ಅವಳಿಗೆ ತನ್ನ ಪತಿ ಪ್ರವಾಸಕ್ಕೆ ಕರೆದೊಯ್ಯುವುದಿಲ್ಲವೆಂದು ಬೇಸರ. ಅವನಿಗೆ ಹೆಂಡತಿ ಪ್ರೀತಿಯಿಂದ ಮಾತನಾಡಿಸುವುದಿಲ್ಲವೆಂದು ಬೇಸರ. ಹೆಂಡತಿಯ ಮನಸ್ಸಿನಲ್ಲಿ ತಾನು ಗಂಡನಿಗೆ ರುಚಿರುಚಿಯಾದ ಅಡುಗೆ ಮಾಡಿ ಹಾಕುತ್ತಾಳೆ ಎಂದು ಗಂಡನು ತನ್ನಿಂದ ಖುಷಿಯಾಗಿದ್ದಾನೆ ಎಂಬ ಭ್ರಮೆ. ಈ ಕಡೆ ಗಂಡನಾದವನು ಹೆಂಡತಿಗೆ ಬೇಕಾದಷ್ಟು ಬಟ್ಟೆ ಕೊಡಿಸುತ್ತೇನೆ ಎಂದು ಅವಳು ನನ್ನಿಂದ ಸಂತೋಷದಿಂದಿದ್ದಾಳೆ ಎಂದುಕೊಳ್ಳುತ್ತಾನೆ. ಆದರೆ ವಾಸ್ತವ ಬೇರೆನೇ ಇಬ್ಬರೂ ಖುಷಿಯಾಗಿಲ್ಲ. ಮನುಷ್ಯನಾದವನು ತನ್ನ ಒಳ್ಳೆಯ ಗುಣವನ್ನು ಮನಸ್ಸಿನಲ್ಲಿಟ್ಟುಕೊಂಡು ಅದರಿಂದ ಇನ್ನೊಬ್ಬರು ಕೂಡ ಖುಷಿಯಾಗಿದ್ದಾರೆ ಎಂದು ಭಾವಿಸುವುದು ಸಹಜ. ಆ ಒಳ್ಳೆಯತನ ಇತರರು ಅರಿತಿದ್ದಾರೆ ಎಂಬುದು ಅವನ ಅನಿಸಿಕೆ. ಆದರೆ ಜೀವನದಲ್ಲಿ ಸಂಬಂಧಗಳಲ್ಲಿ ಆಗುವುದೇ ಬೇರೆ ನಾವು ನಮ್ಮ ಒಳ್ಳೆಯ ಗುಣವನ್ನು ದೊಡ್ಡದು ಮಾಡಿ ನಮ್ಮ ಕೆಟ್ಟಗಳನ್ನು ಕಡೆಗಣಿಸುತ್ತೇವೆ. ಆದರೆ ಇತರರು ಇದಕ್ಕೆ ವಿರುದ್ಧವಾಗಿ ನಮ್ಮ ಕೆಟ್ಟ ಗುಣಗಳನ್ನು ನೆನಪಿನಲ್ಲಿಟ್ಟುಕೊಂಡು ಒಳ್ಳೆಯ ಗುಣವನ್ನು ಮರೆಯುತ್ತಾರೆ. ಇದರಿಂದ ಸಂಬಂಧಗಳು ಕೆಡುವುದು ಖಂಡಿತ.
ಪ್ರತಿ ಮನುಷ್ಯನು ಒಳ್ಳೆಯ ಹಾಗೂ ಕೆಟ್ಟ ಗುಣಗಳ ಮಿಶ್ರಣವಾಗಿರುತ್ತಾನೆ. ಅದನ್ನು ಅರಿಯುವುದು ಜಾಣತನ. ನಮ್ಮ ದೃಷ್ಟಿ ಬದಲಾಗಬೇಕಷ್ಟೇ. ಪ್ರತಿಯೊಬ್ಬರಿಗೂ ತನ್ನದೇ ಆದ ವ್ಯಕ್ತಿತ್ವವಿರುತ್ತದೆ. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದರೂ ಪ್ರಯತ್ನ ಮಾಡುವುದನ್ನು ನಿಲ್ಲಿಸಬಾರದು. ಒಳ್ಳೆಯ ಗುಣವನ್ನು ಹುಡುಕಿದರೆ ಆಗ ಒಳ್ಳೆಯದು ಮಾತ್ರ ತೋರುತ್ತದೆ. ಮನಸ್ಸಿನಲ್ಲಿ ಇತರರ ಉತ್ತಮ ನಡತೆ ಗುಣಗಳನ್ನು ತುಂಬಿರಿ ಆಗ ಅವರು ನಿಮಗಿಷ್ಟವಿಲ್ಲದ ಕೆಲಸ ಮಾಡಿದರೂ ಕೋಪ ಬರದು. ನಮ್ಮ ಮನಸ್ಸು ಕೂಡ ಶಾಂತವಾಗಿರುತ್ತದೆ. ಋಣಾತ್ಮಕ ಚಿಂತನೆಯಿಂದ ದೂರವಿರಬಹುದು.
