Home ಓದುಗರ ಮನದಾಳ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ- ನಿಲ್ಲದ ಅಪಾಯ ಭೀತಿ!

ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ- ನಿಲ್ಲದ ಅಪಾಯ ಭೀತಿ!

1511
0

ಬೈಂದೂರು: ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಇಂದು ನಿನ್ನೆಯದಲ್ಲ! ಚತುಷ್ಪಥ ರಸ್ತೆ ನಿರ್ಮಾಣವಾಗುವುದಕ್ಕೂ ಮುಂಚೆಯೇ ಇಲ್ಲಿನ ತಿರುವು ಅಪಘಾತದ ಹೆದ್ದಾರಿಯಾಗಿ ಮಾರ್ಪಟ್ಟಿತ್ತು. ಒಂದು ಕಡೆ ಪ್ರಪಾತ ಇನ್ನೊಂದು ಕಡೆ ಗುಡ್ಡ ಇದರ ನಡುವಿನ ತಿರುವಿನ ಭೂ ಪ್ರದೇಶದಲ್ಲಿ ರಸ್ತೆ ಹಾದು ಹೋಗಿತ್ತು. ಇಲ್ಲಿ ಆಗಾಗ ಭೀಕರ ಅಪಘಾತಗಳು ಸಂಭವಿಸಿ ಇದು ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿತ್ತು. ಇಲ್ಲಿ ನಡೆದ ಟ್ಯಾಂಕರ್ ಅಪಘಾತಗೊಂಡು ಹೊತ್ತಿ ಉರಿದು ಚಾಲಕ ಸಜೀವ ದಹನವಾದ ಘಟನೆ, ಶಾಲಾ ವಾಹನ ಪಲ್ಟಿಯಾಗಿ ಇನ್ನೇನು ಪ್ರಪಾತಕ್ಕೆ ಬೀಳುವಲ್ಲಿ ತಪ್ಪಿದ ಅನಾಹುತ ಇಂತಹ ಹಲವಾರು ಗಂಭೀರ ಘಟನೆಗಳು ಇಲ್ಲಿನ ಜನರ ಮನದಲ್ಲಿ ಇಂದಿಗೂ ಭೀತಿ ನಿರ್ಮಿಸಿದೆ.

ಚತುಷ್ಪಥ ಹೆದ್ದಾರಿಯಾದ ನಂತರವು ತಪ್ಪದ ಗೋಳು:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ ಚಾಲನೆ ಸಿಕ್ಕ ನಂತರ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ತಿರುವಿನ ದಿಕ್ಕನ್ನೆ ಬದಲಾಯಿಸಿ ಒತ್ತಿನೆಣೆ ರಾಘವೇಂದ್ರ ಮಠದ ಎದುರಿನಿಂದ ಗುಡ್ಡದ ಮೇಲೆ ಹಾದು ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಗುಡ್ಡವನ್ನು ಮದ್ಯ ಭಾಗದಲ್ಲಿ ಕೊರೆದು ಸಮತಟ್ಟಾದ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಂತೆ ಮಾಡಲಾಯಿತಾದರೂ ಈ ಕಾಮಗಾರಿ ಅವೈಜ್ಞಾನಿಕ ಎಂದು ಸ್ಥಳೀಯರ ವಿರೋಧ ವ್ಯಕ್ತವಾಯಿತು.

ಆದರೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಗುತ್ತಿಗೆ ಸಂಸ್ಥೆ ಗುಡ್ಡ ಕೊರೆದು ಕಾಮಗಾರಿ ಮುಂದುವರಿಸಿದ ಪರಿಣಾಮ ಕಳೆದ ಐದಾರು ವರ್ಷಗಳಿಂದ ಮಳೆಗಾಲದಲ್ಲಿ ಗುಡ್ಡ ಕುಸಿತ ಉಂಟಾಗಿ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಈಗಲೂ ಅಲ್ಲಲ್ಲಿ ಗುಡ್ಡ ಕುಸಿಯುದು ನಿಂತಿಲ್ಲ. ಈ ನಡುವೆ ಇಲ್ಲಿ ಹೊಸ ರಸ್ತೆಯಾದ ನಂತರ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಿಲ್ಲ.

