Friday, February 27, 2026
Friday, February 27, 2026

ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಶಿಕ್ಷಣದ ಉದ್ದೇಶ: ಮುಖ್ಯಮಂತ್ರಿ ಸಿದ್ದರಾಮಯ್ಯ; ಕಾರ್ಕಳದಲ್ಲಿ ಕಿಸಾನ್ ಸಭಾ ಟ್ರಸ್ಟ್‌ನ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವಾರ್ಷಿಕೋತ್ಸವ

ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಶಿಕ್ಷಣದ ಉದ್ದೇಶ: ಮುಖ್ಯಮಂತ್ರಿ ಸಿದ್ದರಾಮಯ್ಯ; ಕಾರ್ಕಳದಲ್ಲಿ ಕಿಸಾನ್ ಸಭಾ ಟ್ರಸ್ಟ್‌ನ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವಾರ್ಷಿಕೋತ್ಸವ

Date:

ಕಾರ್ಕಳ, ಫೆ.26: ಕಾರ್ಕಳದಲ್ಲಿ ಕಿಸಾನ್ ಸಭಾ ಟ್ರಸ್ಟ್‌ನ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಕಿಸಾನ್ ಸಭಾ ಸಭಾಂಗಣದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಅದರ ಮೂಲ ಉದ್ದೇಶವಾಗಬೇಕು.

ನಾನು ಕುಟುಂಬದ ಮೊದಲ ಪದವೀಧರನಾಗಿದ್ದು, ವೀರಪ್ಪ ಮೊಯ್ಲಿ ಅವರಂತೆ ಕಷ್ಟದ ಜೀವನವನ್ನು ಕಂಡಿದ್ದೇನೆ. ವೀರಪ್ಪ ಮೊಯ್ಲಿಯವರು ಸಮಾಜದ ಬಡವರ್ಗದವರ ಪರವಾಗಿ ನಿಂತಿದ್ದರು. ತಮ್ಮ ವಕೀಲ ವೃತ್ತಿಯಲ್ಲಿ ಬಡವರಿಗೆ ಉಚಿತವಾಗಿ ವಕಾಲತ್ತು ಮಾಡುತ್ತಿದ್ದು, ತಮ್ಮ ವಕೀಲ ವೃತ್ತಿ ಹಾಗೂ ರಾಜಕೀಯ ಬದುಕಿನಲ್ಲಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಅವರು ಶತಾಯುಷಿಗಳಾಗಿ ಅವರ ಸಮಾಜ ಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ.

ಕಾರ್ಕಳದಲ್ಲಿ ಕಿಸಾನ್ ಸಭಾ ಪ್ರಾರಂಭಿಸಿ, ನಂತರ ಪ್ರೌಢಶಾಲೆಯನ್ನು ಸ್ಥಾಪಿಸಿ, ನಿರ್ಗತಿಕ ಹಾಗೂ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ನೀಡುವ ಉತ್ತಮ ಕಾರ್ಯದಲ್ಲಿ ವೀರಪ್ಪ ಮೊಯ್ಲಿಯವರು ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಈ ಶಾಲೆಯು 35 ವರ್ಷಗಳನ್ನು ಪೂರೈಸಿದ್ದು, ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಹಾಗೂ ಇಲ್ಲಿನ ವಿದ್ಯಾರ್ಥಿಗಳು ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಚಿಂತನೆಯನ್ನು ಅಳವಡಿಸಿಕೊಳ್ಳುವಂತಾಗಲಿ.

ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಶಿಕ್ಷಣದ ಉದ್ದೇಶ. ಸಮಾನ ಅವಕಾಶಗಳನ್ನು ಕೊಡುವುದು ಶಿಕ್ಷಣ ಮೂಲ ಉದ್ದೇಶವಾಗಬೇಕು. ಅಸಮಾನತೆಯಿಂದ ಕೂಡಿದ ಸಮಾಜ ವ್ಯವಸ್ಥೆಯಲ್ಲಿ ಶೂದ್ರ ವರ್ಗ ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿತ್ತು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗದೇ, ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲವೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿದ್ದರು.

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಕಾರ್ಕಳದ ಜನತೆಯ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. 2013 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ನೀಡಲಾಗಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರಲ್ಲಿ ಪುನ: ಅಧಿಕಾರಕ್ಕೆ ಬಂದು, 590 ಭರವಸೆಗಳನ್ನು ನೀಡಿದ್ದು, ಕಳೆದ ಎರಡೂವರೆ ವರ್ಷದಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ.

ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದ್ದು, ಎಲ್ಲ ಜಾತಿ ಧರ್ಮಗಳ ಬಡವರಿಗೆ ಗ್ಯಾರಂಟಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಇದುವರೆಗೆ 1.20 ಲಕ್ಷ ಕೋಟಿಗಳನ್ನು ಗ್ಯಾರಂಟಿಗಳಿಗೆ ವ್ಯಯಿಸಲಾಗಿದೆ. ದೇಶದ ಸಂಪತ್ತಿನ ಸಮಾನ ಹಂಚಿಕೆಗೆ ನಮ್ಮ ಪ್ರಯತ್ನ ಸದಾ ಇರಲಿದೆ.

ಕಾರ್ಕಳದಲ್ಲಿ 2027ರಲ್ಲಿ ನಡೆಯುವ ಐತಿಹಾಸಿಕ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಅರ್ಥಿಕ ಸಹಾಯವನ್ನು ಇಲ್ಲಿನ ಜನಪ್ರತಿನಿಧಿಗಳು ಕೋರಿದ್ದು, ಕಾರ್ಯಕ್ರಮಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಮಾಜಿ‌ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೋಯ್ಲಿ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಮುಖಂಡರಾದ ಹರ್ಷ ಮೋಯ್ಲಿ, ಉದಯ ಶೆಟ್ಟಿ ಮುನಿಯಾಲು ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು

ಚೆನ್ನೈ, ಫೆ.26: ಇಲ್ಲಿಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್...

ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್‌: ಜ್ಞಾನಸುಧಾದ ೮ ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ, ಫೆ.26: ಎನ್.ಟಿ.ಎ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ ಬಿ.ಆರ್ಕ್ ಮತ್ತು...

ಬೆಂಗಳೂರಿನ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ‘ನಕಲಿ ವಿಶ್ವವಿದ್ಯಾಲಯ’ ಎಂದು ಯುಜಿಸಿ ಘೋಷಣೆ; ವಿದ್ಯಾರ್ಥಿಗಳು ಅದರಿಂದ ದೂರವಿರಲು ಸಲಹೆ

ಬೆಂಗಳೂರು, ಫೆ.26: ರಾಜಾಜಿನಗರದಲ್ಲಿರುವ ಬೆಂಗಳೂರು ಮೂಲದ 'ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ'ಯನ್ನು...
error: Content is protected !!