Wednesday, September 30, 2026
Wednesday, September 30, 2026

ಹಿರಿಯ ನಾಗರಿಕರು ಹಿಂಜರಿಕೆಯಿಲ್ಲದೆ ಮುಕ್ತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ: ನ್ಯಾ. ನಿತಿನ್ ಯಶ್ವಂತ್ ರಾವ್

ಹಿರಿಯ ನಾಗರಿಕರು ಹಿಂಜರಿಕೆಯಿಲ್ಲದೆ ಮುಕ್ತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ: ನ್ಯಾ. ನಿತಿನ್ ಯಶ್ವಂತ್ ರಾವ್

Date:

ಉಡುಪಿ, ಸೆ.30: ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ ಯಾವುದೇ ಹಿಂಜರಿಕೆಯಿಲ್ಲದೇ ಹಿರಿಯ ನಾಗರಿಕರು ಮುಕ್ತವಾಗಿ ಎಲ್ಲಾ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ಸು ಕಾಣಲು ಸಾಧ್ಯ ಎಂದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ಯಶ್ವಂತ್ ರಾವ್ ಹೇಳಿದರು.

ಅವರು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಿರಿಯ ನಾಗರಿಕರ ವೇದಿಕೆ / ಸಂಸ್ಥೆಗಳು, ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ (ರಿ), ವೃದ್ಧಾಶ್ರಮಗಳು ಮತ್ತು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ಮತ್ತು 2 ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯಡಿ ಹಿರಿಯ ನಾಗರಿಕರಿಗಾಗಿ ನೃತ್ಯ, ಕಲೆ, ಏಕಪಾತ್ರಾಭಿನಯ, ಸಂಗೀತ ಥೆರಪಿ ಕಾರ್ಯಕ್ರಮವನ್ನು ಬಕೆಟ್‌ಗೆ ಬಾಲ್ ಎಸೆಯುವ ಮೂಲಕ ಹಾಗೂ ಬಿರುಸಿನ ನಡಿಗೆಗೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಅವರುಗಳನ್ನು ಗೌರವ-ಕಾಳಜಿಯಿಂದ ನೋಡಿಕೊಳ್ಳುವ ಬಗ್ಗೆ ಈಗಿನ ಯುವಜನತೆ ಅರಿತು ಕೊಳ್ಳಬೇಕು. ಮಕ್ಕಳು ತಮ್ಮ ಪೋಷಕರು / ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸದೇ ತಮ್ಮ ಕುಟುಂಬದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕು. ಸಂಧ್ಯಾ ಕಾಲದಲ್ಲಿ ಹಿರಿಯರೊಂದಿಗೆ ಇದ್ದು, ಅವರ ಆಗು-ಹೋಗುಗಳಿಗೆ ಸ್ಪಂದಿಸಬೇಕು ಎಂದರು. ಹಿರಿಯ ನಾಗರಿಕರ ರಕ್ಷಣೆಗಾಗಿ ಪಾಲಕರ ಪೋಷಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007 ಜಾರಿಗೆ ತರಲಾಗಿದ್ದು, ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ನ್ಯಾಯಾಲಯದಲ್ಲಿ ಹಿರಿಯ ನಾಗರಿಕರ ವಿರುದ್ಧ ಪ್ರಕರಣ ದಾಖಲಾದಲ್ಲಿ ಅಥವಾ ಹಿರಿಯ ನಾಗರಿಕರು ಯಾವುದೇ ದಾವೆ ಹೂಡಿದ್ದಲ್ಲಿ ಅಂತಹ ಹಿರಿಯ ನಾಗರಿಕರಿಗೆ ಉಚಿತ ಕಾನೂನಿನ ನೆರವನ್ನು ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಹಿರಿಯ ನಾಗರಿಕರು ಪಡೆದುಕೊಳ್ಳಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಹಿರಿಯ ನಾಗರಿಕರು ತಮ್ಮ ವಯಸ್ಸನ್ನು ಲೆಕ್ಕಿಸದೇ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಹಿರಿಯ ನಾಗರಿಕರ ಮನೋಚೈತನ್ಯಕ್ಕಾಗಿ ನಡೆಸುವ ಕಾರ್ಯಕ್ರಮಗಳಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳಬೇಕು ಎಂದ ಅವರು, ಇಂದು ಹಿರಿಯ ನಾಗರಿಕರಿಗಾಗಿ ಇಲಾಖೆಯ ವತಿಯಿಂದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಹಿರಿಯ ನಾಗರಿಕರು ತಮ್ಮ ಶಾಲಾ ದಿನಗಳಲ್ಲಿ ಭಾಗವಹಿಸಿದ ರೀತಿಯಲ್ಲಿ ಯಾವುದೇ ಅಂಜಿಕೆಯಿಲ್ಲದೆ ಇಂದು ಕೂಡ ಸಕ್ರೀಯವಾಗಿ ಭಾಗವಹಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಟೋಬರ್ 