Wednesday, December 4, 2024
Wednesday, December 4, 2024

ಶತಮಾನೋತ್ತರ ರಜತ ಮಹೋತ್ಸವ ಸಂಭ್ರಮದ ವಿಜ್ರಂಭಣೆಯಲ್ಲಿ ಉಡುಪಿಯ ನ್ಯಾಯಾಲಯ ಮತ್ತು ವಕೀಲರ ಸಂಘ

ಶತಮಾನೋತ್ತರ ರಜತ ಮಹೋತ್ಸವ ಸಂಭ್ರಮದ ವಿಜ್ರಂಭಣೆಯಲ್ಲಿ ಉಡುಪಿಯ ನ್ಯಾಯಾಲಯ ಮತ್ತು ವಕೀಲರ ಸಂಘ

Date:

125 ನೇ ವರ್ಷವನ್ನು ಕಂಡ ಇತಿಹಾಸದ ಗೌರವ ಕೆಲವೇ ನ್ಯಾಯಾಲಯಗಳ ಪೈಕಿಯಲ್ಲಿ ಉಡುಪಿ ನ್ಯಾಯಾಲಯಕ್ಕೆ ಲಭಿಸಿರುತ್ತದೆ. ಇದರ ಇತಿಹಾಸವನ್ನು ನಾವು ಅಭ್ಯಸಿಸಿದಾಗ ಪ್ರಥಮವಾಗಿ ನಮ್ಮ ಜಿಲ್ಲೆಯಲ್ಲಿ ನ್ಯಾಯಾಲಯವು ಬ್ರಿಟಿಷ್ ರಾಜರ ಸಮಯದಲ್ಲಿ ಬ್ರಹ್ಮಾವರದ ಸಮೀಪ ಇರುವ ಬಾರಕೂರಿನಲ್ಲಿ ಸ್ಥಾಪನೆಯಾಗಿರುತ್ತದೆ. ಇದೇ ನಂತರ ಜಿಲ್ಲಾ ಮುನ್ಸಿಫ್ಸ್ ನ್ಯಾಯಾಲಯ ಎಂದು ಕರೆಯಲ್ಪಟ್ಟಿತ್ತು. ಇದರ ನ್ಯಾಯವ್ಯಾಪ್ತಿ ಉಡುಪಿ, ಕಾರ್ಕಳ ಮತ್ತು ಕುಂದಾಪುರದಾಗಿತ್ತು.

1898ರಲ್ಲಿ ಜಿಲ್ಲಾ ಮುನ್ಸಿಫ್ಸ್ ನ್ಯಾಯಾಲಯ ಉಡುಪಿಗೆ ವರ್ಗಾಯಿಸಲಾಯಿತು. ಆಗ ಉಡುಪಿಯು ಅವಿಭಜಿತ ದಕ್ಷಿಣ ಕನ್ನಡದ ಭಾಗವಾಗಿತ್ತು. ಹಾಜಿ ಅಬ್ದುಲ್ಲಾರವರು ನ್ಯಾಯಾಲಯವು ಉನ್ನತ ಸ್ಥಾನದಲ್ಲಿರುವಂಥದ್ದು, ಉಡುಪಿಯಲ್ಲಿ ನ್ಯಾಯಾಲಯವು ಯಾವತ್ತಿಗೂ ಎತ್ತರದ ಸ್ಥಾನದಲ್ಲಿರಬೇಕು ಎಂದು ಉಡುಪಿಯ ಸಿಟಿಯ ಕೇಂದ್ರ ಬಿಂದುವಾದ ಎತ್ತರದ ಜಾಗವನ್ನು ನ್ಯಾಯಾಲಯ ಸ್ಥಾಪನೆ ಆಗಲು ದಾನವಾಗಿ ನೀಡಿದ್ದರು ಎನ್ನುವುದು ತಿಳಿದುಬರುತ್ತದೆ.

1920ಕ್ಕಿಂತ ಮುಂಚೆ, ಜಿಲ್ಲಾ ಮುನ್ಸಿಫ್ಸ್ರು ವಕೀಲರ ಸಂಘದ ಅಧ್ಯಕ್ಷರಾಗಿದ್ದು, ಕೃಷ್ಣಸ್ವಾಮಿ ನಾಯ್ಡು ಸ್ಥಾಪಕ ಅಧ್ಯಕ್ಷರಾಗಿರುವುದು ದಾಖಲೆಗಳಿಂದ ತಿಳಿದುಬಂದಿರುತ್ತದೆ. ಉಡುಪಿ ನ್ಯಾಯಾಲಯವು ಶತಮಾನೋತ್ಸವ ಆಚರಿಸಿದ ಸಂದರ್ಭ ಮಟ್ಟಾರು ರತ್ನಾಕರ ಹೆಗ್ಡೆಯವರು ವಕೀಲರ ಸಂಘದ ಅಧ್ಯಕ್ಷರಾಗಿದ್ದುಕೊಂಡು ವೈಭವದಿಂದ ಆಚರಿಸಲಾಗಿದ್ದು, ಅವರೇ ಇದೀಗ 125ನೇ ವರ್ಷದ ಮಹೋತ್ಸವ ಸಂಭ್ರಮದ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ರೆನೋಲ್ಡ್ ಪ್ರವೀಣ್ ಕುಮಾರ್‌ರವರು ವಕೀಲರ ಸಂಘದ ಅಧ್ಯಕ್ಷರಾಗಿ ಇದರ ಸಂಪೂರ್ಣ ಜವಾಬ್ದಾರಿಯಲ್ಲಿ ಮುಂಚೂಣಿಯಲ್ಲಿದ್ದು, ಎಲ್ಲಾ ಹಿರಿಯ ವಕೀಲರುಗಳ ಅನುಭವ ಮಂಟಪ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಈ ಶತಮಾನೋತ್ತರ ರಜತ ಮಹೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಕಿರಣ್ ಎಸ್. ಗಂಗಣ್ಣವರ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದು, ಅವರು ಮತ್ತು ಸಹ ನ್ಯಾಯಾಧೀಶರುಗಳು ಅದ್ಧೂರಿ ಕಾರ್ಯಕ್ರಮದ ಭಾಗವಾಗಿ ಶ್ರಮಿಸಿರುತ್ತಾರೆ.

