Home ಅಂಕಣ ರತನ್ ಟಾಟಾ ಮತ್ತು ನಾಯಿಗಳ ಪ್ರೀತಿ

ರತನ್ ಟಾಟಾ ಮತ್ತು ನಾಯಿಗಳ ಪ್ರೀತಿ

731
0

ಭಾರತದ ಅತೀ ಶ್ರೇಷ್ಠ ಉದ್ಯಮಿ ರತನ್ ಟಾಟಾ ಅವರ ಮಾನವೀಯ ಗುಣಗಳ ಬಗ್ಗೆ ಹತ್ತು ಹಲವು ಬಾರಿ ನಾನು ಬರೆದಿದ್ದೇನೆ. ಅವರು ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನ ಮಾಡಿದ್ದು, ಕೋರೋನ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ ದಾನ ಮಾಡಿದ್ದು… ಹೀಗೆ ನೂರಾರು ಉದಾಹರಣೆಗಳು ದೊರೆಯುತ್ತವೆ. ಇಂದು ಅದಕ್ಕೆ ಇನ್ನೊಂದು ಪುರಾವೆ ದೊರಕಿದೆ!

ರತನ್ ಟಾಟಾ ಅವರ ಜೀವಮಾನದ ಸಾಧನೆಗಳನ್ನು ಪರಿಗಣಿಸಿ 2018ರಲ್ಲಿ ಅವರನ್ನು ಸನ್ಮಾನ ಮಾಡಲು ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್ ಅವರನ್ನು ಇಂಗ್ಲೆಂಡಿಗೆ ಆಮಂತ್ರಿಸಿದ್ದರು. ಅದು ರಾಯಲ್ ಮನೆತನದ ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ಏರ್ಪಾಡಾಗಿದ್ದ ರಾಜಗೌರವದ ಸನ್ಮಾನ! ಪ್ರಿನ್ಸ್ ಚಾರ್ಲ್ಸ್ ಈ ಗೌರವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನೂರಾರು ಅತೀ ಗಣ್ಯ ವ್ಯಕ್ತಿಗಳನ್ನು ಕರೆದಿದ್ದರು. ರತನ್ ಟಾಟಾ ಅವರು ಕೂಡ ಈ ಆಮಂತ್ರಣವನ್ನು ಸ್ವೀಕರಿಸಿ ಲಂಡನ್ನಿಗೆ ಹೊರಡುವ ತಯಾರಿ ಮಾಡುತ್ತಿದ್ದರು.

ಅವರನ್ನು ಇಂಗ್ಲೆಂಡಿನಲ್ಲಿ ಸ್ವಾಗತ ಮಾಡಿ ಅವರ ಆತಿಥ್ಯದ ವ್ಯವಸ್ಥೆಯನ್ನು ಮಾಡಲು ಚಾರ್ಲ್ಸ್ ಅವರಿಂದ ನಿಯುಕ್ತರಾದವರು ಖ್ಯಾತ ಉದ್ಯಮಿಗಳು ಮತ್ತು ಅಂಕಣಕಾರರಾದ ಸುಹೇಲ್ ಸೇಥ ಅವರು. ಸುಹೇಲ್ ಅವರು ನಾಲ್ಕು ದಿನ ಮೊದಲೇ ಲಂಡನ್ನಿಗೆ ಹೋಗಿ ಟಾಟಾ ಅವರನ್ನು ಸ್ವಾಗತ ಮಾಡಲು ಸಿದ್ಧತೆ ಮಾಡುತ್ತಿದ್ದರು.

ಒಮ್ಮೆ ಸುಹೇಲ್ ಅವರು ಯಾವುದೋ ಒಂದು ಕೆಲಸದಲ್ಲಿ ಮುಳುಗಿದ್ದಾಗ ಅವರ ಮೊಬೈಲ್ ಫೋನ್ ಒಂದೇ ಸಮನೆ ಹೊಡೆದುಕೊಳ್ಳಲು ಆರಂಭವಾಯಿತು. ಸುಹೆಲ್ ಸ್ವಲ್ಪ ಹೊತ್ತಿನ ನಂತರ ಮೊಬೈಲ್ ನೋಡಿದಾಗ ರತನ್ ಟಾಟಾ ಅವರ ಹನ್ನೊಂದು ಮಿಸ್ ಕಾಲ್ ಇತ್ತು!

