ಪರ್ತಗಾಳಿ, ಡಿ.14: ಗುರುವಿಲ್ಲದ ಜೀವನ ಅಸಾಧ್ಯವಾಗಿದ್ದು, ಉತ್ತಮ ಹಾಗೂ ಅರ್ಥಪೂರ್ಣ ಜೀವನಕ್ಕಾಗಿ ಆಧ್ಯಾತ್ಮಿಕ ಆಶೀರ್ವಾದ ಮತ್ತು ಪೂರ್ವ ಜನ್ಮದ ಸಾಧನೆ ಅತಿ ಮುಖ್ಯ ಎಂದು ಶ್ರೀ ಚಿತ್ರಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹೇಳಿದರು. ಇಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಜೀವೋತ್ತಮ ಸಭಾ ಮಂಟಪದಲ್ಲಿ ನಡೆದ ಸಾರ್ಧ ಪಂಚಶತಮಾನೋತ್ಸವ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಬುದ್ಧಿ-ವಿಚಾರ ಜಾಗೃತಗೊಳ್ಳಲು, ವಿವೇಕ ಮೂಡಲು ಹಾಗೂ ಭಕ್ತಿಗೆ ಗುರುವಿನ ಅನುಗ್ರಹವೇ ಮೂಲಾಧಾರ ಎಂದರು. ಮೋಕ್ಷ ಪಡೆಯಲು ದೇವರನ್ನು ತಲುಪಬೇಕು, ಅದಕ್ಕೆ ಗುರುಪರಂಪರೆಯೇ ರಾಜಮಾರ್ಗ ಎಂದು ತಿಳಿಸಿದರು.
ಬೃಹತ್ ಕಾರ್ಯ, ಯುವ ಶಕ್ತಿಯ ಶ್ಲಾಘನೆ: ಗೋವಾ ಮಠದಲ್ಲಿ ನಡೆಯುತ್ತಿರುವ ಪುನರುಜ್ಜೀವನ ಕಾರ್ಯವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ ಶ್ರೀಗಳು, ಇಷ್ಟು ಬೃಹತ್ ಕಾರ್ಯ ಮಾಡಲು ಸಾಧಾರಣ ಮನುಷ್ಯರಿಂದ ಸಾಧ್ಯವಿಲ್ಲ; ಇದು ದೈವ ಇಚ್ಛೆ. ಪ್ರತಿದಿನ 5000ದಷ್ಟು ಕಾರ್ಯಕರ್ತರು ಮತ್ತು ಸೇವಾಕರ್ತರು ಧಾರ್ಮಿಕ ಕೈಂಕರ್ಯಗಳಲ್ಲಿ ನಿರತರಾಗಿರುವುದು ಆಶ್ಚರ್ಯ ತಂದಿದೆ ಎಂದರು. ಜಗತ್ತು ಆಧುನೀಕರಣಗೊಳ್ಳುತ್ತಿದ್ದರೂ ನಮ್ಮ ಸಮಾಜದ ಯುವ ಜನಾಂಗ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಿರುವುದು ಅತೀವ ಸಂತೋಷದ ವಿಷಯ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ರಾಮನಾಮ ಜಪ ನಡೆಯುತ್ತಿರುವುದನ್ನು ಅವರು ಸ್ಮರಿಸಿದರು.
ಶ್ರೀಮದ್ ವಿದ್ಯಾಧೀಶರಿಗೆ ಪ್ರಶಂಸೆ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಉಜ್ವಲ ಪರಂಪರೆ ಇದೆ. ಇಲ್ಲಿ ಅಪೇಕ್ಷಿತ ಕಾರ್ಯ ಸಿದ್ಧಿಸುತ್ತದೆ. ಈ ಮಠಕ್ಕೆ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಂತಹ ಯೋಗ್ಯ ಮಠಾಧಿಪತಿಗಳು ದೊರೆತಿದ್ದು ದೈವ ಇಚ್ಛೆಯೇ ಸರಿ. ಸಮಾಜದ ಸಂಘಟನೆಯಿಂದಾಗಿ ಇಂತಹ ದಿವ್ಯ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಪ್ರಶಂಶಿಸಿದರು.
