ಹಾವಂಜೆ, ನ.16: ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿಯ ವತಿಯಿಂದ ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರ ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ನಡೆಯಿತು. ಹಾವಂಜೆ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಗುರುರಾಜ ಕಾರ್ತಿಬೈಲು ಉದ್ಘಾಟನೆ ನೆರವೇರಿಸಿದರು. ಈ ರೀತಿಯ ಕಾರ್ಯಾಗಾರಗಳು ನಮ್ಮ ಹಳ್ಳಿಯಲ್ಲಿ ನಡೆಯುತ್ತಿರುವುದು ನಮಗೊಂದು ಹೆಮ್ಮೆ, ಕಾವಿ ಕಲೆಯನ್ನು ಬೆಳೆಸಿ, ಗ್ರಾಮೋದ್ಯೋಗವನ್ನು ಸೃಜಿಸುವ ಡಾ. ಜನಾರ್ದನ ಹಾವಂಜೆಯವರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಮಣ್ಣಿನ ಉತ್ಪನ್ನಗಳು, ಬಟ್ಟೆ, ಮರ ಮೊದಲಾದ ವಿವಿಧ ಮಾಧ್ಯಮದಲ್ಲಿ ಕಾವಿ ಕಲೆಯ ವಿನ್ಯಾಸಗಳನ್ನು ಬೆಳೆಸುವ ಈ ಕಾರ್ಯಾಗಾರವು ಸುಮಾರು 25 ದಿನಗಳ ಕಾಲ ನಡೆಯಲಿದ್ದು, ಉಡುಪಿ ಭಾಗದ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರ ಕಾವಿ ಕಲೆಯ ವಿನ್ಯಾಸಗಳನ್ನು ಉತ್ತೇಜಿಸುವುದು ಹಾಗೂ ದಿನಬಳಕೆಯ ವಸ್ತುಗಳಲ್ಲಿ ಅದನ್ನು ತರುವ ಪ್ರಯತ್ನ ಎಂಬುದಾಗಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಹಾಗೂ ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆ ತಿಳಿಸಿದರು.
ದೆಹಲಿಯ ವಿನ್ಯಾಸಗಾರ ಬ್ರಿಜೇಶ್ ಜೈಸ್ವಾಲ್ ಈ ಕಾರ್ಯಾಗಾರದಲ್ಲಿ ಕಲಾವಿದರುಗಳ ವಿನ್ಯಾಸಗಳ ಬೆಳವಣಿಗೆಗೆ ಸಹಕರಿಸುವರಲ್ಲದೇ ವಿವಿಧ ಮಾಧ್ಯಮಗಳ ಮೇಲೆ ಇದರ ಬಳಕೆಯ ಸಾಧ್ಯತೆಯನ್ನು ಪ್ರಯೋಗಿಸುತ್ತಾರೆ. ಪುತ್ತೂರಿನ ಕುಂಬಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜನಾರ್ದನ ಮೂಲ್ಯ, ಕರಕುಶಲ ನಿಗಮದ ಹೆಚ್ ಪಿ ಒ ಸುಪ್ರಿಯಾ ಭಾರದ್ವಾಜ್ ಹಾಗೂ ಕಾವಿ ಆರ್ಟ್ ಫೌಂಡೇಶನ್‌ನ ಮಂಜುನಾಥ ರಾವ್ ಉಪಸ್ಥಿತರಿದ್ದರು.




By
ForthFocus™