Home ಓದುಗರ ಮನದಾಳ ಅಪಘಾತ ವಲಯವಾಗುತ್ತಿರುವ ಯಡ್ತರೆ, ನಾಕಟ್ಟೆ ರಾಷ್ಟ್ರೀಯ ಹೆದ್ದಾರಿ!

ಅಪಘಾತ ವಲಯವಾಗುತ್ತಿರುವ ಯಡ್ತರೆ, ನಾಕಟ್ಟೆ ರಾಷ್ಟ್ರೀಯ ಹೆದ್ದಾರಿ!

2080
0

ಬೈಂದೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಪಘಾತಗಳು ಇತ್ತೀಚೆಗೆ ಹೆಚ್ಚುತ್ತಿವೆ. ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ, ಅವೈಜ್ಞಾನಿಕ ಕಾಮಗಾರಿ ಒಂದೆಡೆಯಾದರೆ, ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಬೀಡಾಡಿ ದನಗಳ ಹಾವಳಿ.

ಅವೈಜ್ಞಾನಿಕ ಕಾಮಗಾರಿಗೆ ಪ್ರಮುಖ ಉದಾಹರಣೆಯೆ ಬೈಂದೂರಿನ ಒತ್ತಿನೆಣೆ. ಇಲ್ಲಿನ ಸಮಸ್ಯೆಗೆ ಇನ್ನೂ ಸರಿಯಾಗಿ ಪರಿಹಾರ ದೊರಕಿಲ್ಲ. ಇದರ ನಡುವೆ ಬೈಂದೂರಿನ ಯಡ್ತರೆ ಹಾಗೂ ನಾಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದರ ಹಿಂದೆ ಒಂದು ಎಂಬಂತೆ ಅಪಘಾತಗಳು ಸಂಭವಿಸುತ್ತಲೆ ಇದ್ದು ಈ ಭಾಗ ದಿನೇ ದಿನೇ ಅಪಘಾತಗಳಿಂದಲೆ ಸುದ್ದಿಯಾಗುತ್ತಿದೆ.’

ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳು ಇಲ್ಲದಿರುವುದು ಹೆಚ್ಚುತ್ತಿರುವ ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ಸಂಜೆ ರಸ್ತೆ ಸಂಚಾರ ದುಸ್ತರವಾಗಿದೆ. ಕತ್ತಲ ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಮಲಗುವ, ಅಡ್ಡಾ ದಿಡ್ಡಿಯಾಗಿ ಸಂಚರಿಸುವ ಬೀಡಾಡಿ ದನಗಳು ಸರಿಯಾಗಿ ವಾಹನ ಸವಾರರ ಗಮನಕ್ಕೆ ಬಾರದೆ ಇಲ್ಲಿ ಹಲವಾರು ಅಪಘಾತಗಳು ಸಂಭವಿಸಿದ್ದು ಅಪಾಯ ಆಹ್ವಾನಿಸುತ್ತಿದೆ.

ಇಷ್ಟೆ ಅಲ್ಲದೆ ಸೈಕಲ್ ಸವಾರರು, ಪಾದಾಚಾರಿಗಳಿಗೂ ಕೂಡ ಈ ಮಾರ್ಗ ಅಪಾಯಕಾರಿಯಾಗಿ ಪರಿಣಮಿಸಿದೆ. ಆದರೂ ಕೂಡ ಇಲ್ಲಿ ಬೀದಿ ದೀಪ ಅಳವಡಿಸುವ ಕುರಿತು ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿಲ್ಲ. ಬೈಂದೂರು ನಾಕಟ್ಟೆಯಿಂದ ಸುಮಾರು 2 ಕಿ.ಮಿ ಉದ್ದಕ್ಕೂ ಬೀದಿ ದೀಪದ ವ್ಯವಸ್ಥೆಯಿಲ್ಲ. ಬೈಂದೂರು ತಾಲೂಕಿನ ಹಲವೆಡೆ ಅಲ್ಲಲ್ಲಿ ಇದೆ ಸಮಸ್ಯೆಗಳಿದ್ದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಇಲ್ಲಿನ ನಾಕಟ್ಟೆ ಸೇತುವೆ ಅಕ್ಕ ಪಕ್ಕ ಅಪಘಾತಕ್ಕೆ ಹಲವಾರು ದನಗಳು ಸಾವನ್ನಪ್ಪುತ್ತಿದ್ದು ಈ ದನಗಳಿಗೆ ಗೋಶಾಲೆ ಮತ್ತಿತರ ಪರ್ಯಾಯ ವ್ಯವಸ್ಥೆ ಕೂಡ ಆಗಬೇಕಿದೆ.

ಹೆದ್ದಾರಿ ಗುತ್ತಿಗೆ ಪಡೆದವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಕಾರ್ಯಪ್ರವೃತ್ತರಾಗಲು ಮೀನ ಮೇಷ ಎಣಿಸುತ್ತಿರುವುದು ಬೇಸರದ ಸಂಗತಿ. ಬೀದಿ ದೀಪವಿಲ್ಲದ ಹೆದ್ದಾರಿ ಒಂದೆಡೆಯಾದರೆ ಇಲ್ಲಿ ಅಪಘಾತದಿಂದ ಸತ್ತು ಬೀಳುವ ದನಗಳನ್ನ ಒಂದು ದಿನ ಕಳೆದರೂ ಅವುಗಳನ್ನು ಹೆದ್ದಾರಿಯಿಂದ ತೆರವು ಮಾಡುವ ಕಾರ್ಯಕ್ಕೆ ಮುಂದಾಗುತ್ತಿಲ್ಲ.

ಈ ಕುರಿತು ಇತ್ತೀಚೆಗೆ ಘಟನಾ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಇಲ್ಲಿನ ಶಿರೂರು ಬಳಿ ಮೃತಪಟ್ಟ ದನವನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯುದ್ದಕ್ಕೂ ಅಮಾನವೀಯ ರೀತಿಯಲ್ಲಿ ಎಳೆದೋಯ್ದ ಘಟನೆ ರಾಜ್ಯದಾದ್ಯಂತ ಸುದ್ದಿಯಾಗಿ ಪ್ರತಿಭಟನೆಗಳೂ ನಡೆದಿತ್ತು.

ಜನರ ತಾಳ್ಮೆಯ ಕಟ್ಟೆಯೊಡೆಯುವ ಮುನ್ನ ಸಂಬಂಧಪಟ್ಟವರು ಇಲ್ಲಿನ ಅವ್ಯವಸ್ಥೆಗೊಂದು ಮುಕ್ತಿ ಕಾಣಿಸಬೇಕಿದೆ. ಇಲ್ಲದೆ ಹೋದರೆ ಜನ ತಾಲೂಕಿನಾದ್ಯಂತ ಬೀದಿಗಿಳಿದು ಪ್ರತಿಭಟಿಸುವ ದಿನ ದೂರವಿಲ್ಲ. ಸಂಬಂಧಪಟ್ಟವರು ಇನ್ನಾದರೂ ಈ ಕುರಿತು ಎಚ್ಚೆತ್ತುಕೊಂಡು ಅವ್ಯವಸ್ಥೆ ಸರಿಪಡಿಸಲಿ ಎಂಬುದು ಸಾರ್ವಜನಿಕರ ಆಗ್ರಹ.

ರವಿರಾಜ್ ಬೈಂದೂರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.