ಭಟ್ಕಳದಿಂದ ಬೈಂದೂರಿಗೆ ಬರುವ ಮಾರ್ಗ ಎತ್ತರದಲ್ಲಿದ್ದರೆ ಬೈಂದೂರಿನಿಂದ ಭಟ್ಕಳಕ್ಕೆ ಹೋಗುವ ಮಾರ್ಗ ತಗ್ಗು ಪ್ರದೇಶದಲ್ಲಿದ್ದು ತಿರುವಿನ ಎತ್ತರದ ಪ್ರದೇಶದಲ್ಲಿ ಸಂಚರಿಸುವ ವಾಹನ ಪಲ್ಟಿಯಾದರೆ ತಗ್ಗು ಪ್ರದೇಶದ ರಸ್ತೆಗೆ ಬಿದ್ದು ಅಲ್ಲಿ ಚಲಿಸುವ ವಾಹನಗಳಿಗೆ ಅಪಾಯ ತಪ್ಪಿದ್ದಲ್ಲ. ಸರಾಗ ನೀರು ಹರಿಯುವುದಕ್ಕೂ ಅಥವಾ ಇನ್ಯಾವ ಉದ್ದೇಶಕ್ಕೊ ಈ ರೀತಿ ಎತ್ತರ ತಗ್ಗಿನ ರಸ್ತೆ ನಿರ್ಮಾಣ ಮಾಡಲಾಗಿದೆಯೊ ಗೊತ್ತಿಲ್ಲ ಆದರೆ ಈ ವಾರದಲ್ಲಿಯೇ ಎರಡು ಅಪಘಾತಗಳು ನಡೆದಿದ್ದು ತಿಂಗಳಲ್ಲಿ ಇಂತಹ ಹಲವಾರು ಘಟನೆಗಳು ನಡೆಯುತ್ತದೆ.

ಒಂದೆಡೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಾಗ ಗುಡ್ಡ ಕುಸಿತ, ಸಂಚಾರ ಅಡಚಣೆ, ಇನ್ನೊಂದೆಡೆ ಆಗಾಗ ನಡೆಯುವ ಭೀಕರ ಅಪಘಾತಗಳು ಇಲ್ಲಿನ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ರಾಘವೇಂದ್ರ ಮಠ, ಮಹಾಸತಿ ಅಮ್ಮನವರ ದೇವಾಲಯ ಮುಂತಾದ ಪ್ರಮುಖ ಸ್ಥಳಗಳು ಇದೇ ಭಾಗದಲ್ಲಿದ್ದು ಸಂಚರಿಸುವ ಸಾರ್ವಜನಿಕರು ಸೇರಿದಂತೆ ಸುತ್ತಲಿನ ನಿವಾಸಿಗಳಿಗೆ ಗುಡ್ಡ ಕುಸಿತದ ಭೀತಿ ಇದೆ.

ಸಂಭಂದಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಂಭಂದಿಸಿದ ಗುತ್ತಿಗೆ ಸಂಸ್ಥೆ ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿಯಲ್ಲಿ ಅದಕ್ಕೊಂದು ಪರಿಹಾರ ಒದಗಿಸಬೇಕಾದ ಅನಿವಾರ್ಯತೆ ಇದ್ದು, ಗುಡ್ಡ ಉಳಿಸುವ ನಿಟ್ಟಿನಲ್ಲಿ ಹಾಗೂ ಅಪಘಾತ, ಅಪಾಯಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸಂಬಂಧಪಟ್ಟವರು ಕಾರ್ಯಪ್ರವೃತ್ತರಾಗಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ.

ರವಿರಾಜ್ ಬೈಂದೂರು
(ಯುವ ಬರಹಗಾರ)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.