆ ಮಾಡಿಕೊಂಡು ಬಂದಿದ್ದ ಆಳುಪರಸರ ಯಾವುದೇ ತಾಮ್ರ ಶಾಸನವು ದೊರಕಿರಲಿಲ್ಲ. ಆದರೆ ಇಲ್ಲಿ ಪತ್ತೆಯಾದ ತಾಮ್ರಶಾಸನವು ‘ಕರ್ನಾಟಕದ ಪ್ರಾಚೀನ ಕನ್ನಡ ತಾಮ್ರಶಾಸನ’ ಎಂದೇ ಪ್ರಖ್ಯಾತಿಯನ್ನು ಪಡೆಯಿತು. (ಈ ಮೊದಲು ಬ್ರಿಟಿಷ್ ಮ್ಯೂಸಿಯಂ-ಲಂಡನ್‌ನಲ್ಲಿರುವ ರಾಷ್ಟ್ರಕೂಟ ದೊರೆ ಮೂರನೇ ಗೋವಿಂದನ (ಸಾಮಾನ್ಯ ವರ್ಷ 804) ತಾಮ್ರಶಾಸನವು ಹಳೆಯ ತಾಮ್ರ ಶಾಸನವಾಗಿತ್ತು)

ಶಾಸನ ದೊರೆತ ಬಗೆ: ಈ ತಾಮ್ರಶಾಸನವು ಮೊದಲಿಗೆ ಅಂದರೆ 1942ರಲ್ಲಿ ಬೆಳ್ಮಣ್ಣಿನ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರು ಮತ್ತು ಆಡಳಿತ ಮೊಕ್ತೇಸರರಾಗಿದ್ದ ಶ್ರೀ ಮಧ್ವರಾಯ ಭಟ್ಟರಿಗೆ ದೊರಕಿತ್ತು. ಇವರು ದೇವಾಲಯದ ಜೀರ್ಣೋದ್ಧಾರವಾಗಿ ಉತ್ತರ ದಿಕ್ಕಿನ ಪೌಳಿಯನ್ನು ಬಿಚ್ಚಿ ಅಗೆತ ಮಾಡಿದ ಸಂದರ್ಭದಲ್ಲಿ ಸುಮಾರು 5-6 ಅಡಿ ಆಳದಲ್ಲಿ ಭಿತ್ತಿಯ ಕೆಳಭಾಗದಲ್ಲಿ ಒಂದು ಕಲ್ಲಿನ ಪೆಟ್ಟಿಗೆಯೊಳಗೆ 5 ತಾಮ್ರದ ತಗಡುಗಳು ಪುಸ್ತಿಕೆಯ ರೂಪದಲ್ಲಿ ಪತ್ತೆಯಾಗುತ್ತದೆ.

1969ರ ಸಂದರ್ಭದಲ್ಲಿ ಪಾದೂರು ಗುರುರಾಜ ಭಟ್ಟರು ತಮ್ಮ ಸಂಶೋಧನೆಯ ದೃಷ್ಟಿಯಿಂದ ಈ ದೇವಾಲಯಕ್ಕೆ ಭೇಟಿ ನೀಡಿದಾಗ, ಇಲ್ಲೊಂದು ತಾಮ್ರಶಾಸನವು ಇದ್ದು ಅದನ್ನು ಓದುವುದು ಕಷ್ಟಸಾಧ್ಯವೆಂದು ಅರ್ಚಕರು ತಿಳಿಸುತ್ತಾರೆ. ನಂತರದಲ್ಲಿ ಅರ್ಚಕರು ಅವರಿಗೆ ಈ ತಾಮ್ರಶಾಸನವನ್ನು ಓದಲು ನೀಡಿದಾಗ, ಈ ತಾಮ್ರಶಾಸನವನ್ನು ಇಷ್ಟರ ತನಕ ಪರಿಶೀಲಿಸಲಾಗಲಿಲ್ಲ ಎಂಬುದು ತಿಳಿದು ಬರುತ್ತದೆ. 1972ರಲ್ಲಿ ಈ ಶಾಸನದ ಬಗ್ಗೆ ಅಧ್ಯಯನ ಮಾಡಿದ ಪಾದೂರು ಗುರುರಾಜ ಭಟ್ಟರು ಇದರ ಬಗ್ಗೆ ಸುದೀರ್ಘವಾದ ಲೇಖನವನ್ನು ಬರೆಯುತ್ತಾರೆ. ಈ ಮೂಲಕ ಈ ತಾಮ್ರಶಾಸನವು ಪ್ರಾಚೀನ ಆಳುಪರ ಕಾಲದ್ದು (ಸುಮಾರು 8ನೆಯ ಶತಮಾನದ ಉತ್ತರಾರ್ಧ) ಎಂದು ಸಾಬೀತಾಗುತ್ತದೆ. ಮಾತ್ರವಲ್ಲದೇ ಭಾರತ ಸರ್ಕಾರದ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದ, ಶಾಸನಶಾಸ್ತ್ರಜ್ಞರಾಗಿದ್ದ ಗೋವಿಂದರಾವ್ ಸ್ವಾಮಿರಾವ್ ಗಾಯಿ (ಡಾ. ಜಿ.