ಚಿತ್ರಾಪುರ ಮಠದ ಸಹಕಾರ ನೆನೆದ ಗೋಕರ್ಣ ಮಠಾಧೀಶರು: ಗೋಕರ್ಣ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ಆಶೀರ್ವಚನ ನೀಡಿ ನಮ್ಮ ಸಂಕಲ್ಪದ ಶ್ರೀರಾಮನಾಮ ತಾರಕ ಮಹಾಮಂತ್ರದ ಜಪ ಅಭಿಯಾನಕ್ಕೆ ಚಿತ್ರಾಪುರ ಮಠದ ಕೊಡುಗೆಯೂ ಅನನ್ಯ. ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೂ ಶ್ರೀಗಳ ಶಿಷ್ಯವೃಂದ ಅವಿರತವಾಗಿ ಶ್ರಮಿಸಿ ಯಶಸ್ಸಿಗೆ ಕಾರಣವಾಗಿದೆ. ಎಲ್ಲಿಯೂ ಗೋಕರ್ಣ ಮಠವೆಂದು ತಾರತಮ್ಯ ಮಾಡದೆ ಸಂಪೂರ್ಣವಾಗಿ ತೊಡಗಿಕೊಂಡು ಶ್ರೀಮಠದ ಹಲವು ಶಷ್ಯರು ಯೋಗದಾನ ನೀಡಿದ್ದಾರೆ. ಅದಕ್ಕೆ ಪರಮಪೂಜ್ಯ ಸ್ವಾಮಿಜಿಗಳಾದ ಶ್ರೀಮದ್ ಶಂಕರಾಶ್ರಮ ಸಧ್ಯೋಜಾತ ಶ್ರೀಗಳು ನೀಡಿದ ಸಂಸ್ಕಾರವೆ ಕಾರಣ. ಈ ಹಿಂದೆಯೂ 525ನೇ ವರ್ಷದ ಕಾರ್ಯಕ್ರಮಕ್ಕೂ ಶ್ರೀಗಳು ಸಾನಿಧ್ಯ ವಹಿಸಿ ಅಂದಿನ ಕಾರ್ಯಕ್ರಮಕ್ಕೂ ಮೆರಗು ತಂದಿದ್ದರು ಎಂದು ತಮ್ಮ ಪ್ರೀಯ ಗುರುವರ್ಯರನ್ನು ನೆನಸಿಕೊಂಡರು. ಭವ್ಯ, ದಿವ್ಯ ದಕ್ಷಿಣದ ಅಯೋಧ್ಯಾ ಎಂದು ಪ್ರಖ್ಯಾತಗೊಳ್ಳಲು ದಾನಿಗಳು, ಆರ್ಕಿಟೆಕ್ಟಗಳು, ಇಂಜೀನೀಯರಗಳು, ಅಧಿಕಾರಿಗಳು ಸೇರಿದಂತೆ ಸಹಸ್ರಾರು ಜನರ ಶ್ರಮವಿದ್ದು ಇದರ ಶ್ರೇಯವೆನಿದ್ದರೂ ಅದು ಅವರಿಗೆ ಸಲ್ಲಲಿದೆ ಎಂದು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಮಠದ ವಾಸ್ತು ನಿರ್ಮಾಣಕ್ಕೆ ಸಹಕಾರ ನೀಡಿದ ಸೇವಾಕರ್ತರಿಗೆ ಉಭಯ ಶ್ರೀಗಳ ಸಾನಿಧ್ಯದಲ್ಲಿ ಗೌರವಾರ್ಪಣೆ ಮಾಡಲಾಯಿತು.
ಮಠದ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ಡೆಂಪೋ ಸ್ವಾಗತಿಸಿದರು. ರಾಮಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಮೂರ್ತಿ ಅನಂತ ಭಟ್ ಮತ್ತು ನರಸಿಂಹ ಭಟ್ ತಂಡ ವೇದಘೋಷ ಮೊಳಗಿಸಿತು. ಎಸ್‌ವಿಸಿ ಬ್ಯಾಂಕ್‌ನ ನಿರ್ದೇಶಕರಾದ ರಘುನಂದನ್ ಅವರು ಮಾತನಾಡಿದರು.




By
ForthFocus™