ಕುಂದಾಪುರ, ಏ.7: ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ ವಾರ್ಷಿಕ ಮಿತ್ರಕೂಟ ಸಮ್ಮಿಲನ 2026 ಕಾರ್ಯಕ್ರಮ ಕಾಲೇಜಿನ ಮುಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ, ಗಂಗೊಳ್ಳಿಯ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಪ್ರಣಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾಲೇಜು ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿರುವ ವಿದ್ಯಾರ್ಥಿಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದೆ. ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಬದುಕು ಈ ಸಂಸ್ಥೆಗೆ ಬಂದು ಬೆಳಗಿದೆ. ಕಾಲೇಜು ಕನ್ನಡ ಕರಾವಳಿ, ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರವಲ್ಲ, ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿ ಮೂಡಿ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅವರು ಸಂಸ್ಥೆಯ ಶ್ರೇಯೋಭಿವೃದ್ಧಿಯಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಮಹತ್ವದ ಬಗ್ಗೆ ತಿಳಿಸಿದರು. ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಶ್ಯಾನುಭೋಗ್ ಪ್ರಾಸ್ತಾವಿಸಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಆಶಯ ನುಡಿಗಳನ್ನಾಡಿದರು. ಆಡಳಿತ ನಿಕಾಯಕರಾದ ರಕ್ಷಿತ್ ರಾವ್ ಗುಜ್ಜಾಡಿ ಶುಭ ಹಾರೈಸಿದರು. ಸಂಘದ ಕಾರ್ಯದರ್ಶಿ ದೀಪ ಪೂಜಾರಿ ಸ್ವಾಗತಿಸಿ, ಖಜಾಂಚಿ ಸಚಿನ್ ದೇವಾಡಿಗ ವಂದಿಸಿ, ರಶ್ಮಿ ಉಡುಪ ಪ್ರಾರ್ಥಿಸಿ, ಪ್ರೀತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಾಕ್ತನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.




By
ForthFocus™