ಎಸ್. ಗಾಯಿ) ಅವರು, ಇದು ‘ಕರ್ನಾಟಕದ ಕನ್ನಡ ಭಾಷೆಯ ಅತೀ ಪ್ರಾಚೀನ ತಾಂಬ್ರ ಶಾಸನ’ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ಶಾಸನದ ರೂಪ ಮತ್ತು ಲಿಪಿ: ಈ ತಾಂಬ್ರಶಾಸನವು ಆಳುಪರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಒಂದು ಸಂಪೂರ್ಣ ದಾಖಲೆಯಾಗಿದೆ ಎಂದರೆ ತಪ್ಪಗಲಾರದು. ಪುಸ್ತಿಕೆ ರೂಪದ ತಾಮ್ರಶಾಸನವು 5 ತಗಡುಗಳನ್ನು ಹೊಂದಿದ್ದು, ಇದರ 4 ತಗಡುಗಳಲ್ಲಿ (ಹಾಳೆ) 7 ಬದಿಗಳಲ್ಲಿ 8ನೆ ಶತಮಾನದ ಕನ್ನಡ ಲಿಪಿಯ ಬರಹಗಳು ಕಂಡುಬರುತ್ತದೆ. ಈ ಎಲ್ಲಾ ಹಾಳೆಗಳನ್ನು ಆಳುಪರಸರ ರಾಜಲಾಂಛನ ಎರಡು ಮೀನುಗಳಿಂದ ಕೂಡಿದ ಮುದ್ರೆಯುಂಗರದಿಂದ ಬಂಧಿಸಲಾಗಿತ್ತು. ಪ್ರತಿಯೊಂದು ಹಾಳೆಯು 17.5 ಸೆಂ.ಮೀ ಉದ್ದ, 7.5 ಸೆಂ.ಮೀ ಅಗಲ ಮತ್ತು 0.3 ಸೆಂ.ಮೀ ದಪ್ಪವಾಗಿದ್ದು, ಎಲ್ಲಾ ಹಾಳೆಗಳು ೧.೩೭೫ ಕಿಲೋ ಗ್ರಾಂ ಭಾರವಾಗಿತ್ತು. ಶಾಸನದಲ್ಲಿ 8ನೇ ಶತಮಾನದ ಕನ್ನಡ ಲಿಪಿಯ ಬರಹಗಳಿದ್ದರೂ “ಖ, ಭ, ಉ, (ರಳ) ಮತ್ತು ಇ” ಅಕ್ಷರಗಳು ೫ನೆ ಶತಮಾನದ ಕನ್ನಡ ಲಿಪಿಯ ಬರಹಗಳನ್ನು ಉಳಿಸಿಕೊಂಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಮಾತ್ರವಲ್ಲದೇ ೬ನೆಯ ಹಾಳೆಯಲ್ಲಿ ತೆಳುವಾದ ಸ್ವಸ್ತಿಕಾ ರೇಖೆಯಿದೆ.

ಶಾಸನದ ಪರಿಚಯ: “ಓಂ ನಮ ಶಿವಾಯ” ಎಂಬ ಶೈವ ಸ್ತುತಿಯಲ್ಲಿ ಪ್ರಾರಂಭವಾಗುವ ಈ ತಾಂಬ್ರ ಶಾಸನದಲ್ಲಿ ಮೂರು ವಿಭಾಗಗಳನ್ನು ಕಂಡುಕೊಳ್ಳಬಹುದು. ಒಂದನೆಯ ವಿಭಾಗದಲ್ಲಿ ಆಳುಪರಸರ ಬಿರುದು, ಅಂಕಿತನಾಮ ಮತ್ತು ಇನ್ನೋರ್ವ ಅರಸನ ಹೆಸರು ಇದೆ. ಎರಡನೆಯ ವಿಭಾಗದಲ್ಲಿ ದಾನದ ವಿಚಾರ, ದಾನವನ್ನು ರಕ್ಷಿಸುವವರ ಹೆಸರು ಮತ್ತು ಜವಾಬ್ದಾರಿಯನ್ನು ಉಲ್ಲೇಖಿಸಲಾಗಿದೆ. ಕೊನೆಯ ವಿಭಾಗದಲ್ಲಿ ಕೊಟ್ಟಂತ ಈ ದಾನ ಶಾಸನಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಉಂಟಾಗುವ ಪಾಪ ಹಾಗೆಯೇ ಇದನ್ನು ರಕ್ಷಿಸುವವರಿಗೆ ಲಭಿಸುವ ಪುಂಣ್ಯವನ್ನು ತಿಳಿಸಲಾಗಿದೆ. ಬೆಳ್ಮಣ್ಣಿನ ದೇವಾಲಯದ ಮೂಲಸ್ಥಾನ ದೇವತೆಯಾದ ಶ್ರೀ ಮಹಿಷಮರ್ಧಿನಿಗೆ ವಿಂಧ್ಯಾವಾಸಿನಿ ಎಂದು ಕರೆಯಲಾಗಿದೆ. ಶಾಸನದಲ್ಲಿ ಪಾಂಡ್ಯಕುಲ ವೃದ್ಧಿಯಾಗುವವು ಎಂಬ ಆಶೋತ್ತರವಿದ್ದು, ಕೊನೆಯಲ್ಲಿ ಯಸ್ಯ ಯಸ್ಯ ಯದಾಭ್ಯಮಪಿ ಯಸ್ಯತಸ್ಯ ಯಥಾಪಲ ಎಂಬ ಉಕ್ತಿಯೊಂದಿಗೆ ಅಂತ್ಯಗೊಳ್ಳುತ್ತದೆ.

