ಯು.ಬಿ.ಎನ್.ಡಿ., ಮೇ 8: ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಭಾರತ ಸರ್ಕಾರ ಗುರುವಾರ ಹೇಳಿದೆ. ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪಾಕಿಸ್ತಾನ ಮೇ 07-08ರ ರಾತ್ರಿ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ಸರ್ಕಾರ ಹೇಳಿದೆ. ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಇವುಗಳನ್ನು ತಟಸ್ಥಗೊಳಿಸಿವೆ ಎಂದು ಸರ್ಕಾರ ಹೇಳಿದೆ. ಭಾರತದ ಕಡೆಗೆ ಬರುತ್ತಿದ್ದ ಪಾಕ್ ಕ್ಷಿಪಣಿಗಳನ್ನು ಭಾರತೀಯ ವಾಯುಪಡೆಯ S-400 ಸುದರ್ಶನ ಚಕ್ರ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಗುರಿಗಳನ್ನು ಯಶಸ್ವಿಯಾಗಿ “ತಟಸ್ಥಗೊಳಿಸಿದೆ”.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಾಜೌರಿ ವಲಯಗಳಲ್ಲಿನ ಪ್ರದೇಶಗಳಲ್ಲಿ ಪಾಕಿಸ್ತಾನವು ನಿಯಂತ್ರಣ ರೇಖೆಯಾದ್ಯಂತ ಮಾರ್ಟರ್‌ಗಳು ಮತ್ತು ಹೆವಿ-ಕ್ಯಾಲಿಬರ್ ಫಿರಂಗಿಗಳನ್ನು ಬಳಸಿಕೊಂಡು ತನ್ನ ಅಪ್ರಚೋದಿತ ಗುಂಡಿನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಸರ್ಕಾರ ತಿಳಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ಮೂವರು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ ಹದಿನಾರು ಅಮಾಯಕರು ಬಲಿಯಾಗಿದ್ದಾರೆ. ಭಾರತದ ತೀವ್ರ ಸ್ವರೂಪದ ಪ್ರತಿದಾಳಿಗೆ ಪಾಕ್ ತನ್ನ ಗುಂಡಿನ ದಾಳಿಯನ್ನು ನಿಲ್ಲಿಸಿದೆ ಎಂದು ತಿಳಿದುಬಂದಿದೆ.




By
ForthFocus™