Friday, July 3, 2026
Friday, July 3, 2026

ವಚನ ಸಾಹಿತ್ಯ ಉಳಿವಿಗೆ ಅವಿರತ ಶ್ರಮ ವಹಿಸಿದ ಫ.ಗು ಹಳಕಟ್ಟಿ: ಎಂ.ಎ ಗಫೂರ್

ವಚನ ಸಾಹಿತ್ಯ ಉಳಿವಿಗೆ ಅವಿರತ ಶ್ರಮ ವಹಿಸಿದ ಫ.ಗು ಹಳಕಟ್ಟಿ: ಎಂ.ಎ ಗಫೂರ್

Date:

ಉಡುಪಿ, ಜು.2: ಕಲ್ಯಾಣ ಕ್ರಾಂತಿಯ ನಂತರ ನಶಿಸಿಹೋಗುತ್ತಿದ್ದ ಬಸವಣ್ಣ, ಅಲ್ಲಮಪ್ರಭು ಅಕ್ಕಮಹಾದೇವಿ ಸೇರಿದಂತೆ ಹಲವಾರು ಶರಣರು ರಚಿಸಿದ ಸಾವಿರಾರು ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಅವುಗಳನ್ನು ಮುದ್ರಿಸುವ ಮೂಲಕ ವಚನ ಸಾಹಿತ್ಯವೂ ಇಂದಿಗೂ ಜನಮಾನಸದಲ್ಲಿ ಉಳಿಯುವಂತೆ ಮಾಡಿದ ಫ. ಗು ಹಳಕಟ್ಟಿಯವರ ಶ್ರಮ ಅವಿರತವಾದುದು ಎಂದು ಕರಾವಳಿ ಅಬಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಫ.ಗು ಹಳಕಟ್ಟಿಯವರ ಜನ್ಮದಿನ – ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ, ಡಾ.ಫ.ಗು ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ವಚನ ಸಾಹಿತ್ಯ ಉಳಿದಾಗ ಸಮಾಜ ಉಳಿಯಲು ಸಾಧ್ಯ. ಶರಣರು ರಚಿಸಿದ ವಚನಗಳು ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಬೇರೂರಿದ್ದ ಸತಿಸಹಗಮನ ಪದ್ಧತಿ, ಅಸ್ಪೃಶ್ಯತೆ, ಜಾತಿ ಪದ್ಧತಿ ಸೇರಿದಂತೆ ಹಲವು ಮೌಢ್ಯಗಳನ್ನು ಹೋಗಲಾಡಿಸುವದರೊಂದಿಗೆ ಸ್ತ್ರೀ ಸಮಾನತೆಗೆ ಒತ್ತು ನೀಡಿದ್ದವು. ಸಮಾಜ ಸುಧಾರಣೆಗೆ ದಾರಿಯಾಗಿದ್ದ ಇಂತಹ ವಚನಗಳನ್ನು ಯುವಜನತೆ ಓದಿ, ಅರ್ಥೈಸಿಕೊಳ್ಳುವುದರೊಂದಿಗೆ ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಚನ ಸಾಹಿತ್ಯ ಸಂಗ್ರಹಿಸುವುದು ಸಹ ಸಮಾಜಕ್ಕೆ ನೀಡುವ ಸೇವೆಯಾಗಿದೆ. ಫ.ಗು ಹಳಕಟ್ಟಿಯವರಂತಹ ದಾರ್ಶನಿಕರು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಜಿಲ್ಲೆಯ ಜನತೆ ವಚನ ಸಾಹಿತ್ಯದ ಬಗ್ಗೆ ಒಲವು ಹೊಂದಿರುವುದರೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಸರ್ವಧರ್ಮ ಸಹಿಷ್ಣುತೆಯ ನಾಡಿನಲ್ಲಿರುವ ನಾವುಗಳು ಪಾಶ್ಚಾತ್ಯ ಸಂಸ್ಕೃತಿ ಯನ್ನು ಬದಿಗಿಟ್ಟು ನಾಡಿನ ಸಂಸ್ಕೃತಿ, ಆಚಾರ ವಿಚಾರವನ್ನು ಪಾಲಿಸುವುದರೊಂದಿಗೆ ಇದು ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗುವಂತೆ ನೋಡಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, 12 ನೇ ಶತಮಾನದಲ್ಲಿ ಶಿವಶರಣರಿಂದ ರಚಿತಗೊಂಡು, ಕಲ್ಯಾಣ ಕ್ರಾಂತಿಯ ನಂತರ ಚದುರಿಹೋಗಿದ್ದ ವಚನ ಸಾಹಿತ್ಯಗಳನ್ನು ಫ.