ಶಾಸನದ ಸಾರಾಂಶ: ಬ್ರಹ್ಮನಿಂದ ರಕ್ಷಿಸಲ್ಪಟ್ಟ ಕುಲದಲ್ಲಿ ಅಭಿಮಾನವುಳ್ಳವನಾದ ಶ್ರೀ ಮದಾಳುವರಸನ ರಾಜ್ಯದ ಮಹಾ ನಾಡಿನಲ್ಲಿ ಶ್ರೀ ಆಳುವರಸನೂ ಮತ್ತು ಶ್ರೀ ಎರೈಯ್ಯಪರಸನೂ ಯಿದ್ದು ಸೂರ್ಯಗ್ರಹಣದಂದು ಬೆಳ್ಮಣ್ಣ ಸಭೆಗೆ ಶಿವವಳ್ಳಿಯ ಮರ್ಯಾದೆ ಪರಿಹಾರವಾಗಿ ಧಾರೆಯನೆರೆದರು. ಈ ಕ್ಷೇತ್ರವು ಕಂತಾಪುರದ (ಪಸ್ತುತ ಕಾಂತಾವರ) ಮಾಣಿದೇವನ ಆಡಳಿತೆಯೊಳಗಿದ್ದು ಚೊಕ್ಕಾಡಿಯ ಭಟ್ಟರಿದ್ದು ಈ ಶಾಸನವು ತಯಾರಿಸಲ್ಪಟ್ಟಿತು. ಈ ದಾನ ಶಾಸನವನ್ನು ಕಾಯುವ ಕಾಪಿನ ಬೋಯಿಗವರ್ಮರಸನೂ ಬೇಳದ ನಂದನೂ, ಕೊಳುನೂರ ನಂದನೂ, ಸಾಂತೂರ ಮೇದಿನಿಯೂ ಉರಪ್ಪಣನೂ ಇನ್ನಿತರರೂ ಅನನ್ಯ ಪುಣ್ಯವನ್ನು ಹೊಂದುವರು. ಈ ದಾನ ಶಾಸನವನ್ನು ಅಳಿಯುವವರು ಅಥವಾ ವಕ್ರಗೊಳಿಸುವವರ, ವಾರಣಾಸಿ ಮತ್ತು ಶಿವವಳ್ಳಿ (ಶಿವಳ್ಳಿ)ಯನ್ನು ನಾಶಗೊಳಿಸಿದ ಪಾಪಕ್ಕೂ, 21 ನರಕಕ್ಕೂ, ಸಹಸ್ರ ವರ್ಷ ಅಮೇ ಧ್ಯದಲ್ಲಿ ಹುಳವಾಗಿದ್ದು ಕ್ಷಯಿಸುವ ಕಷ್ಟಕ್ಕೂ ಒಳಗಾಗುವರು. ಇದನ್ನು ರಕ್ಷಿಸುವವರಿಗೆ ಅಶ್ವಮೇಧ ಫಲವೊದಗುವುದು. ಮಾತ್ರವಲ್ಲದೆ ಈ ದಾನ ಶಾಸನದ ರಕ್ಷಣೆಯಲ್ಲಿ ಮೃತನಾದವನಿಗೆ ಇಂದ್ರ ಪದವಿಯೂ ಲಭ್ಯವಾಗಿ ಆಳುವನು. ಈ ದಾನ ಶಾಸನದಿಂದ ಪಾಂಡ್ಯಕುಲವು ವೃದ್ಧಿಯಾಗುವುದು.