01 ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಎಲ್ಲಾ ಹಿರಿಯ ನಾಗರಿಕರುಗಳಿಗೆ ಒಂದು ದಿನದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಕಷ್ಟು ಹಿರಿಯರು ಆಗಮಿಸಿದ್ದಾರೆ. ಕ್ರೀಡೆಯ ಮಹತ್ವ ಪ್ರತಿಯೊಬ್ಬರೂ ಅರಿತಿರಬೇಕು. ಮನಸ್ಸು ನಿಯಂತ್ರಣದಲ್ಲಿರಲು ಕ್ರೀಡೆ ಸಹಕಾರಿಯಾಗಲಿದೆ ಎಂದ ಅವರು ಹಿರಿಯ ನಾಗರಿಕರು ತಮ್ಮ ಬಾಲ್ಯದಲ್ಲಿ ಆಡಿದ ಕ್ರೀಡೆಯ ನೆನಪುಗಳು ಮತ್ತೊಮ್ಮೆ ಮರುಕಳಿಸಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬ ಹಿರಿಯ ನಾಗರಿಕರು ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕೆ. ಸದಾನಂದ ಹೆಗಡೆ, ಗೌರವಾಧ್ಯಕ್ಷ ಹೆಚ್. ವಿಶ್ವನಾಥ್ ಹೆಗ್ಡೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ನಿರಂಜನ ಭಟ್, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಾಸಂತಿ ರಾವ್ ಕೊರಡ್ಕಲ್, ಬಳಕೆದಾರರ ವೇದಿಕೆಯ ಅಧ್ಯಕ್ಷ ಹರಿಕೃಷ್ಣ ಶಿವತ್ತಾಯ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಮುರುಳೀಧರ್, ತಾಲೂಕು ಹಿರಿಯ ನಾಗರಿಕರ ವೇದಿಕೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ನಾಗರಿಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರುಗಳಿಗೆ ಕ್ರೀಡಾ ವಿಭಾಗದಲ್ಲಿ ಬಿರುಸಿನ ನಡಿಗೆ, ಬಕೆಟ್‌ಗೆ ಬಾಲ್ ಎಸೆಯುವುದು, ಕೇರಂ (ಪುರುಷರಿಗೆ) ಹಾಗೂ ರಂಗೋಲಿ (ಮಹಿಳೆಯರಿಗೆ) ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಗಾಯನ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳು ನಡೆದಿದ್ದು, ಹಿರಿಯ ನಾಗರಿಕರು ಉತ್ಸಾಹದಿಂದ ತಮಗಿಷ್ಟವಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಬ್ರಹ್ಮಕುಮಾರಿ ಡಿ.ಕೆ ಸುಮಾ ಅವರಿಂದ ಹಿರಿಯ ನಾಗರಿಕರಿಗೆ ಮಾರ್ಗದರ್ಶಿ ಧ್ಯಾನ, ಗಾಯಕ ಡಾ. ಸಚಿನ್ ಸಾಲ್ಯಾನ್ ರಿಂದ ಸಂಗೀತ ಚಿಕಿತ್ಸೆ ಕಾರ್ಯಕ್ರಮಗಳು ನಡೆದವು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸ್ವಾಗತಿಸಿ, ರೆಡ್‌ಕ್ರಾಸ್ ಗೌರವ ಕಾರ್ಯದರ್ಶಿ ಗಣನಾಥ್ ಎಕ್ಕಾರು ಹಾಗೂ ವಿಶೇಷ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್ ರವೀಂದ್ರ ನಿರೂಪಿಸಿ, ಇಲಾಖೆಯ ಯೋಜನಾ ಸಹಾಯಕ ಶಿವಾಜಿ ಎ.ಕೆ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೆ.ಎಸ್.ಆರ್.ಟಿ.ಸಿ: ಅ. 11 -20- ಉಡುಪಿಯಿಂದ ನವರಾತ್ರಿ ವಿಶೇಷ ಪ್ಯಾಕೇಜ್ ಪ್ರವಾಸ

ಉಡುಪಿ, ಸೆ.30: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಉಡುಪಿ ಘಟಕದಿಂದ...

ʼಕಬ್ಬದುಳುಮೆʼ ಕಾವ್ಯಲೋಕದ ಓದಿನ ಹೊಸಪರಿ

ಹಿರಿಯಡಕ, ಸೆ.30: ಹಳಗನ್ನಡ ಪಠ್ಯಗಳ ಸಂಧಿಬಂಧಗಳನ್ನು ಒಡೆದು ಒಳಗಿನ ತಿಳಿವನ್ನು ಅರಗಿಸಿಕೊಳ್ಳುವ...

ಕೋಟೇಶ್ವರ: ವಿದ್ಯಾರ್ಥಿ ಸಂಘ ಉದ್ಘಾಟನೆ

ಕೋಟೇಶ್ವರ, ಸೆ.30: ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಕಾಲೇಜು ಹಂತದಲ್ಲಿ ವಿದ್ಯಾರ್ಥಿ...

ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಕುಂದಾಪುರ, ಸೆ.30: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ...
error: Content is protected !!