ಯಾಕೆಂದು ಸುಹೇಲ್ ಗಾಬರಿ ಬಿದ್ದು ಟಾಟಾ ಅವರಿಗೆ ಮರು ಕಾಲ್ ಮಾಡಿದರು. ಕಾಲ್ ಕನೆಕ್ಟ್ ಆಯಿತು. ಅಂದು ರತನ್ ಟಾಟಾ ಅವರ ಧ್ವನಿ ನಡುಗುತ್ತಿತ್ತು. ಅವರು ಹೇಳುತ್ತಾ ಹೋದರು – ಸುಹೇಲ್. ಸಾರಿ. ನಿಮಗೆ ತೊಂದರೆ ಕೊಡುತ್ತಾ ಇದ್ದೇನೆ. ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋಗಳ ಪೈಕಿ ಒಂದು ಇಂದು ತೀವ್ರವಾಗಿ ಅಸ್ವಸ್ಥ ಆಗಿದೆ. ನಿಮಗೆ ಗೊತ್ತು ನಾನು ಎಷ್ಟು ಅವುಗಳನ್ನು ಪ್ರೀತಿ ಮಾಡುತ್ತೇನೆ ಎಂದು. ಇಂಥಹ ಸಂಕೀರ್ಣ ಸನ್ನಿವೇಶದಲ್ಲಿ ನಾನು ನಾಯಿಗಳನ್ನು ಬಿಟ್ಟು ಲಂಡನ್ನಿಗೆ ಬರಲು ಸಾಧ್ಯವಿಲ್ಲ. ನೀವಿದನ್ನು ದಯವಿಟ್ಟು ಪ್ರಿನ್ಸ್ ಚಾರ್ಲ್ಸ್ ಅವರಿಗೆ ತುರ್ತಾಗಿ ತಿಳಿಸಬೇಕು ಮತ್ತು ನಾನು ಅವರ ಕ್ಷಮೆಯನ್ನು ಕೇಳುತ್ತಿದ್ದೇನೆ ಎಂದು ಕೂಡ ತಿಳಿಸಬೇಕು ಎಂದರು.

ಸುಹೇಲ್ ಅವರಿಗೆ ಏನು ಉತ್ತರ ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವರು “ರತನ್ ಜಿ. ಇದು ಸಾಮಾನ್ಯ ಕಾರ್ಯಕ್ರಮ ಅಲ್ಲ. ಇಂಗ್ಲೀಷ್ ರಾಜಮನೆತನದ ಗೌರವದ ಕಾರ್ಯಕ್ರಮ. ಸ್ವತಃ ಪ್ರಿನ್ಸ್ ಚಾರ್ಲ್ಸ್ ಮುಂದೆ ನಿಂತು ಈ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ನೂರಕ್ಕೂ ಹೆಚ್ಚಿನ ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಸ್ವತಃ ಇಂಗ್ಲೆಂಡ್ ರಾಣಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಆದ್ದರಿಂದ ನೀವು ನಾಯಿಗಳ ಬಗ್ಗೆ ಬೇರೇನಾದರೂ ವ್ಯವಸ್ಥೆಯನ್ನು ಮಾಡಿ ಲಂಡನ್ನಿಗೆ ಹೊರಡಬೇಕು ಎಂದು ವಿನಂತಿ ಮಾಡುತ್ತೇನೆ” ಎಂದರು.

ಆದರೆ ರತನ್ ಟಾಟಾ ತಮ್ಮ ನಿರ್ಧಾರವನ್ನು ಬದಲಾಯಿಸಲು ಒಪ್ಪಲಿಲ್ಲ. “ನಿಮಗೆ ಗೊತ್ತಿದೆ ನಾನು ನನ್ನ ಎರಡು ನಾಯಿಗಳನ್ನು ಎಷ್ಟು ಪ್ರೀತಿ ಮಾಡುತ್ತೇನೆ ಎಂದು. ದಯವಿಟ್ಟು ನನಗೆ ಒತ್ತಾಯ ಮಾಡಬೇಡಿ. ನನ್ನ ಮಾತುಗಳನ್ನು ಪ್ರಿನ್ಸ್ ಚಾರ್ಲ್ಸ್ ಅವರಿಗೆ ವಿನೀತವಾಗಿ ತಲುಪಿಸಿ” ಎಂದು ಫೋನ್ ಇಟ್ಟರು.

ಸುಹೇಲ್ ಅವರಿಗೆ ಈಗ ನಿಜವಾಗಿ ಉಭಯ ಸಂಕಟ ಆರಂಭವಾಯಿತು. ಅವರು ಮರುದಿನವೇ ಮುಂಜಾನೆ ಬಂಕಿಂಗ್ ಹ್ಯಾಮ್ ಅರಮನೆಗೆ ಹೋದಾಗ ಅಲ್ಲಿ ಎಲ್ಲ ಸಿದ್ಧತೆಗಳೂ ಕೊನೆಯ ಹಂತದಲ್ಲಿ ಇದ್ದವು.