ನ್ಯಾಯಾಲಯವನ್ನು ಜನರು ದೇವಾಲಯ ಎಂದು ನಂಬಿದ್ದು, ಈ 125 ವರ್ಷ ಇತಿಹಾಸವನ್ನು ಉಳಿಸಿ ಬೆಳೆಸಿಕೊಳ್ಳುವುದರಲ್ಲಿ ನ್ಯಾಯಾಧೀಶರ ಮತ್ತು ವಕೀಲರ ಪಾತ್ರ ಮಹತ್ತರವಾಗಿರುತ್ತದೆ. ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘವು ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿರುತ್ತದೆ. ಹಲವು ದಂತಕಥೆಯ ಪ್ರಸಿದ್ಧ ವಕೀಲರುಗಳನ್ನು ಉಡುಪಿ ವಕೀಲರ ಸಂಘವು ಕೊಡುಗೆಯಾಗಿ ನೀಡಿದೆ. ಇಲ್ಲಿ ಸೇವೆ ಮಾಡಿದ ಹಲವಾರು ನ್ಯಾಯಾಧೀಶರು ಉಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಪಧೋನ್ನತಿ ಹೊಂದಿರುತ್ತಾರೆ. ಅತೀ ಹೆಚ್ಚು ವಿವಾದದ ಪ್ರಕರಣಗಳನ್ನು ಬೇಗನೇ ಇತ್ಯರ್ಥಪಡಿಸುವಲ್ಲಿ ಅತೀ ಸಣ್ಣ ನ್ಯಾಯವ್ಯಾಪ್ತಿ ಹೊಂದಿರುವ ಉಡುಪಿ ಜಿಲ್ಲೆಯು, ರಾಜ್ಯದಲ್ಲೇ ಉನ್ನತ ಶ್ರೇಣಿ ಪಡೆದು ಹಲವಾರು ಭಾರೀ ಪ್ರಶಂಸೆಗೆ ಒಳಪಟ್ಟಿದೆ.

ಈ ಶತಮಾನೋತ್ತರ ರಜತ ಮಹೋತ್ಸವ ಸಮಾರಂಭದಲ್ಲಿ ಉಡುಪಿ ವಕೀಲರ ಸಂಘದಿಂದ ನ್ಯಾಯಾಧೀಶರಾಗಿ ನಿಯುಕ್ತಿಗೊಂಡು ಸೇವೆ ಸಲ್ಲಿಸುತ್ತಿರುವ 22 ನ್ಯಾಯಾಧೀಶರಿಗೆ ಹಾಗೂ ಸರಕಾರಿ ಅಭಿಯೋಜಕರು, ಸಹಾಯಕ ಅಭಿಯೋಜಕರುಗಳಿಗೆ ಸನ್ಮಾನಿಸುವ ಕಾರ್ಯಕ್ರಮ ನಡೆಯಲ್ಲಿದ್ದು, ಎರಡು ದಿನಗಳು ಉತ್ತಮ ಸೆಮಿನರ‍್ಸ್ ಉಪನ್ಯಾಸ ಹಾಗೂ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘ 125ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭವು ಈಗ ಹೊಸತನದ ಕಳೆಯೊಂದಿಗೆ ಸಾರ್ವಜನಿಕರನ್ನು ಸ್ವಾಗತಿಸಲು ಸಜ್ಜಾಗಿದೆ. ಇಂತಹ ಸಮಾರಂಭವು ನಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಬರುವ ಸುಸಂದರ್ಭವಾಗಿದ್ದು, ಅದು ನಮ್ಮೆಲ್ಲರ ಪಾಲಿಗೆ ಅವಿಸ್ಮರಣೀಯವಾಗಿದೆ.

ಆರೂರು ಸುಕೇಶ್ ಶೆಟ್ಟಿ (ವಕೀಲರು, ಉಡುಪಿ.)

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಗೋಶಾಲೆಗೆ ಬೈಹುಲ್ಲು ಕೊಡುಗೆ

ಬೆಳ್ಮಣ್, ಡಿ.3: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಬ್ರಹ್ಮಾವರ: ಗಾಳಿ ಮಳೆಗೆ ಮನೆಗಳಿಗೆ ಹಾನಿ

ಉಡುಪಿ, ಡಿ.3: ಚಂಡಮಾರುತದ ಪ್ರಭಾವದಿಂದ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ...

ಸ್ನೇಹಿತರ ಬಳಗದಿಂದ ಭಾಸ್ಕರ್ ಶೆಟ್ಟಿ ಅವರಿಗೆ ಸನ್ಮಾನ

ಗಂಗೊಳ್ಳಿ, ಡಿ.3: ಉತ್ತಮ ಸ್ನೇಹಿತರನ್ನು ಹೊಂದುವುದು ಜೀವನದಲ್ಲಿ ನಾವು ಮಾಡುವ ಅತಿ...
error: Content is protected !!