ಶಾಸನದ ಚಾರಿತ್ರಿಕ ವೈಶಿಷ್ಟ್ಯ: 8ನೆಯ ಶತಮಾನದಲ್ಲಿ ತುಳುನಾಡನ್ನು ಆಳುತ್ತಿದ್ದ ಎರಡನೇ ಆಳುಪರಸನು (ಸಾಮಾನ್ಯ ವರ್ಷ720-750) ಎರೈಪ್ಪರಸನ (ತಲಕಾಡಿನ ಗಂಗ ಅರಸನಾದ ಶ್ರೀಪುರುಷನ ಎರಡನೆಯ ಮಗನಾದ ಎರೆಯಪ್ಪ ಎಂದು ಹಾಗೂ ಆಳುಪರಿಗೂ ಗಂಗ ಅರಸರಿಗೂ ರಕ್ತ ಸಂಬಂಧವಾಗಲಿ/ವೈವಾಹಿಕ ಸಂಬಂಧ ಅಥವಾ ರಾಜಕೀಯ ಒಪ್ಪಂದವಾಗಲಿ ನಡೆದಿರಬಹುದೆಂದು ಪಾದೂರು ಗುರುರಾಜ ಭಟ್ಟರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ) ಉಪಸ್ಥಿತಿಯ ಮೂಲಕ ಅಥವಾ ಇಬ್ಬರೂ ಜತೆಗೂಡಿ ಈ ದಾನಶಾಸನವನ್ನು ಊರ್ಜಿತಗೊಳಿಸಿದರು. ಈ ಸಂದರ್ಭದಲ್ಲಿ ಅಂದರೆ ಬೆಳ್ಮಣ್ಣ ಸಭೆಗೆ ಶಿವವಳ್ಳಿ ಮರ್ಯಾದೆಯನ್ನು ನೀಡಿದ ಸಂದರ್ಭದಲ್ಲಿ (ಅಂದರೆ ಬಹುಶಃ) ದೇವಸ್ಥಾನವನ್ನು ಒಂದು ಪುಣ್ಯಕ್ಷೇತ್ರವಾಗಿ ಪರಿಗಣಿಸಿ ಅದರ ನಿರ್ವಹಣೆಗಾಗಿ ಭೂಮಿಯನ್ನು ದಾನವಾಗಿ ಕೊಟ್ಟ ಸಂದರ್ಭದಲ್ಲಿ ಸುತ್ತಮುತ್ತಲಿನ ಹಲವು ಊರುಗಳ ಆಡಳಿತಗಾರರು ಉಪಸ್ಥಿತರಿದ್ದರು. ಅವರುಗಳೆಂದರೆ ಪಶ್ಚಿಮದ ಕಾಪುವಿನ (ಬೆಳ್ಮಣ್ಣಿನಿಂದ ಪಶ್ಚಿಮಕ್ಕೆ 25 ಕಿ.ಮೀ ದೂರದಲ್ಲಿರುವ ತಾಲೂಕು ಕೇಂದ್ರ) ಬೊಯ್ಗವರ್ಮ, ಕಾಂತಾಪುರದ (ಪ್ರಸ್ತುತ ಕಾಂತಾವರ-ಬೆಳ್ಮಣ್ಣಿನಿಂದ ಪೂರ್ವಕ್ಕೆ 15 ಕಿ. ಮೀ. ದೂರದಲ್ಲಿರುವ ಊರು) ಮಾಣಿದೇವನವರೆಗೆ ಆಡಳಿತಗಾರರು ಅಥವಾ ತುಂಡರಸರು ಈ ದಾನಪತ್ರ ಸ್ಥಾಪನೆಯ ಸಮಾರಂಭಕ್ಕೆ ಬಂದಿದ್ದರು. ಇತರರೆಂದರೆ ಬೇಳ (ಈಗಿನ ಬೋಳ) ದ ನಂದ, ಕುಳನೂರ (ಈಗಿನ ಕುಡುಂದೂರು) ನಂದ, ಸಾನ್ತೋರ (ಪ್ರಸ್ತುತ ಸಾಂತೂರು) ಮೇದಿನಿ, ಚೊಕಪಾಡಿ (ಈಗಿನ ಚೊಕ್ಕಾಡಿ, ಕಟಪಾಡಿಯ ಸಮೀಪವಿದೆ)ಯ ಭಟ್ಟರು ಮತ್ತು ಉರಪಣ (ಅಧಿಕಾರಿ?) ಇವರಿಗೆಲ್ಲ ಶಾಸನದ ಕಟ್ಟಳೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಇಲ್ಲಿ ಕೆಲವೊಂದು ಊರುಗಳ ಹೆಸರು ಹೇಗೆ ರೂಪಾಂತರಗೊಂಡಿದೆ ಹಾಗೂ ಇನ್ನೂ ಕೆಲವು ಹೆಸರುಗಳು ಸಹಸ್ರಾರು ವರ್ಷಗಳಿಂದ ಬದಲಾವಣೆ ಆಗದೆ ಹೇಗೆ ಉಳಿದು ಬಂದಿದೆ ಎಂಬುದು ತಿಳಿಯುತ್ತದೆ.

