ಉಡುಪಿ, ನ.20: ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಅಟಲ್ ವಯೋ ಅಭ್ಯುದಯ ಯೋಜನೆ ಅಡಿಯಲ್ಲಿ ವಯೋ ಸಮ್ಮಾನ್ ರಾಷ್ಟ್ರೀಯ ಅಭಿಯಾನದ ಭಾಗವಾಗಿ ವಯೋಸಾಥಿ – ಸ್ವಯಂ ಸೇವಕರ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ. ಯುವಜನರು ಮತ್ತು ಹಿರಿಯ ನಾಗರಿಕರ ನಡುವೆ ಬಾಂಧವ್ಯವನ್ನು ಬೆಸೆಯುವುದು, ಹಿರಿಯರ ಒಂಟಿತನವನ್ನು ದೂರ ಮಾಡುವುದು ಮತ್ತು ಅವರಿಗೆ ಗೌರವಯುತ ಬದುಕು ಕಟ್ಟಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ. ವಯೋ ಸಾಥಿ ಸ್ವಯಂಸೇವಕರಾಗಿ ನೇಮಕಗೊಳ್ಳುವವರು ಹಿರಿಯ ನಾಗರಿಕರಿಗೆ ಸ್ನೇಹಿತರಾಗಿ ಮತ್ತು ಮಾರ್ಗದರ್ಶಕರಾಗಿ, ಹಿರಿಯರೊಂದಿಗೆ ಸಮಯ ಕಳೆಯುವುದು ಮತ್ತು ಅವರ ಅನುಭವಗಳನ್ನು ಆಲಿಸುವುದು, ಮೊಬೈಲ್ ಬಳಕೆ, ಆನ್‌ಲೈನ್ ಸೇವೆಗಳು ಮತ್ತು ಸೈಬರ್ ವಂಚನೆಗಳ ಬಗ್ಗೆ ಹಿರಿಯರಿಗೆ ಮಾಹಿತಿ ನೀಡುವುದು ಹಾಗೂ ಹಿರಿಯ ನಾಗರಿಕರಿಗಾಗಿ ಇರುವ ಸರ್ಕಾರಿ ಸೌಲಭ್ಯಗಳು ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಸಹಾಯ ಮಾಡಲಿದ್ದಾರೆ.
18 ವರ್ಷ ಮತ್ತು ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕರು (ವಿದ್ಯಾರ್ಥಿಗಳು, ಯುವ ವೃತ್ತಿಪರರು, ಸಮಾಜ ಸೇವಕರು) ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಸೇವೆಯನ್ನು ಪೂರ್ಣಗೊಳಿಸಿದ ಸ್ವಯಂಸೇವಕರಿಗೆ ಭಾರತ ಸರ್ಕಾರದಿಂದ ಅಧಿಕೃತ ವಯೋಸಾಥಿ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ವಯೋಸಾಥಿ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ SAMAVESH ವಯೋಸಾಥಿ ಪೋರ್ಟಲ್‌ನ https://seniorcitizen.dosje.gov.in/vayosathi ಲಿಂಕ್ ಮೂಲಕ ಅಥವಾ ಎಇಇಗಿಂಓ ಮೊಬೈಲ್ ಆ್ಯಪ್ ಮೂಲಕ ನವೆಂಬರ್ 30 ರೊಳಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.




By
ForthFocus™