ಉಡುಪಿ, ಏ.28: 2016 ರಲ್ಲಿ ಸಣ್ಣ ಆವರಣದಲ್ಲಿ ಹಿಂಜರಿಕೆಯೊಂದಿಗೆ ಆರಂಭವಾದ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆಯು ಹತ್ತು ವರ್ಷಗಳಲ್ಲಿ ಬೆಳೆದಿದ್ದು ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗಾವಕಾಶಗಳನ್ನು ನೀಡಿದೆ ಎಂದು ಭಾರತ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಭಾರತೀಯ ರತ್ನಗಳ ಹಾಗೂ ಆಭರಣ ಸಂಸ್ಥೆಯ ನೂತನ ಕಚೇರಿಯ ಅನಾವರಣ ನಡೆಸಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉದ್ಯಮ ನೇತೃತ್ವದ ಕೌಶಲ್ಯವು ಯುವಕರ ಜೀವನವನ್ನು ಹೇಗೆ ಪರಿವರ್ತಿಸುತ್ತದೆ ಮತ್ತು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಉಡುಪಿ ಐಐಜಿಜೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉದ್ಯೋಗಾರ್ಹ ಕೌಶಲ್ಯಗಳು, ಉದ್ಯಮಶೀಲತಾ ಅವಕಾಶಗಳು ಮತ್ತು ಸಮೃದ್ಧಿಯ ಹಾದಿಗಳೊಂದಿಗೆ ಸಬಲೀಕರಣಗೊಳಿಸುತ್ತಿದೆ ಎಂದರು
ಕಳೆದ ಸಾಲಿನಲ್ಲಿ 600 ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ. ಕರಾವಳಿಯ ರತ್ನಗಿರಿಯಿಂದ ಕೇರಳದವರೆಗೆ ರತ್ನ ಮತ್ತು ಆಭರಣ ತಯಾರಿಕೆಯಲ್ಲಿ ಆಸಕ್ತಿ ಇರುವ ಪ್ರತಿಭೆಗಳಿಗೆ ಅದರಲ್ಲೂ ಗ್ರಾಮೀಣ ಭಾಗದವರಿಗೆ ಸಂಸ್ಥೆಯಿಂದ ಅನುಕೂಲವಾಗುತ್ತಿದೆ ಎಂದ ಅವರು, ಉಡುಪಿ ಐಐಜಿಜೆ ಕೇಂದ್ರ, ಉಡುಪಿ-ಮಂಗಳೂರು ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ತರಬೇತಿ ಹೊಂದಿ, ತಮ್ಮದೇ ಆದ ಆಭರಣ ತಯಾರಿಕಾ ಅಂಗಡಿಗಳನ್ನು ತೆರೆದು ಸ್ವ-ಉದ್ಯೋಗ ಕಂಡುಕೊಂಡಿದ್ದಾರೆ. ಸಂಸ್ಥೆಯಲ್ಲಿ ವೃತ್ತಿಪರ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದ್ದು, ವಿಶೇಷವಾಗಿ ಮಹಿಳೆಯರು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಭಾರತೀಯ ಸಾಂಪ್ರದಾಯಿಕ ಆಭರಣಗಳು ಮಧ್ಯಪ್ರಾಚ್ಯ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 8 ಸಾವಿರ ಕುಶಲ ಕರ್ಮಿಗಳಿಗೆ 80 ಕೋಟಿ ರೂ. ಸಾಲವನ್ನು ನೀಡಲಾಗಿದ್ದು, ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಉಡುಪಿ ಚಿಕ್ಕಮಗಳೂರು ಪ್ರಥಮ ಸ್ಥಾನದಲ್ಲಿದೆ ಎಂದರು. ರಾಷ್ಟ್ರೀಕೃತ ಬ್ಯಾಂಕುಗಳು ಜನರ ಮನೆ ಬಾಗಿಲಿಗೆ ತಲುಪಬೇಕು, ದೈನಂದಿನ ಚಟುವಟಿಕೆಯಲ್ಲಿ ಅಧಿಕಾರಿಗಳು ಕನ್ನಡದಲ್ಲಿ ಮಾತನಾಡಬೇಕು ಎಂದ ಅವರು ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಭಾರತದ ರತ್ನ ಮತ್ತು ಆಭರಣ ತಯಾರಿಕಾ ಉದ್ಯಮವು ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಜೊತೆಗೆ ಅಪರಿಮಿತ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ರತ್ನ ಮತ್ತು ಆಭರಣ ತಯಾರಿಕೆಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದ್ದು, ಇಲ್ಲಿ ತಯಾರಾದ ಆಭರಣಗಳು ದೇಶದ ಹಲವು ದೇವಸ್ಥಾನಗಳಲ್ಲಿ ಸಮರ್ಪಿಸಲ್ಪಟ್ಟಿದೆ. ಆಭರಣ ತಯಾರಿಕೆ ಬೆಳೆಯುತ್ತಿರುವ ಉದ್ಯಮವಾಗಿದ್ದು ಜಿಲ್ಲೆಯ ಜನರು ಈ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಸಂಸ್ಥೆಯಲ್ಲಿ ತರಬೇತಿ ಪಡೆದು ನಿರ್ಗಮಿಸಿದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ವಿಶ್ವಕರ್ಮ ಯೋಜನೆಯ ಪ್ರಮಾಣ ಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಯೋಗಶಾಲೆಯಲ್ಲಿ ತಯಾರಾಗುವ ವಜ್ರೋದ್ಯಮವನ್ನು ಉತ್ತೇಜಿಸಲು ವಿಶೇಷ ಪಠ್ಯಕ್ರಮವನ್ನು ಅಳವಡಿಸಲು ಐಐಟಿ ಮದ್ರಾಸ್ ಮತ್ತು ಐಐಜಿಜೆ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ವೇದಿಕೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಜೆಇಪಿಸಿ ಅಧ್ಯಕ್ಷ ಕಿರೀಟ್ ಬನ್ಸಾಲಿ ಸ್ವಾಗತಿಸಿ, ಉಪಾಧ್ಯಕ್ಷ ಶೌನಕ್ ಪಾರಿಖ್ ವಂದಿಸಿದರು.




By
ForthFocus™