Home ಓದುಗರ ಮನದಾಳ ಹ್ಯಾಪಿ ದೋಸ್ತಿಗಳ ದಿನ ಕಣ್ರೋ

ಹ್ಯಾಪಿ ದೋಸ್ತಿಗಳ ದಿನ ಕಣ್ರೋ

576
0

ಬಾಲ್ಯದಲ್ಲಿ ಗಂಡ ಹೆಂಡತಿ ಆಟ ಆಡಿದ ಎಲ್ಲಾ ಗೆಳೆಯ ಗೆಳತಿಯರಿಗೆ! ಸಿಕ್ಕಿದ ಒಂದು ಮಾವಿನ ಮಿಡಿಯನ್ನು ಕಾಗೆ ಎಂಜಲು ಮಾಡಿ ಎಲ್ಲರಿಗೂ ಹಂಚಿ ತಿಂದ ಒಡನಾಡಿಗಳಿಗೆ! ಒಂದು ಬುತ್ತಿ ತಂಗಳು ಗಂಜಿಯನ್ನು ಕಿತ್ತಾಡಿ ಎಂಜಲು ತುತ್ತು ತಿಂದ ಹಸಿವು ಶೂರರಿಗೆ! ಪರೀಕ್ಷೆಯಲ್ಲಿ ಚೀಟಿ ಬರೆದು ಸರಿಯಾದ ಉತ್ತರವನ್ನು ಹೇಳಿಕೊಟ್ಟು ನನ್ನನ್ನು ಪಾಸ್ ಮಾಡಿದ ಜೀನಿಯಸ್ ಹುಡುಗ ಹುಡುಗಿಯರಿಗೆ! ಅಸೆಂಬ್ಲಿಯಲ್ಲಿ ಶಿಸ್ತಲ್ಲಿ ನಿಂತಿದ್ದರೂ ಕಿಸೆಯಲ್ಲಿ ಅಡಗಿದ್ದ ಹುಣಸೆ ಬೀಜಗಳನ್ನು ಪಕ್ಕದಲ್ಲಿ ನಿಂತವರಿಗೆ ಭಾರೀ ನಾಜೂಕಾಗಿ ದಾಟಿಸಿದ ಶಿಸ್ತಿನ ಸಿಪಾಯಿಗಳಿಗೆ! ಟೀಚರ್ ಹಾಜರಿ ಕರೆಯುವಾಗ ಯೆಸ್ ಮೇಡಂ ಎಂದು ಗಟ್ಟಿಯಾಗಿ ಹೇಳಿ ಗೈರು ಹಾಜರಾಗಿದ್ದ ನನ್ನ ಮಾನ ಕಾಪಾಡುತ್ತಿದ್ದ ನನ್ನ ಪ್ರಾಕ್ಸಿ ಗೆಳೆಯರಿಗೆ! ಶಾಲೆಯ ಗ್ರೌಂಡಲ್ಲಿ ಜೋರು ಮಳೆ ಬಂದಾಗಲೂ ಆಡಿ ಕ್ಲಾಸಿಗೆ ಬಂದು ಆಕ್ಷೋ ಎಂದು ನೆಗಡಿ ಹಾರಿಸಿದ ಶೀತ ವೀರರಿಗೆ! ಆಟ ಆಡುವಾಗ ಬಿದ್ದು ಗಾಯ ಆದಾಗ ಕೆಂಪು ಮಣ್ಣು ಸುರಿದು ಏನೂ ಆಗೋದಿಲ್ಲ ಕಣೋ ಎಂದು ಧೈರ್ಯ ತುಂಬಿಸಿದ ವೈದ್ಯ ಶಿಖಾಮಣಿ ಗೆಳೆಯರಿಗೆ! ಹರಿದು ಹೋದ ಶರ್ಟ್ ಮತ್ತು ಚಲ್ಲಣ ಹಾಕಿ ಶಾಲೆಗೆ ಹೋದಾಗಲೂ ಅಣಕು ಮಾಡದ ನಿಜ ದೋಸ್ತುಗಳಿಗೆ! ಟೀಚರ್ ಪ್ರಶ್ನೆ ಕೇಳಿದಾಗ ಉತ್ತರವನ್ನು ಪಿಸುಗುಟ್ಟಿ ಮಾನ ಕಾಪಾಡಿದ ಗೂಗಲ್ ಗೆಳೆಯರಿಗೆ! ಇಡೀ ತರಗತಿಯ ಕೃಶ್ ಆದ ಹುಡುಗಿಗೆ ಗಿಫ್ಟ್ ಕೊಟ್ಟು ಇಂಪ್ರೆಸ್ ಮಾಡಲು ನನಗೆ ಹಣ ಒಟ್ಟು ಮಾಡಿಕೊಟ್ಟ ದಾನ ಶೂರರಿಗೆ! ನಾನು ಶಾಲೆಗೆ ಬಾರದ ದಿನ ಕಾರ್ಬನ್ ಪೇಪರ್ ಇಟ್ಟು ನನಗೆ ನೋಟ್ಸ್ ಬರೆದು ಕೊಟ್ಟ ನನ್ನ ಪರೋಪಕಾರಿ ಸ್ನೇಹಿತರಿಗೆ!