ಅವರು ಸಂಕೋಚದಿಂದ ಪ್ರಿನ್ಸ್ ಚಾರ್ಲ್ಸ್ ಮುಂದೆ ಹೋಗಿ ಟಾಟಾ ಹೇಳಿದ್ದನ್ನು ತುಂಬಾ ಪ್ರೀತಿಯಿಂದ ಹೇಳಿದರು. ಅದೇ ಕಾರಣವನ್ನು ಕೂಡ ನಿವೇದನೆ ಮಾಡಿಕೊಂಡರು. ಒಮ್ಮೆ ಚಾರ್ಲ್ಸ್ ಹಣೆಯ ಮೇಲೆ ನೆರಿಗೆಗಳು ಕಂಡುಬಂದವು. ತಕ್ಷಣ ಅವರ ಮೊದಲ ಉದ್ಗಾರ – That’s the man!

ನಂತರ ಚಾರ್ಲ್ಸ್ ಹೇಳಿದರು – ‘ ರತನ್ ಅವರಿಗೆ ಬರಲು ಆಗುವುದಿಲ್ಲ ಎಂದು ನೀವು ಹೇಳಿದಾಗ ನನಗೆ ಒಮ್ಮೆ ಬೇಜಾರು ಆಯಿತು. ಆದರೆ ಅವರು ನೀಡಿದ ಕಾರಣ ನೋಡಿ ನನಗೆ ಅವರ ಬಗ್ಗೆ ತುಂಬ ಹೆಮ್ಮೆ ಅನ್ನಿಸಿತು. ನನಗೆ ಅವರ ಬಗ್ಗೆ ಇರುವ ಗೌರವ, ಪ್ರೀತಿ ಇಮ್ಮಡಿ ಆಗಿದೆ. ನೋ ಪ್ರಾಬ್ಲಂ. ಈ ಕಾರ್ಯಕ್ರಮವನ್ನು ಮುಂದಕ್ಕೆ ಹಾಕೋಣ’

ಕೊನೆಗೂ ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮ ಮುಂದೆ ನಡೆಯಲೇ ಇಲ್ಲ!

ಟಾಟಾ ಒಮ್ಮೆ ತಮ್ಮ ಎರಡು ನಾಯಿಗಳ ಬಗ್ಗೆ ಮಾಡಿದ ಟ್ವೀಟ್ ಹೀಗಿದೆ – Tito and Tango seek nothing in return for their affection other than a little love and attention. I miss them terribly when I am away!

ಯಾರು ಕೂಡ ಸುಖಾಸುಮ್ಮನೆ ದೊಡ್ಡವರು ಆಗುವುದಿಲ್ಲ! ಟಾಟಾ ಅವರಿಗೆ ತಮ್ಮ ಜೀವನದ ಆದ್ಯತೆಗಳನ್ನು ನಿರ್ಧಾರ ಮಾಡಲು ಗೊತ್ತಿದೆ ಮತ್ತು ಅವರು ತಮ್ಮ ಆದ್ಯತೆಗಳಿಂದ ಒಂದಿಷ್ಟೂ ವಿಚಲಿತ ಆಗುವುದಿಲ್ಲ. ತಮ್ಮ ಕಂಪೆನಿಯ ಪ್ರತೀ ಉದ್ಯೋಗಿಯನ್ನೂ ಅವರು ಅದೇ ಮಾನವೀಯ ಅಂತಃಕರಣದಿಂದ ನೋಡಿಕೊಳ್ಳುತ್ತಾರೆ ಎಂದು ನನಗೆ ಅನೇಕರು ಹೇಳಿದ್ದಾರೆ. ಅವರಿಗೆ ಈ ವರ್ಷ ಭಾರತ ರತ್ನ ಪ್ರಶಸ್ತಿಯು ಬಂದರೆ ಆ ಪ್ರಶಸ್ತಿಗೆ ಒಂದು ಮೌಲ್ಯ ಬರುತ್ತದೆ!

ಲೇಖನ – ರಾಜೇಂದ್ರ ಭಟ್ ಕೆ., ಶಿಕ್ಷಕರು ಮತ್ತು ಜೇಸಿಐ ರಾಷ್ಟ್ರಮಟ್ಟದ ತರಬೇತಿದಾರರು.

ಸ್ಫೂರ್ತಿ – ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಅಗ್ರ ಲೇಖನ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.