ಗು ಹಳಕಟ್ಟಿಯವರು ಅಂದು ರಕ್ಷಿಸದೇ ಹೋಗಿದ್ದರೆ ಇಂದು ಕನ್ನಡ ಸಾಹಿತ್ಯ ಇಷ್ಟು ಶ್ರೀಮಂತವಾಗಿ ಉಳಿಯುತ್ತಿರಲಿಲ್ಲ. ವಕೀಲ ವೃತ್ತಿಯಿಂದ ಬಂದ ಆದಾಯವನ್ನೆಲ್ಲಾ ವಚನ ಸಾಹಿತ್ಯಗಳ ಸಂರಕ್ಷಣೆ, ಪ್ರಚಾರಕ್ಕೆ ಮುಡಿಪಾಗಿಟ್ಟ ಇವರು ಅವುಗಳನ್ನು ಸಂಗ್ರಹಿಸಿ, ವಿಶ್ಲೇಶಿಸಿ, ವರ್ಗಿಕರಿಸದೇ ಇದ್ದಲ್ಲಿ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನಗ್ರಂಥ ಭಂಡಾರ ಇಂದು ವಿಶ್ವಕ್ಕೆ ಪರಿಚಯವಾಗುತ್ತಿರಲಿಲ್ಲ ಎಂದ ಅವರು, ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡ ವಚನ ಸಾಹಿತ್ಯದ ಸಾರವನ್ನು ಬದುಕಿನಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪನ್ಯಾಸ ನೀಡಿ ಮಾತನಾಡಿ, ಪವಾಡಸದೃಶ್ಯ ಕಾರ್ಯ, ತ್ಯಾಗ, ಸೇವೆಗಳ ಮೂಲಕ ನಾಡಿನ ಚರಿತ್ರೆಯಲ್ಲಿ ತನ್ನದೇ ಆದ ಚಾಪು ಮೂಡಿಸಿದವರು ಫ.ಗು ಹಳಕಟ್ಟಿ ಯವರು. ಕಲ್ಯಾಣ ಕ್ರಾಂತಿಯ ನಂತರ ಚದುರಿಹೋದ ವಚನಗಳನ್ನು ಸಂಗ್ರಹಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಇವರ 147 ನೇ ಜಯಂತಿಯನ್ನು ಇಂದು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಅವರು ಮಾಡಿದ ಸಂಶೋಧನೆ, ಸಂಪಾದನೆ, ಸಾಹಿತ್ಯಿಕ ಕಾರ್ಯಗಳಿಂದಾಗಿ ಜನರು ಅವರನ್ನು ವಚನ ಪಿತಾಮಹರೆಂದೇ ಕರೆಯುತ್ತಾರೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ನಾಡು, ನುಡಿ ಸಂಸ್ಕೃತಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದರು. 1904 ರಿಂದ 1964 ರ ವರೆಗೆ ನಿರಂತರ 6 ದಶಕಗಳ ಕಾಲ ವಚನ ಸಾಹಿತ್ಯ ಸಂಶೋಧನೆಯೊಂದಿಗೆ ವಕೀಲ ವೃತ್ತಿ, ಧಾರ್ಮಿಕ, ರಾಜಕೀಯ, ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವು ಜನಸಾಮಾನ್ಯರ ಜೀವನ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿದ್ದವು. ಇಂತಹ ವಚನಗಳನ್ನು ಶ್ರಮವಹಿಸಿ, ಸಂಗ್ರಹಿಸಿದ ಫ.ಗು. ಹಳಕಟ್ಟಿಯವರ ಕಾರ್ಯ ಶ್ಲಾಘನೀಯ. ಇಂತಹ ಅತ್ಯಮೂಲ್ಯ ವಚನಗಳನ್ನು ಉಳಿಸಿ ಬೆಳೆಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ನಿರಂಜನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, ಕನ್ನಡ ಉಪನ್ಯಾಸಕ ರಾಮಾಂಜಿ, ಜಿಲ್ಲಾಡಳಿತದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ ಕೋಟ್ಯಾನ್ ನಿರೂಪಿಸಿ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಬ್ಲಾಕ್ ಕಾಂಗ್ರೆಸ್: ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ

ಉಡುಪಿ, ಜು.2: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್...

ಜಿಲ್ಲಾ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಡುಪಿ, ಜು.2: ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ...

ವಿದ್ಯಾರ್ಥಿನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ, ಜು.2: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ...

ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ

ಉಡುಪಿ, ಜು.2: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ...
error: Content is protected !!