ಟೀಚರ್ ಮತ್ತು ಮೇಷ್ಟ್ರು ಎಲ್ಲರ ಧ್ವನಿಗಳನ್ನು, ಅವರ ನಡಿಗೆಯನ್ನು, ನಗೆಯನ್ನು ಚಂದವಾಗೀ ಕಾಪಿ ಮಾಡಿ ನಮ್ಮನ್ನು ನಗಿಸುತ್ತಿದ್ದ ಮಿಮಿಕ್ರಿ ಕಲಾವಿದರಿಗೆ! ಟೀಚರ್ ಬೋರ್ಡಿನಲ್ಲಿ ಪಾಠ ಮಾಡುತ್ತ ಇರುವಾಗ ಕೊನೆಯ ಬೆಂಚಿನಲ್ಲಿ ಕುಳಿತು ಅದೇ ಟೀಚರ್ ಚಿತ್ರವನ್ನು ಬಿಡಿಸುತ್ತ ಇದ್ದ ಮಹಾ ಕಲಾವಿದರಿಗೆ! ರೇಸನಲ್ಲಿ ಗೆಲ್ಲುವ ಸಾಮರ್ಥ್ಯ ಇದ್ದರೂ ಬೇಕೆಂದೇ ಬೀಳುವ ನಾಟಕ ಮಾಡಿ ನನ್ನ ಗೆಲ್ಲಿಸಿದ ಹೀರೋಗಳಿಗೆ! ವಾರ್ಷಿಕೋತ್ಸವದ ನಾಟಕದಲ್ಲಿ ನನ್ನ ಮುಖಕ್ಕೆ ಬಣ್ಣ ಹಚ್ಚಿ ಕೊಂಕು ಮಾಡಿದ ಕೊಂಕೆಗಳಿಗೆ! ತರಗತಿಯಲ್ಲಿ ನನ್ನ ಹೆಸರು ಬರೆದು ಮೇಷ್ಟ್ರಿಗೆ ಚಾಡಿ ಹೇಳಿ, ಪೆಟ್ಟು ತಿನ್ನಿಸಿ ಆಮೇಲೆ ಸಾರಿ ಕಣೋ ಎಂದು ಕಣ್ಣೀರು ಒರೆಸಿದ ಹೃದಯವಂತ ಗೆಳೆಯರಿಗೆ! ಆಟೋಗ್ರಾಫ್ ಪುಸ್ತಕದಲ್ಲಿ ಚಂದ ಚಂದ ಕವನಗಳ ಬರೆದು ಕೊನೆಗೆ ನಿನ್ನ ಮದುವೆಗೆ ಹೇಳುವುದನ್ನು ಮರೆಯಬೇಡ ಎಂದು ಬರೆದ ಕವಿಗಳಿಗೆ!

ನೆಲ ನೋಡಿ ಮಾತನಾಡುತ್ತ, ಕಾಲಿನ ಹೆಬ್ಬೆರಳಲ್ಲಿ ಅರ್ಧ ವೃತ್ತ ಬಿಡಿಸುತ್ತಿದ್ದ ನಾಚಿಕೆಯ ಹುಡುಗಿಯರಿಗೆ! ಇಡೀ ವರ್ಷ ಸಿಟ್ಟು ಮಾಡಿಕೊಂಡು ಮಾತೇ ಆಡದಿದ್ದರೂ ಕೊನೆಯ ದಿನ ನನ್ನನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ಹೃದಯ ಸ್ನೇಹಿತರಿಗೆ! ಸೇಂಡಾಫ್ ಕಾರ್ಯಕ್ರಮದಲ್ಲಿ ಯಾರದೋ ವಾಚ್ ಕಟ್ಟಿಕೊಂಡು ಬಂದು ಕೈ ಮೇಲೆ ಕಟ್ಟಿಕೊಂಡು ಫೋಟೋಕ್ಕೆ ಪೋಸ್ ಕೊಟ್ಟ ಪೋಸ್ ವೀರರಿಗೆ!

ಹೀಗೆ ಏನೆಲ್ಲಾ ಕನಸು ಕಟ್ಟಿದ, ಪುಟ್ಟ ಹೃದಯಗಳಲ್ಲಿ ಪ್ರೀತಿ ಹಂಚಿದ ನನ್ನ ಎಲ್ಲಾ ಕಾಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯ ಸ್ನೇಹಿತರಿಗೆ ಫ್ರೆಂಡಶಿಪ್ ಡೇಯ ಶುಭಾಶಯ.

ನಿಮ್ಮ ಗೆಳೆಯ ರಾಜೇಂದ್ರ
ಫೋಟೋ ಕೃಪೆ – ನಿರಂಜನ್ ಜೈನ್, ದ್ವಾರಕಾ ಸ್ಟುಡಿಯೋ, ಕಾರ್ಕಳ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.