ಉಡುಪಿ, ಆ.3: ಮಾನವ ಕಳ್ಳ ಸಾಗಾಣಿಕೆ ಮಾನವೀಯತೆಯ ಮೇಲಾಗುವ ಅತಿ ದೊಡ್ಡ ಅಪರಾಧ. ಇಂತಹ ಕೃತ್ಯಗಳು ನಿರ್ಮೂಲನೆ ಮಾಡಲು ಭಾಗಿದಾರ ಇಲಾಖೆಗಳು ಶ್ರಮಿಸಿದರೂ ಕೂಡ ಸಂಪೂರ್ಣ ನಿರ್ಮೂಲನೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ವೈ.ರಾವ್ ಹೇಳಿದರು. ಅವರು ನಗರದ ಬ್ರಹ್ಮಗಿರಿಯ ಬಾಲಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಇವರ ಸಹಯೋಗದೊಂದಿಗೆ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೋಲಿಸ್ ಉಪನಿರೀಕ್ಷಕ ರಾಘವೇಂದ್ರ ಸಿ ಮಾತನಾಡಿ, ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಮಾನವ ಕಳ್ಳ ಸಾಗಾಣಿಕೆಯನ್ನು ನಿರ್ಮೂಲನೆ ಮಾಡುವುದು ಅತಿ ಅವಶ್ಯವಾಗಿರುತ್ತದೆ ಎಂದ ಅವರು, ಕೆಲವೊಂದು ನೈಜ ಪ್ರಕರಣಗಳನ್ನು ಉದಾಹರಣೆ ನೀಡುವ ಮೂಲಕ ಯಾವ ರೀತಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ ಎನ್ನುವುದನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪ್ರೇಮಮೂರ್ತಿ ಕೆ ಮಾತನಾಡಿ, ಆಧುನಿಕ ಯುಗದಲ್ಲಿ ವಂಚನೆಗಳು ಹೆಚ್ಚುತ್ತಿರಲು ಜನರು ಹೆಚ್ಚು ವ್ಯಾಮೋಹಕ್ಕೆ ಒಳಗಾಗುತ್ತಿರುವುದು, ತಂತ್ರಜ್ಞಾನಗಳ ಹೆಚ್ಚಿನ ಬಳಕೆ ಮತ್ತು ಹಣದ ಆಮಿಷಕ್ಕೆ ಬಲಿಯಾಗುತ್ತಿರುವುದು ಮುಖ್ಯ ಕಾರಣವಾಗಿದೆ. ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯಗಳ ಕೊರತೆ ಕೂಡ ಮಾನವ ಕಳ್ಳ ಸಾಗಾಣಿಕೆ ಹೆಚ್ಚುತ್ತಿರಲು ಕಾರಣವಾಗಿದೆ ಎಂದ ಅವರು, ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಸವಿಸ್ತಾರವಾಗಿ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಹಾಯಕ ಕಾನೂನು ನೆರವು ಅಭಿರಕ್ಷಕಿ ಭಾನುಮತಿ ಅವರು, ಕಾಯ್ದೆ ಅಡಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವ ಮಾರ್ಗಗಳ ಕುರಿತಾಗಿ ವಿವರವಾಗಿ ವಿವರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ರತ್ನ, ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ಹೇರೂರ, ಭಾಗಿದಾರ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಗೂ ತ್ರಿಶಕ್ತಿ ಗುಂಪಿನ ಮಹಿಳೆಯರು ಉಪಸ್ಥಿತರಿದ್ದರು. ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಬಿ ಹಾದಿಮನಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೆಂಡರ್ ಸ್ಪೆಷಲಿಸ್ಟ್ ದೀಪ ನಿರೂಪಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಹೇರೂರ ವಂದಿಸಿದರು.




By
ForthFocus™