ಇಷ್ಟು ವಿಸ್ತಾರವಾದ ಪ್ರದೇಶದ ಆಡಳಿತಗಾರರ ಉಪಸ್ಥಿತಿ ಮತ್ತು ರಕ್ಷಣೆಯ ಹೊಣೆಗೆ ಪಾತ್ರವಾದ ಬೆಳ್ಮಣ್ಣು ಮಹಾನಾಡು ಆಗಿತ್ತು. ಮಹಾನಾಡು ಎನ್ನುವುದು ಆಳುಪರ ರಾಜ್ಯದ ಒಂದು ವಿಭಾಗವಾಗಿತ್ತು. ಆಗ ನಾಡು ಮತ್ತು ಮಹಾನಾಡು ಎಂಬ ವಿಭಾಗಗಳಿದ್ದವು (ತಾಲೂಕು ಮತ್ತು ಜಿಲ್ಲೆಗಳಿದ್ದ ಹಾಗೆ) ಎಂದು ಇತಿಹಾಸಕಾರರಾದ ಡಾ. ಪಿ. ಎನ್. ನರಸಿಂಹಮೂರ್ತಿ ಹೇಳುತ್ತಾರೆ. ಈ ಶಾಸನದಿಂದ ದಕ್ಷಿಣ ಕನ್ನಡದ ದೇವಾಲಯಗಳ ಇತಿಹಾಸಕ್ಕೆ ತುಂಬ ಸಹಾಯ ದೊರಕುತ್ತದೆ. ಶಾಸನದ ಅಂತ್ಯದಲ್ಲಿ ವಿಂಧ್ಯವಾಸಿನಿಯನ್ನು ‘ಮಹಾಮುನಿ ಸೇವಿತೇ’ ಎಂದು ಉಲ್ಲೇಖಿಸಿದುದರಿಂದ ಶಾಸನವನ್ನು ಬರೆಯಿಸುವ ಕಾಲಕ್ಕಿಂತಲೂ ಹಳೆಗಾಲದಲ್ಲಿ ಇಲ್ಲಿ ದೇಗುಲವಿದ್ದಿರಬೇಕೆಂದು ತಿಳಿದುಕೊಳ್ಳಬಹುದು. ಇಲ್ಲಿರುವ ದೇವಾಲಯದ ಮೂಲ ಮೂರ್ತಿಯನ್ನು ಪರಿಶೀಲಿಸಿದಾಗ ಈ ನಿರ್ಧಾರ ಸರಿಯೆನಿಸುತ್ತದೆ. ಮೂಲ ಶಿಲಾಮೂರ್ತಿಯು 18 ಇಂಚು ಎತ್ತರವಾಗಿದ್ದು ಕರಿ ಗಟ್ಟಿಶಿಲೆಯಿಂದ ನಿರ್ಮಾಣವಾಗಿದೆ. ಚತುರ್ಭುಜಧಾರಿಯಾದ ದೇವಿಯು ತನ್ನ ಬಲ ಕೈಯಲ್ಲಿ ಖಡ್ಗ ಮತ್ತು ಎಡ ಕೈಯಲ್ಲಿ ಘಂಟೆ ಹಾಗೂ ಕೆಳಗಿನ ಬಲ ಕೈಯಲ್ಲಿ ತ್ರಿಶೂಲವನ್ನು ಎಡ ಕೈಯಲ್ಲಿ ಮಹಿಷನ ಮುಖವನ್ನು ಹಿಡಿದಿರುವಂತೆ ಕೆತ್ತನೆ ಮಾಡಲಾಗಿದೆ. ಮಹಿಷನನ್ನು ಮೆಟ್ಟಿ ಮುಖವನ್ನು ಹಿಡಿದೊತ್ತಿ ತ್ರಿಶೂಲದಿಂದ ಬೆನ್ನನ್ನು ಇರಿಯುವ ನಿರ್ದೇಶ ಭಯ, ಭಕ್ತಿಯನ್ನು ಹುಟ್ಟಿಸುತ್ತದೆ. ಈ ಮೂರ್ತಿಯ ಶಿರಶ್ಚಕ್ರ ಮತ್ತು ಕಿರೀಟ ಹಾಗೂ ಆಯುಧಗಳ ಧಾರಾಣ ಕ್ರಮಗಳನ್ನೆಲ್ಲಾ ಪರಿಶೀಲಿಸಿ ಈ ಮೂರ್ತಿಯು ಬಾದಾಮಿ ಚಾಲುಕ್ಯ ಶಿಲ್ಪ ಲಕ್ಷಣಗಳನ್ನು ಹೋಲುತ್ತದೆ ಎಂದು ಪಾದೂರು ಗುರುರಾಜ ಭಟ್ಟರು ತಿಳಿಸಿದ್ದಾರೆ. ಇದರೊಂದಿಗೆ ದೇವಾಲಯದಲ್ಲಿ ಮಹಿಷ ಮರ್ಧಿನಿಯ ಮೂರು ಪಂಚಲೋಹದ ವಿಗ್ರಹಗಳಿವೆ. ಅವುಗಳಲ್ಲಿ ಒಂದು ನಿತ್ಯ ಬಲಿಯ ಮೂರ್ತಿ, ಇನ್ನೊಂದು ಉತ್ಸವ ಬಲಿ ಮೂರ್ತಿ, ಉತ್ಸವ ಬಲಿಮೂರ್ತಿ ಎಂಟನೆಯ ಶತಮಾನದ ಚಾಲುಕ್ಯ ಪಲ್ಲವ ಶೈಲಿಯ ಸುಂದರ ವಿಗ್ರಹ. ಇನ್ನೆರಡು ಮೂರ್ತಿಗಳು ೧೧ ನೆಯ ಶತಮಾನ ಮತ್ತು ವಿಜಯನಗರ ಕಾಲದ್ದೆಂದು ತೀರ್ಮಾನಿಸಲಾಗಿದೆ. ಹಾಗಾಗಿ ಬೆಳ್ಮಣ್ಣಿನ ಮಹಿಷಮರ್ದಿನಿಯ ದೇಗುಲವು ತುಳುನಾಡಿನ ಹಾಗೂ ಕರ್ನಾಟಕದ ಪ್ರಾಚೀನ ದೇಗುಲಗಳಲ್ಲಿ ಒಂದೆನ್ನಬಹುದು.

ಈ ಶಾಸನವು ‘ಓಂ ನಮ ಶಿವಾಯಃ’ ಎಂದು ಪ್ರಾರಂಭವಾಗುತ್ತದೆ. ಹಾಗಾಗಿ ಆಳುವರಸರ ಅಧಿದೇವತೆಯು ಶಿವನೆಂದು ತಿಳಿಯಬಹುದು. ಇಷ್ಟರತನಕ ದೊರಕಿದ ಯಾವ ಪ್ರಾಚೀನ ಹಾಗೂ ಮಧ್ಯಕಾಲೀನ ಆಳುಪರ ಶಾಸನಗಳಲ್ಲಿ ‘ಓಂ ನಮ ಶಿವಾಯಃ’ ಎಂದು ಈಶ್ವರನ ಸ್ತುತಿ ಕಂಡುಬರುವುದಿಲ್ಲ ಎಂದು ಪಾದೂರು ಗುರುರಾಜ ಭಟ್ಟರು ತಿಳಿಸಿರುತ್ತಾರೆ. ಬೆಳ್ಮಣ್ಣಿನ ಶ್ರೀ ಮಹಿಷಮರ್ಧಿನಿ ದೇವಿಯನ್ನು ‘ಅತಿನುತೇ’, ‘ವಿಂಧ್ಯವಾಸಿನಿ’ ಮತ್ತು ‘ಮುನಿಜನಸೇವಿತೆ’ ಎಂದು ಉಲ್ಲೇಖಿಸಲಾಗಿದೆ. ಈ ದೇವಾಲಯವು ಈಗಲೂ ದಟ್ಟ ಕಾಡಿನ ಪಕ್ಕದಲ್ಲಿ ಬೆಟ್ಟವೊಂದರ ತುದಿಯಲ್ಲಿದೆ. ಹಿಂದೆ ಸುತ್ತಲೂ ದಟ್ಟವಾದ ಕಾಡು ಇತ್ತೆನ್ನುವುದು ಸ್ಪಷ್ಟವಾಗಿದೆ. ಅಲ್ಲದೆ ದಕ್ಷಿಣ ದಿಕ್ಕಿನ ಕಾಡಿನೊಳಗೆ ಕೆರೆಯ ಅವಶೇಷವೂ, ದಡದಲ್ಲಿ ಮುನಿಗಳು ತಪಸ್ಸು ಮಾಡುವುದಕ್ಕೆ ಅನುಕೂಲವಾಗುವಂತಹ ರಚನೆಗಳೂ ಇವೆ ಎಂದು ಡಾ. ಬಿ ಜನಾರ್ಧನ ಭಟ್ ಅವರು ಹೇಳುತ್ತಾರೆ. ಈ ಶಾಸನದ ಶಾಪಾಶಯದಲ್ಲಿ ಉಲ್ಲೇಖಿಸಲ್ಪಟ್ಟ ವಾರಣಾಸಿ, ಶಿವಳ್ಳಿ ಮತ್ತು ಪುಣ್ಡವರ್ದನ (ಪುಂಡ್ರವರ್ಧನ) ಎಂಬ ಮೂರು ಪುಣ್ಯ ಕ್ಷೇತ್ರಗಳಲ್ಲಿ ಪುಂಡ್ರವರ್ದನವು ಬಂಗಾಳದ ಒಂದು ಪ್ರಾಂತದ ಹೆಸರು ಎಂದು ಇತಿಹಾಸಕಾರ ಡಾ. ಕೆ. ವಿ. ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ. ಇತಿಹಾಸತಜ್ಞ ಡಾ. ಪಿ. ಎನ್. ನರಸಿಂಹಮೂರ್ತಿಯವರು ಈ ಪುಂಡ್ರವರ್ಧನವು ಕಾಂತಾವರದ ಸಮೀಪ ಇರುವ ಪುಂಡರೀಕ ಕ್ಷೇತ್ರ ಎಂದು ಹೇಳುತ್ತಾರೆ. ಈ ಪುಂಡರೀಕ ಕ್ಷೇತ್ರದಲ್ಲಿ ಒಂದು ಪ್ರಾಚೀನ ಜನಾರ್ದನ ದೇವಾಲಯವಿದೆ; ಕೆಲವು ವರ್ಷಗಳ ಹಿಂದೆ ಇದು ಜೀರ್ಣೋದ್ಧಾರಗೊಂಡಿದೆ. ಈ ದಾನ ಶಾಸನವನ್ನು ಅಳಿಯುವವರು ಅಥವಾ ವಕ್ರಗೊಳಿಸುವವರು, ವಾರಣಾಸಿ ಮತ್ತು ಶಿವವಳ್ಳಿಯನ್ನು ನಾಶಗೊಳಿಸಿದ ಪಾಪಕ್ಕೂ, 21 ನರಕಕ್ಕೂ, ಸಹಸ್ರ ವರ್ಷ ಅಮೇಧ್ಯದಲ್ಲಿ ಹುಳವಾಗಿದ್ದು ಕ್ಷಯಿಸುವ ಕಷ್ಟಕ್ಕೂ ಒಳಗಾಗುವರು. ಇದನ್ನು ರಕ್ಷಿಸುವವರಿಗೆ ಅಶ್ವಮೇಧ ಫಲವೊದಗುವುದು. ಮಾತ್ರವಲ್ಲದೆ ಈ ದಾನ ಶಾಸನದ ರಕ್ಷಣೆಯಲ್ಲಿ ಮೃತನಾದವನಿಗೆ ಇಂದ್ರ ಪದವಿಯೂ ಲಭ್ಯವಾಗಿ ಆಳುವನು. ಈ ದಾನ ಶಾಸನದಿಂದ ಪಾಂಡ್ಯಕುಲವು ವೃದ್ಧಿಯಾಗುವುದು ಎಂದು ಹೇಳಲಾಗಿದೆ.

ಶಾಸನದಲ್ಲಿ ಬಳಸಿದ ವಿಶಿಷ್ಟ ಪದಪ್ರಯೋಗ: ಶಾಸನ ಉಲ್ಲೇಖಿತ ಬೆಳ್ಮಣ್ಣ ಸಭೆ ಎಂಬುದು ಬ್ರಾಹ್ಮಣರ ಸಭೆ ಎಂಬುದಾಗಿ, ಬಾಗಿನುಳ್ ಎಂಬುದಾಗಿ ಆಡಳಿತ ಕ್ಷೇತ್ರಕ್ಕೆ ಸಂಬಂಧಪಟ್ಟ ಉಲ್ಲೇಖವೆಂದು, ಪಾಣಿಗ್ರಹಾಣ ಎಂಬ ಪದವನ್ನು ದಾನ ಧಾರೆ ಎರೆಯುವುದಕ್ಕೆ, ತಯಾರಿಸು ಎಂಬರ್ಥದಲ್ಲಿ ಕಾಯಿಸು ಎಂಬ ಪದಪ್ರಯೋಗವನ್ನು ಬಳಸಿದ್ದಾರೆಂದು ಗುರುರಾಜ ಭಟ್ಟರು ತಿಳಿಸಿದ್ದಾರೆ.

