ಶಾಲಾ ಕಾಲೇಜುಗಳು ಆರಂಭವಾಗಿವೆ. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹೊಸ ಕೋರ್ಸ್ ಸೇರಿಕೊಳ್ಳುತ್ತಿದ್ದಾರೆ. ನಾವು ಯಾವುದೇ ವಿದ್ಯಾಸಂಸ್ಥೆ ಸೇರಿಕೊಳ್ಳುವಾಗ ಮಕ್ಕಳ, ಪೋಷಕರು ಅಥವಾ ಶಾಲಾ ಕಾಲೇಜುಗಳ ಗುರಿ ಒಳ್ಳೆಯ ಅಂಕಗಳನ್ನು ಪಡೆಯುವುದು ನಿಜ ಅಲ್ಲವೇ? ಆರಂಭದಿಂದ ಪರೀಕ್ಷೆ ಮುಗಿಯುವವರೆಗೆ ನಮ್ಮ ಗುರಿ ಇರುವುದು ಅಂಕಗಳ ಮೇಲೆ. ಇದು ಎಷ್ಟು ಸರಿ ಇದರ ಪರಿಣಾಮಗಳೇನು ತಿಳಿದುಕೊಳ್ಳೋಣ. ಶಿಕ್ಷಣವೆಂದರೆ ಜ್ಞಾನ ಕೌಶಲ್ಯವನ್ನು ಬೆಳೆಸುವುದು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಗುರಿ ಶಿಕ್ಷಣಕ್ಕೆ ಸೀಮಿತವಾಗಿರದೆ ಅಂಕಗಳತ್ತ ವಾಲುತ್ತಿದೆ. ಉತ್ತಮ ಅಂಕ ಪಡೆದವರ ಪಟ್ಟಿ ಪೋಸ್ಟರ್ ಗಳನ್ನ ನೋಡಿ ಮೋಹಿತರಾಗುತ್ತಿದ್ದೇವೆ. ನಮ್ಮ ಮಕ್ಕಳ ಪೋಸ್ಟರ್ ನೋಡಿದ್ರೆ ಖುಷಿಯಾಗುವುದು ಸಹಜ ಅಲ್ಲವೇ ? ಆ ಪೋಸ್ಟರ್ಗಳ ಮೇಲೆ ಅಂಕಗಳನ್ನು ನೋಡುತ್ತಾ ನಮ್ಮ ಮನದಲ್ಲಿ ಅಂಕವೇ ಮುಖ್ಯ ಎನ್ನುವ ಭಾವ ಶುರುವಾಗುತ್ತದೆ. ಆಗ ಮಕ್ಕಳಿಗೂ ಒತ್ತಡ ಪೋಷಕರಿಗೂ ಒತ್ತಡ ಶಿಕ್ಷಕರ ಮೇಲೂ ಒತ್ತಡ. ಹಾಗಾದರೆ ಅಂಕ ಬೇಡವೇ? ಖಂಡಿತವಾಗಿಯೂ ಬೇಕೇ ಬೇಕು. ಅದಿಲ್ಲದಿದ್ದರೆ ಒಳ್ಳೆಯ ಕಾಲೇಜಿನಲ್ಲಿ ಸೀಟ್ ಹೇಗೆ ಸಿಗುವುದು? ಆದರೆ ಅದೇ ನಮ್ಮ ತಲೆಯಲ್ಲಿ ಇಟ್ಟುಕೊಳ್ಳಬಾರದು.
ಒಳ್ಳೆಯ ಅಂಕ ಗಳಿಸಲು ನಮಗೆ ಮೊದಲು ವಿಷಯದ ಬಗ್ಗೆ ಜ್ಞಾನ ಬೇಕು. ಯಾವುದೇ ವಿಷಯವನ್ನು ನಾವು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? ಯಾವ ವಿಷಯ ನಮಗೆ ಚೆನ್ನಾಗಿ ನೆನಪು ಇರುತ್ತದೆ? ಯಾವ ವಿಷಯ ನೆನಪಿರುವುದಿಲ್ಲ ಯೋಚಿಸಿ. ನಮಗೆ ಇಷ್ಟವಿರುವ ವಿಷಯ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ಅಲ್ಲವೇ? ಹಾಗಾದರೆ ನಾವು ಏನು ಮಾಡಬೇಕು? ನಾವು ಕಲಿಯುತ್ತಿರುವ ವಿಷಯಗಳಲ್ಲಿ ಒಲವು ತೋರಿಸಬೇಕು. ಅದರ ಬಗ್ಗೆ ಜ್ಞಾನ ಬೆಳೆಸಬೇಕು ಅರ್ಥ ಮಾಡಿಕೊಂಡು ಓದಬೇಕು. ಕಲಿತದ್ದನ್ನು ಇತರರಿಗೆ ಕಲಿಸಬೇಕು. ಅದರ ಬಗ್ಗೆ ಚರ್ಚೆ ಮಾಡಬೇಕು, ಬರೆಯಬೇಕು, ಸುಲಭವಾಗಿ ಅರ್ಥ ಮಾಡಿಕೊಡುವ ಶಿಕ್ಷಕರ ಹತ್ತಿರ ಕೇಳಬೇಕು. ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳಿ. ಪಾಠವನ್ನು ಓದಿ, ಕೇಳಿ, ಬರಿಯುವ ಅಭ್ಯಾಸ ಮಾಡಿದರೆ ಎಲ್ಲವೂ ಸುಲಭವಾಗುತ್ತದೆ. ನೆನಪಿನಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ. ಯಾವಾಗ ವಿಷಯವನ್ನು ತಿಳಿಯುತ್ತೇವೆಯೋ ಆಗ ಒಳ್ಳೆಯ ಅಂಕ ಬಂದೇ ಬರುತ್ತದೆ. ಆದರೆ, ನಮ್ಮ ಗುರಿ ಅಂಕಗಳತ್ತವಿದ್ದರೆ ನಮಗೆ ಒತ್ತಡ ಜಾಸ್ತಿಯಾಗಿ ನಾವು ಒತ್ತಡದಲ್ಲಿಯೇ ನಮ್ಮ ಶಾಲಾ ಕಾಲೇಜು ಜೀವನ ಮುಗಿಸಬೇಕಾಗುತ್ತದೆ. ಅದರ ಬದಲು ನಮ್ಮ ಗುರಿ ಪುಸ್ತಕದಲ್ಲಿರುವ ಜ್ಞಾನದ ಮೇಲೆ ಹರಿಯಲಿ ಆಗ ಒತ್ತಡ ಇರುವುದಿಲ್ಲ ಜ್ಞಾನವೂ ಬೆಳೆಯುತ್ತದೆ. ಆತ್ಮವಿಶ್ವಾಸವು ಬೆಳೆಯುತ್ತದೆ. ನಮ್ಮ ಗಮನ ಜ್ಞಾನ ಪಡೆಯುವುದರಲ್ಲಿ ಇರಲಿ ಆಗ ಅಂಕಗಳು ಬಂದೇ ಬರುತ್ತದೆ ಅಲ್ಲವೇ?
ಡಾ. ಹರ್ಷಾ ಕಾಮತ್




By
ForthFocus™