ಉಡುಪಿ, ನ.15: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ (ಎಸ್‌ಐಆರ್‌ಸಿ) ಉಡುಪಿ ಶಾಖೆಯು ಸಂಸ್ಥೆಯ ಸಾರ್ವಜನಿಕ ಮತ್ತು ಸರಕಾರಿ ಹಣಕಾಸು ನಿರ್ವಹಣ ಸಮಿತಿ ಆಶ್ರಯದಲ್ಲಿ ನ. 13, 14ರಂದು ಅಜ್ಜರಕಾಡು ಟೌನ್‌ಹಾಲ್‌ನಲ್ಲಿ ‘ರೈಸಿಂಗ್ ಟುಗೆದರ್ ಟ್ರಾನ್ಸ್‌ಫಾರ್ಮಿಂಗ್ ಟುಮಾರೋ‘ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾದ ‘ಸಮುದ್ಯತಿ – 2026‘ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ ಶುಕ್ರವಾರ ನಡೆಯಿತು.
ಪಿಜಿಎಫ್‌ಎಂಸಿ ಉಪಾಧ್ಯಕ್ಷ ಅರ್ಪಿತ್ ಕಬ್ರಾ ಮಾತನಾಡಿ, ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ದೇಶದ ಬಲಿಷ್ಠ ಸಂಘಟನೆಗಳಲ್ಲಿ ಒಂದಾಗಿದೆ. ಲೆಕ್ಕಪರಿಶೋಧಕ ವೃತ್ತಿಯು ಅತ್ಯಂತ ಗೌರವಯುತ ಹಾಗೂ ಸಮಾಜಕ್ಕೆ ಅನಿವಾರ್ಯವಾದ ವೃತ್ತಿಯಾಗಿದೆ. ಇತರ ವೃತ್ತಿಗಳಿಗಿಂತ ವಿಭಿನ್ನವಾಗಿರುವ ಈ ಕ್ಷೇತ್ರವು ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಲೆಕ್ಕಪರಿಶೋಧಕರಿಗೆ ಸಮಾಜದಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕಾಲಕ್ಕೆ ತಕ್ಕಂತೆ ಜ್ಞಾನ ಮತ್ತು ಕೌಶಲಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳುವುದರೊಂದಿಗೆ ಹೊಸ ಅವಕಾಶಗಳನ್ನು ಗುರುತಿಸಿ, ಅವುಗಳನ್ನು ಸದುಪಯೋಗ ಪಡಿಸಿಕೊಂಡು ವೃತ್ತಿ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದರು.
ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಅವರು, ಉದ್ಯಮ, ಕಂಪೆನಿ, ಸೇವೆ ಹಾಗೂ ವ್ಯಾಪಾರ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರು ಮಾರ್ಗದರ್ಶಕರಾಗಿ ಮಹತ್ತರ ಪಾತ್ರ ವಹಿಸುತ್ತಾರೆ. ಪ್ರತಿವರ್ಷ ಹೊಸ ಹೊಸ ಉದ್ಯಮಗಳು ಸ್ಥಾಪನೆಯಾಗುತ್ತಿದ್ದು, ಅವುಗಳ ಸುಸ್ಥಿರ ಬೆಳವಣಿಗೆ ಮತ್ತು ಪ್ರಗತಿಗೆ ಲೆಕ್ಕಪರಿಶೋಧಕರ ಸಲಹೆ, ಸಹಕಾರ ಅತ್ಯಗತ್ಯವಾಗಿದೆ. ಸ್ವಯಂ ನಿಯಂತ್ರಿತ ಸಂಸ್ಥೆಯ ಭಾಗವಾಗಿರುವ ಲೆಕ್ಕಪರಿಶೋಧಕರು ತಮ್ಮ ವೃತ್ತಿಯಲ್ಲಿ ತಾವೇ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಅವಕಾಶ ಹೊಂದಿದ್ದಾರೆ. ಯುವಜನತೆಯನ್ನು ಲೆಕ್ಕಪರಿಶೋಧಕ ವೃತ್ತಿಯತ್ತ ಆಕರ್ಷಿಸುವ ಮೂಲಕ ದೇಶದ ಆರ್ಥಿಕ ಹಾಗೂ ಔದ್ಯಮಿಕ ಅಭಿವೃದ್ಧಿಗೆ ಕೈಜೋಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಐಸಿಎಐ ಉಡುಪಿ ಶಾಖೆ ಅಧ್ಯಕ್ಷ ರಾಘವೇಂದ್ರ ಮೊಗೇರಾಯ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಎಸ್ ಐಆರ್ ಸಿ ಕಾರ್ಯದರ್ಶಿ ಪ್ರಮೋದ್ ಹೆಗ್ಡೆ, ಎಸ್ ಐಆರ್ ಸಿ ರೀಜನಲ್ ಕೌನ್ಸಿಲ್ ಮೆಂಬರ್ ಡಾ. ಅಭಿಷೇಕ್ ಮುರಳಿ, ಐಸಿಎಐ ಉಡುಪಿ ಶಾಖೆ ಉಪಾಧ್ಯಕ್ಷ ಅಶ್ವತ್ಥ್ ಜೆ. ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಲೆಕ್ಕಪರಿಶೋಧಕರಾದ ಡಾ. ಗಿರೀಶ್ ಅಹುಜಾ, ಪಂಕಜ್ ಗೋಯಲ್, ರಾಷ್ಟ್ರೀಯ ಸಮ್ಮೇಳನ ಸಂಚಾಲಕ ಪ್ರದೀಪ್ ಜೋಗಿ, ಸಹಸಂಚಾಲಕರಾದ ಲೋಕೇಶ್ ಶೆಟ್ಟಿ, ಕೆ. ಸುರೇಂದ್ರ ನಾಯಕ್ ಉಪಸ್ಥಿತರಿದ್ದರು.
ಅರ್ಪಿತ್ ಕಬ್ರಾ, ಪ್ರತೀಕ್ ಬಾಯಲ್ ಅವರನ್ನು ಗೌರವಿಸಲಾಯಿತು. ಖಜಾಂಚಿ ಅರ್ಚನಾ ಆರ್. ಮಯ್ಯ, ಸಿಕಾಸ ಅಧ್ಯಕ್ಷ ಸೋನಿತ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಧರ ಕಾಮತ್, ಸೌಮ್ಯಾ ಕಾಮತ್ ನಿರೂಪಿಸಿದರು. ಕಾರ್ಯದರ್ಶಿ ಕೆ. ಲಕ್ಷ್ಮೀಶ ರಾವ್ ವಂದಿಸಿದರು.




By
ForthFocus™