Thursday, November 5, 2026
Thursday, November 5, 2026

ಯಕ್ಷಗಾನ ಕಲಾರಂಗದ 107ನೇ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗದ 107ನೇ ಮನೆ ಹಸ್ತಾಂತರ

Date:

ಉಡುಪಿ, ನ.4: ಯಕ್ಷಗಾನ ಕಲಾರಂಗವು ಹತ್ತನೆ ತರಗತಿಯ ವಿದ್ಯಾರ್ಥಿನಿ ವಿನಿಷಾ ಮತ್ತು ಪ್ರಥಮ ಇಂಜಿನಿಯರ್ ವಿದ್ಯಾರ್ಥಿ ವಿಘ್ನೇಶ (ವಸಂತಿ ಪೂಜಾರ್ತಿ ಮತ್ತು ಉಮೇಶ ಪೂಜಾರಿ ಮಕ್ಕಳು) ಇವರಿಗೆ ಉಡುಪಿಯ ಮೂಡು ಅಲೆವೂರಿನಲ್ಲಿ, ಯಕ್ಷಗಾನ ಕಲಾರಂಗದ ಅಧ್ಯಕ್ಷರೂ ಹಾಗೂ ನಂದಕುಮಾರ್ ಎಸೋಸಿಯೇಟ್ಸ್‍ನ ವರಿಷ್ಠರೂ ಆದ ಎಂ. ಗಂಗಾಧರ ರಾವ್ ಇವರು ತಮ್ಮ ‘ನಂದಕುಮಾರ್ ಅಸೋಸಿಯೇಟ್ಸ್’ ಸಂಸ್ಥೆಯು 40 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಶುಭಾವಸರದಲ್ಲಿ ನಿರ್ಮಿಸಿದ ನೂತನ ಮನೆ ‘ಕುಸುಮಾ ನಿವಾಸ’ವನ್ನು ನವೆಂಬರ್ 4 ರಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್‍ನ ಪೂರ್ವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ನಾವು ಗಳಿಸಿದ ಹಣವನ್ನು ದಾನ ಮಾಡುವಲ್ಲಿ ಸಂತೋಷವಿದೆ. ಈ ಸಂತೋಷವನ್ನು ನಾನು ಅನುಭವಿಸಿದ್ದೇನೆ. ಗಂಗಾಧರ ರಾಯರು ಪರಿಶ್ರಮದಿಂದ ಗಳಿಸಿದ ಹಣವನ್ನು ಸಮಾಜಕ್ಕೆ ನೀಡುತ್ತಿರುವ ರೀತಿಯನ್ನು ನೋಡಿ ಆಶ್ಚರ್ಯವೂ, ಆನಂದವೂ ಆಯಿತು. ಈ ಧರ್ಮ ಕಾರ್ಯದ ಹಿಂದೆ ಅವರ ಪತ್ನಿಯ ಸಹಕಾರವೂ ಅಷ್ಟೇ ಮುಖ್ಯವಾಗಿದೆ ಎಂದು ಹರಿಕೃಷ್ಣ ಪುನರೂರು ಹೇಳಿದರು. ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‍ನ ನಿರ್ದೇಶಕರಾದ ಮೋಹನ ಭಾಸ್ಕರ ಹೆಗಡೆಯವರು ಮಾತನಾಡಿ ನಾನು ಸೋಲಾರ್ ಸಂಸ್ಥೆಯಲ್ಲಿದ್ದಾಗ ದೇಶದಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲಿಯೂ ನಿಸ್ವಾರ್ಥವಾಗಿ ಸಮಾಜಕ್ಕೆ ಅರ್ಪಿಸಿಕೊಂಡ ಇಂತಹ ಸಂಸ್ಥೆಯನ್ನು ಕಂಡಿಲ್ಲ. ಈ ಸಂಸ್ಥೆಯ ನಾಯಕತ್ವ ಮತ್ತು ಕಾರ್ಯಕರ್ತರ ಪಡೆ ಅಸಾಧ್ಯವಾದುದನ್ನು ಸಾಧಿಸಿದೆ ಎಂದರು.

