Saturday, November 28, 2026
Saturday, November 28, 2026

ಜನಸಾಮಾನ್ಯರಿಗೆ ಸರಕಾರದ ಸೇವೆ, ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸಿ: ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ

ಜನಸಾಮಾನ್ಯರಿಗೆ ಸರಕಾರದ ಸೇವೆ, ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸಿ: ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ

Date:

ಉಡುಪಿ, ಅ.4: ಪ್ರಜಾಸೇವಾ ಆಂದೋಲನ ಸಭೆಯು ಜನಪರ ಕಾಳಜಿ ಹೊಂದಿರುವ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರಕಾರದ ಸೇವೆ, ಸವಲತ್ತುಗಳನ್ನು ಜನಸಾಮಾನ್ಯರಿಗೆ ಸಕಾಲದಲ್ಲಿ ತಲುಪಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಬೈಂದೂರು ತಾಲೂಕು ಬೀಜೂರು ಗ್ರಾಮದ ಮುರ್ಗೋಳಿಹಕ್ಲು ನಂದಿಕೇಶ್ವರ ಸಭಾಭವನದಲ್ಲಿ, ಪ್ರಜಾಸೇವಾ ಇಲಾಖೆ ತಾಲೂಕು ಆಡಳಿತ ಬೈಂದೂರು ಇವರ ವತಿಯಿಂದ ಬೈಂದೂರು ಹೋಬಳಿಯ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರಜಾಸೇವಾ ಆಂದೋಲನ ಸಭೆಯು ಸರಕಾರದ ಒಂದು ಉತ್ತಮ ಕಲ್ಪನೆಯಾಗಿದ್ದು, ಸಭೆಯ ಬಗ್ಗೆ ಹೆಚ್ಚಿನ ಪ್ರಚಾರ ಮೂಡಿಸುವುದರೊಂದಿಗೆ ಜನರು ಈ ಕಾರ್ಯಕ್ರಮದ ಬಗ್ಗೆ ವಿಶ್ವಾಸ ಹೊಂದುವಂತೆ ಮಾಡಿ, ಕಾರ್ಯಕ್ರಮದ ಲಾಭ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಸಭೆಗಳಲ್ಲಿ ಸ್ವೀಕೃತವಾಗುವ ಸಾರ್ವಜನಿಕರ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಆಲಿಸಿ, ಅವುಗಳಿಗೆ ಪರಿಣಾಮಕಾರಿ ಹಾಗೂ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರಿರುವಲ್ಲಿಗೆ ಹೋಗಬೇಕು. ಸಭೆಗಳಲ್ಲಿ ಸಲ್ಲಿಸಿದ ಅಹವಾಲುಗಳನ್ನು ನಿರಂತರ ಫಾಲೋ ಅಪ್ ಮಾಡಬೇಕು. ಜನರ ಸೇವೆಗೆ ಪ್ರಧಾನ ಆದ್ಯತೆ ನೀಡಬೇಕು. ಇದೊಂದು ಜನಪರ ಕಾಳಜಿಯುತ ಕಾರ್ಯಕ್ರಮ ಆಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಒಂದೆಡೆ ಸೇರಿಸಿ ಜನರ ಸಮಸ್ಯೆ /ಅಹವಾಲು ಆಲಿಸಿ, ಸ್ಥಳದಲ್ಲಿಯೇ ಅಧಿಕಾರಿಗಳ ಮೂಲಕ ಪರಿಹಾರ ಕಲ್ಪಿಸುವ ಈ ಕಾರ್ಯಕ್ರಮವು ಸಮರ್ಪಕವಾಗಿ ಜನರಿಗೆ ತಲುಪಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರಿಕರು ಸರಕಾರಿ ಸೌಲಭ್ಯಗಳನ್ನು ಪಡೆಯಲು ಕಚೇರಿಗೆ ಬಹಳಷ್ಟು ಅಲೆದಾಡುವುದನ್ನು ಕಂಡು ಅದನ್ನು ತಪ್ಪಿಸಿ, ಸರಕಾರ ಅವರುಗಳ ಮನೆ ಬಾಗಿಲಿಗೆ ತೆರಳಿ, ಕಾಲ ಮಿತಿಯೊಳಗೆ ಅವರ ಅಹವಾಲುಗಳಿಗೆ ಗುಣತ್ಮಕ ಪರಿಹಾರ ಕಲ್ಪಿಸುವುದರೊಂದಿಗೆ ಸರಕಾರ ಜನರ ಸೇವೆಗೆ ಸದಾ ಸಿದ್ಧವಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿಸುವ ಉದ್ದೇಶದಿಂದ ಸರಕಾರವು ಪ್ರಜಾಸೇವಾ ಆಂದೋಲನ ಸಭೆ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದರು. ಪ್ರತಿ ಶನಿವಾರ ಪ್ರಜಾಸೇವಾ ಆಂದೋಲನ ಸಭೆಗಳು ನಡೆಯುತ್ತಿದ್ದು, ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಭೆಗಳನ್ನು ಒಂದೊಂದು ತಾಲೂಕಿನಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರದಂದು ಶಾಸಕರುಗಳ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸುವುದರೊಂದಿಗೆ ಆದಷ್ಟು ಜನರಿರುವ ಸ್ಥಳಕ್ಕೆ ಹೋಗಿ ಅವರ ಸಮಸ್ಯೆ ಪರಿಹಾರ ನೀಡಲಿದ್ದಾರೆ. ಸೇವೆಯೇ ನಮ್ಮ ಧರ್ಮ ಎಂಬ ಸೇವಾ ಮನೋಭಾವದೊಂದಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ದ್ವನಿಯಾಗುವುದರೊಂದಿಗೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದರು.

ಬೈಂದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಮಾತನಾಡಿ, ಸರಕಾರ ಎನ್ನುವುದು ಜನರ ಬಳಿ ತೆರಳುವುದರೊಂದಿಗೆ ಜನರ ಅಹವಾಲುಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳದಲ್ಲಿಯೇ ವಿಲೇವಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದ ಅವರು ಕಾರ್ಯಕ್ರಮ ನಡೆಯುವ ಕುರಿತು ಹೆಚ್ಚಿನ ಅರಿವನ್ನು ಸಾರ್ವಜನಿಕರಿಗೆ ಮೂಡಿಸಬೇಕು ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 54 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ನಂದಿಕೇಶ್ವರ ಯುವಕ ಸಮಾಜದ ಅಧ್ಯಕ್ಷ ಶ್ರೀನಿವಾಸ ದೇವಾಡಿಗ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಊರಿನ ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬೈಂದೂರು ಬಿ.ಇ.ಓ ಗಣೇಶ್ ನಾಯ್ಕ್ ಸ್ವಾಗತಿಸಿ, ಉಪ್ಪುಂದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಶಿಕ್ಷಕ ಕೇಶವ ನಾಯಕ್ ನಿರೂಪಿಸಿ, ಬೈಂದೂರು ತಹಶೀಲ್ದಾರ್ ರಾಮಚಂದ್ರಪ್ಪ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಟಪಾಡಿ ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜು: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.27: ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜು, ಕಟಪಾಡಿ ವತಿಯಿಂದ 2006-27...

ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಿ: ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ

ಉಡುಪಿ, ನ.27: ಜಿಲ್ಲೆಯಲ್ಲಿ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದ 100 ದಿನಗಳ...

ಭಾರತ್ ನೆಟ್‌ಹಂತ-3 ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಉಡುಪಿ, ನ.27: ಗ್ರಾಮೀಣ ಪ್ರದೇಶದಲ್ಲಿ ವೇಗದ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸುವ ಭಾರತ್...
error: Content is protected !!