ಇತರ ಕುರುಹುಗಳು: ಬೆಳ್ಮಣ್ಣು ದೇವಸ್ಥಾನದಲ್ಲಿ ಹಲವು ಪ್ರಾಚೀನತೆಯ ಕುರುಹುಗಳು ಉಳಿದಿವೆ. ಹಿಂದಿನ ಕಾಲದಲ್ಲಿ ಕಾಲುದೀಪವಾಗಿ ಬಳಸುತ್ತಿದ್ದ ಮರದ ದೀಪ, ಒಂದು ಕಲ್ಲಿನ ಮುಚ್ಚಳದಂತಹ ಮೆಟ್ಟಿಲಿನಲ್ಲಿ ಹಣ ಹಾಕಲು ಮಾಡಿದಂತಹ ಕಿಂಡಿಯಿದೆ. ಇಲ್ಲಿರುವ ಒಂದು ಅಪರೂಪದ ಶಿಲ್ಪವೆಂದರೆ ಕುಕ್ಕುಟ ಸರ್ಪ. ಹಾಗೆಯೇ ಸದಾಶಿವ ವಿಗ್ರಹವನ್ನು ಕಾಣಬಹುದು. ದೇವಸ್ಥಾನದ ಗರ್ಭಗುಡಿಯ ಸುತ್ತ ಅಪರೂಪದ ಕೆಂಪು ಕಲ್ಲಿನ ಕೆತ್ತನೆಗಳಿವೆ. ದೇವಸ್ಥಾನದ ದಕ್ಷಿಣ ಭಾಗದ ಅಡವಿಯೊಳಗೆ ಅಡಗಿರುವ ಪ್ರಾಚೀನ ಕಾಲದ ಪುಷ್ಕರಿಣಿಯನ್ನು ಜೀರ್ಣೋದ್ಧಾರ ಮಾಡಿದರೆ ಕೆಲವು ಅಪೂರ್ವ ಪ್ರಾಚೀನ ವಸ್ತುಗಳು ಸಿಗುವ ಸಾಧ್ಯತೆಯಿದೆ ಎಂದು ಡಾ. ಬಿ. ಜನಾರ್ಧನ ಭಟ್ ಅವರು ಹೇಳುತ್ತಾರೆ.

ದ್ವಿಪ್ರತಿ ಶಾಸನ: 2009 ರಲ್ಲಿ ಇದರ ದ್ವಿಪ್ರತಿಯೊಂದು ಸಿಕ್ಕಿರುವುದು ಇನ್ನೂ ಆಶ್ಚರ್ಯಕರ ಸಂಗತಿ. ಹಾಗಾಗಿ ತುಳುನಾಡಿನಲ್ಲಿ ದ್ವಿಪ್ರತಿ ಇರುವ ಪ್ರಾಚೀನ ತಾಮ್ರಶಾಸನ ಇದು. ಶಿವಮೊಗ್ಗದ ಇತಿಹಾಸ ಸಂಶೋಧಕ ಡಾ. ಖಂಡೋಬ ರಾವ್ ಅವರಿಗೆ ಕೊಳ್ಳೇಗಾಲದ ಹಳೆಯ ತಾಮ್ರದ ಪಾತ್ರೆಗಳ ವ್ಯಾಪಾರಿಯೊಬ್ಬರಿಂದ ಬೆಳ್ಳಣ್ಣು ಶಾಸನದ ಪ್ರತಿ ಲಭಿಸಿದ ಬಗ್ಗೆ ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿತ್ತು. ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ಮತ್ತು ಮಾಹಿತಿಯ ಪ್ರಕಾರ, ಇದರಲ್ಲಿಯೂ ಆಳುಪರ ಲಾಂಛನವಾದ ಜೋಡಿ ಮೀನುಗಳಿವೆ. ಆದರೆ ಒಂದೇ ತಾಮ್ರದ ಹಾಳೆಯಲ್ಲಿ ಬರೆಯಲಾಗಿದೆ. ಶಾಸನದ ಪಾಠ ಯಥಾವತ್ತಾಗಿ ಬೆಳ್ಳಣ್ಣಿನಲ್ಲಿರುವ ಶಾಸನದ ದ್ವಿಪ್ರತಿಯಾಗಿದೆ.

ಒಟ್ಟಿನಲ್ಲಿ ಬೆಳ್ಮಣ್ಣು ತಾಮ್ರಶಾಸನವು ದೇವಾಲಯದ ಪ್ರಾಚೀನತೆ ಮತ್ತು ತುಳುನಾಡು ಮತ್ತು ಕರ್ನಾಟಕದ ಇತಿಹಾಸವನ್ನು ಬೇರೊಂದು ದೃಷ್ಟಿಕೋನದಲ್ಲಿ ಅಧ್ಯಯನ ಮಾಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರೆ ತಪ್ಪಗಲಾರದು.

ಬರಹ: ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ & ವಿಶಾಲ್ ರೈ ಕೆ
(ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿಗಳು)
ಮಾಹಿತಿ: ಡಾ. ಬಿ. ಜನಾರ್ಧನ ಭಟ್
(ಸಾಹಿತಿ ಮತ್ತು ಸಂಶೋಧಕರು)

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!