ಕುಂದಾಪುರ: ಭಾರತೀಯ ಸೇನೆಯನ್ನು ಸ್ವಾವಲಂಬಿ ಮತ್ತು ಶಕ್ತಿಶಾಲಿಯಾಗಿಸಲು ಸೇವಾಕಾಲದುದ್ದಕ್ಕೂ ಶ್ರಮಿಸುತ್ತಾ ಕಳೆದ ವರ್ಷ ಡಿ.8 ರಂದು ಹೆಲಿಕಾಪ್ಟರ್ ದುರ್ಘಟನೆಯಲ್ಲಿ ವಿಧಿವಶರಾದ ಪದ್ಮವಿಭೂಷಣ ಸಿಡಿಎಸ್ ಜ. ಬಿಪಿನ್ ರಾವತ್ ಅವರ ಪ್ರೇರಣಾದಾಯಿ ವ್ಯಕ್ತಿತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ಮಾಜಿ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವಡರು `ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್` ಕೃತಿ ರಚಿಸಿರುತ್ತಾರೆ.
ಮಂಗಳೂರಿನ ಅವನಿ ಪ್ರಕಾಶನ ಕೃತಿಯನ್ನು ಹೊರತಂದಿದೆ. ಕೃತಿ ಲೋಕಾರ್ಪಣೆ ಸಮಾರಂಭವು ಭಾನುವಾರ ಮಾರ್ಚ್ 6 ರಂದು ಸಂಜೆ ಘಂಟೆ 3.30 ಕ್ಕೆ ರೈತಸಿರಿ ಸಭಾಭವನ, ಉಪ್ಪುಂದದಲ್ಲಿ ನಡೆಯಲಿದೆ. ಕರ್ನಲ್ (ನಿವೃತ್ತ) ನಿಟ್ಟೆಗುತ್ತು ಶರತ್ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಖಂಬದಕೋಣೆ ರೈ. ಸೇ. ಸ. ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಕೃತಿ ಲೋಕಾರ್ಪಣೆ ಮಾಡಲಿರುವರು. ಕುಂದಾಪುರ ಕಸಾಪ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಕೃತಿ ಪರಿಚಯ ಮಾಡಲಿರುವರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಅಡಿಗರು ಅಧ್ಯಕ್ಷತೆ ವಹಿಸಲಿರುವರು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.