ಪತಿಯ ಸಾವಿನಿಂದ ನೊಂದು ಅತಂತ್ರಳಾದ ಮಹಿಳೆಯೋರ್ವಳು ಒಂಟಿಯಾಗಿದ್ದು ತೀರಾ ಮಾನಸಿಕ ಅಸ್ವಸ್ಥಳಾಗಿದ್ದು ವಿಷಯ ತಿಳಿದ ವಿಶು ಶೆಟ್ಟಿಯವರು ಕೋಟ ಠಾಣೆಯ ಎ.ಎಸ್.ಐ. ಮುಕ್ತಾರವರ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಘಟನೆಯ ವಿವರ: ಮಹಿಳೆಯ ಪತಿ ಕೃಷ್ಣಮೂರ್ತಿ ಹೊಳ್ಳ ಮೇ 17ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಈ ದಂಪತಿಗಳ ಪ್ರೇಮ ವಿವಾಹವಾಗಿದ್ದು ಮಕ್ಕಳಿರಲಿಲ್ಲ. ಮದುವೆಗೆ ಎರಡು ಕುಟುಂಬಗಳ ಸಮ್ಮತಿ ಇರಲಿಲ್ಲ ಎಂದು ತಿಳಿದು ಬಂದಿದೆ. ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಪತಿ ನಿಧನದ ನಂತರ ಪತ್ನಿ ಏಕಾಂಗಿಯಾಗಿದ್ದು ಸಂಬಂಧಿಕರ ಸ್ಪಂದನೆ ಇರದೇ ಇರುವುದರಿಂದ ಮಹಿಳೆ ತೀರಾ ಮನನೊಂದು ಮಾನಸಿಕವಾಗಿ ಅಸ್ವಸ್ಥಳಾಗಿ, ಅಡುಗೆ ಕೂಡ ಮಾಡದೆ ಒಂಟಿಯಾಗಿ ಅಸಹಾಯಕ ಬದುಕು ಸಾಗಿಸುತ್ತಿದ್ದರು. ನೆರೆಮನೆಯವರು ಆಹಾರ ನೀಡಿ ಸಂತೈಸುತ್ತಿದ್ದರು. ಇದೀಗ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು ಸ್ಥಳೀಯರು ವಿಶು ಶೆಟ್ಟಿಯವರಲ್ಲಿ ಮಹಿಳೆಯ ರಕ್ಷಣೆಗೆ ನೆರವು ಕೇಳಿದ್ದಾರೆ. ಕೂಡಲೇ ವಿಶು ಶೆಟ್ಟಿಯವರು ಕೋಟ ಠಾಣೆಯ ಎ.ಎಸ್.ಐ. ಮುಕ್ತಾರವರೊಂದಿಗೆ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯ ಸಂಬಂಧಿಕರು ಸ್ಪಂದಿಸದೆ ಇರುವುದು ಖಂಡನೀಯ. ಭವಿಷ್ಯದಲ್ಲಿ ಯಾರೂ ಸ್ಪಂದಿಸದೆ ಇದ್ದಲ್ಲಿ ಸಂಬಂಧಪಟ್ಟ ಇಲಾಖೆ ಮಹಿಳೆಯ ರಕ್ಷಣೆಯ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿ ವಿಶು ಶೆಟ್ಟಿಯವರು ಆಗ್ರಹಿಸಿದ್ದಾರೆ.