ಮೇಲೆ ಹೇಳಿದ ದಂಪತಿಯ ವಿಷಯಕ್ಕೆ ಬರೋಣ. ಇಲ್ಲಿ ಗಂಡ ಅಥವಾ ಹೆಂಡತಿ ತನ್ನ ಸಂಗಾತಿಯನ್ನು ತನಗೆ ಇಷ್ಟವಾದ ರೀತಿಯಲ್ಲಿ ಪ್ರೀತಿ ತೋರಿಸುತ್ತಾನೆ. ಸಂಗಾತಿಯ ಖುಷಿ ಯಾವುದರಲ್ಲಿದೆ ಎಂದು ಅರಿಯುವುದಿಲ್ಲ. ಇಲ್ಲಿ ಮುಕ್ತ ಮಾತುಕತೆಯ ಅವಶ್ಯಕತೆಯಿದೆ. ನಮಗೆ ಬೇಕಾದ ರೀತಿಯಲ್ಲಿ ಪ್ರೀತಿ ತೋರಿಸದೆ ಅವರಿಗೆ ಬೇಕಾಗುವಂತಹ ಪ್ರೀತಿ ನಾವು ತೋರಿಸಿದರೆ ಒಳ್ಳೆಯದು. ಹೆಂಡತಿಯು ಗಂಡ ತಿರುಗಾಡಲು ಕರೆದುಕೊಂಡು ಹೋಗುವುದಿಲ್ಲವೆಂದು ಕೊರಗುವುದಕ್ಕಿಂತ ಗಂಡನ ಜೊತೆ ಮುಕ್ತವಾಗಿ ಮಾತನಾಡುವುದು ಹಿತಕರ. ಗಂಡನಾದವನು ಅವಳನ್ನು ಅರ್ಥ ಮಾಡಿಕೊಂಡು ಹೋಗಲು ತಯಾರಿರಬೇಕು. ಆಗಾಗ ಪ್ರವಾಸ ಹೋಗಲು ಸಾಧ್ಯವಿಲ್ಲವೆಂದು ಹೆಂಡತಿಯು ಅರ್ಥಮಾಡಿಕೊಳ್ಳಬೇಕು. ಅವಳು ಗಂಡನು ತನಗೆ ಒಳ್ಳೆಯ ಬಟ್ಟೆಯನ್ನು ತಂದುಕೊಡುವ ಗುಣವನ್ನು ಖುಷಿಯಿಂದ ಸ್ವೀಕರಿಸಿಬೇಕು. ಇಲ್ಲದಿದ್ದರೆ ಬಟ್ಟೆಗೆ ಖರ್ಚು ಮಾಡುವ ಬದಲು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಎಂದು ಮನಸ್ಸು ಬಿಚ್ಚಿ ಮಾತನಾಡುವುದು ಒಳ್ಳೆಯದು.
ಗಂಡನಿಗೆ ಬೇಕಾಗಿರುವುದು ಪ್ರೀತಿಯ ಮಾತು. ಹೆಂಡತಿ ರುಚಿಯಾದ ಅಡುಗೆಯನ್ನು ಹೊಗಳಿ ಅದರಲ್ಲಿ ಖುಷಿಪಡಿ. ರುಚಿಯಾದ ಅಡುಗೆಯ ಜೊತೆ ಎರಡು ಪ್ರೀತಿಯ ಮಾತಿದ್ದರೆ ಚೆಂದವೆಂದು ಹೆಂಡತಿಗೆ ಪ್ರೀತಿಯಿಂದ ಹೇಳಿ. ಪ್ರೀತಿಯಿಂದ ಮಾತನಾಡಿದರೆ ಮೂಕ ಪ್ರಾಣಿಗಳಿಗೂ ಅರ್ಥವಾಗುತ್ತದೆ. ಹೀಗೆ ಒಬ್ಬರನ್ನೊಬ್ಬರು ಮನಸ್ಸಿನಲ್ಲಿದ್ದನ್ನು ಹೇಳಿ ಇಬ್ಬರ ಒಳ್ಳೆಯತನವನ್ನು ಕೊಂಡಾಡಿ. ಇದೊಂದು ಉದಾಹರಣೆ ಅಷ್ಟೇ. ಜೀವನದಲ್ಲಿ ಇನ್ನೊಬ್ಬರನ್ನು ದ್ವೇಷಿಸುವುದು ಸುಲಭ ಪ್ರೀತಿಸುವುದು ಕಷ್ಟ. ಇತರರ ಭಾವನೆಗಳಿಗೆ ಬೆಲೆ ಕೊಟ್ಟರೆ ಅದಕ್ಕಿಂತ ಉತ್ತಮ ಗುಣ ಇನ್ನೊಂದಿಲ್ಲ.
-ಡಾ. ಹರ್ಷಾ ಕಾಮತ್




By
ForthFocus™