ಉಡುಪಿ ಮೋಲ್ಟೋಕೇರ್ ಪ್ರೊಪರ್ಟಿಸ್ ಸರ್ವಿಸಸ್‍ನ ಸಂಸ್ಥಾಪಕರಾದ ಕೃಷ್ಣರಾಜ ತಂತ್ರಿಯವರು ಗಂಗಾಧರ ರಾವ್ ಬಾಲ್ಯದಿಂದಲೂ ನನ್ನ ಒಡನಾಡಿ. ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಬದುಕಿನ ರೀತಿ ಸಮಾಜಕ್ಕೆ ಆದರ್ಶಪ್ರಯವಾಗಿದೆ ಎಂದರು. ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಅಲೆವೂರು ಹರೀಶ್ ಕಿಣಿಯವರು ನಮ್ಮ ಊರಿನ ಕಷ್ಟದಲ್ಲಿರುವ ಕಾರ್ಮಿಕನ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಗಂಗಾಧರ ರಾಯರು ತಮ್ಮ ಕಾರ್ಮಿಕರನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಎ.ಸಿಸಿಇ.ಎ.ಯ ಗೌರವ ಅಧ್ಯಕ್ಷರಾದ ಎಂ. ಶ್ರೀನಾಗೇಶ್ ಹೆಗ್ಡೆಯವರು ಎ.ಸಿಸಿಇ.ಎ. ಸಂಘಟನೆಯಲ್ಲಿ ಅವರನ್ನು ಹಲವು ವರ್ಷಗಳಿಂದ ಗಮನಿಸಿದ್ದೇನೆ. ಸೇರಿದ ಸಂಘಟನೆಯಲ್ಲಿ ಅವರು ಕ್ರಿಯಾಶೀಲರಾಗಿರುತ್ತಾರೆ. ತಮಗೆ ವಹಿಸಿದ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ನಡವಳಿಕೆ ಮತ್ತು ದಾನಗುಣದಿಂದ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ವೇದಿಕೆಯಲ್ಲಿ ಯು. ವಿಶ್ವನಾಥ ಶೆಣೈ, ಡಾ. ಹರಿಶ್ಚಂದ್ರ, ಡಾ. ಎಂ. ಆರ್. ಹೆಗಡೆ, ಇಂಜಿನಿಯರ್ ಭಗವಾನ್‍ದಾಸ್, ಸಂಸ್ಥೆಯ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಎಂ. ಗಂಗಾಧರ ರಾವ್ ಅವರ ಧರ್ಮಪತ್ನಿ ಸರಸ್ವತಿ ಜಿ. ರಾವ್, ಮಗಳು ಪಾವನಿ, ಗೋಪಿಕೃಷ್ಣ ರಾವ್, ಹರಿಣಿ ಜಿ. ರಾವ್,ರಾಮಕೃಷ್ಣ ರಾವ್, ಕಮಲಾಕ್ಷಿ ಮಲ್ಲಿಕಾ, ಸಂಸ್ಥೆಯ ಸದಸ್ಯರಾದ ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಸೀತಾರಾಮ ಭಟ್, ನಟರಾಜ ಉಪಾಧ್ಯ, ನಿರಂಜನ ಭಟ್, ಎನ್. ರಾಮ ಭಟ್, ಪ್ರಭಾಕರ ಭಂಡಿ, ಮರ್ಣೆ ಉಮೇಶ ಭಟ್, ಆರ್. ವಸಂತ್, ಕೆ. ಅಜಿತ್ ಕುಮಾರ್, ಡಾ. ಪ್ರತಿಮಾ ಜೆ. ಆಚಾರ್ಯ ಹಾಗೂ ವಾಮನ ಮೇಸ್ತ್ರಿ ಮತ್ತು ಕಾರ್ಮಿಕ ಸಹಾಯಕರು ಭಾಗವಹಿಸಿದ್ದರು.

ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಾಸ್ತಾವಿಕ ಮಾತುಗಳಲ್ಲಿ ಯಕ್ಷಗಾನ ಕಲಾರಂಗ ನನ್ನ ಸಾಮಾಜಿಕ ಕೆಲಸಗಳಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಇದು ಎಂ. ಗಂಗಾಧರ ರಾವ್ ಪ್ರಾಯೋಜಕತ್ವದ ಏಳನೇಯ ಮನೆಯಾಗಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಐದು ವಿಕೆಟ್‌ಗಳ ಜಯ

ಯು.ಬಿ.ಎನ್.ಡಿ., ನ.4: ಆಕ್ಲೆಂಡ್‌ನಲ್ಲಿ ನಡೆದ ಮಳೆಯಿಂದ ಬಾಧಿತವಾದ ಮೊದಲ ಏಕದಿನ ಪಂದ್ಯದಲ್ಲಿ,...

ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆ: ಸಾತ್ವಿಕ್ ಕೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

ಉಡುಪಿ, ನ.4: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು...

ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ

ಉಡುಪಿ, ನ.4: ರೋಟರಿ ಕ್ಲಬ್ ಆಫ್ ಮಣಿಪಾಲ್, ರೋಟರಿ ಹೊಂಗಿರಣ ಸಮಗ್ರ...
error: Content is protected !!