ಬೆಂಗಳೂರು, ಸೆ. 14: ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಬೇಡಿಕೆ ಸಹಿತ ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಲ್ಲಿಸಿರುವ ವಿವಿಧ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರದ ಮೂಲಕ ಶೀಘ್ರ ಅನುಮೋದನೆ ನೀಡುವಲ್ಲಿ ವಿಶೇಷ ಮುತುವರ್ಜಿ ವಹಿಸುವಂತೆ ರಾಜ್ಯ ಮೀನುಗಾರಿಕೆ ಸಚಿವರಾದ ಮಾಂಕಾಳ ವೈದ್ಯರವರನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿಯಾಗಿ ಮನವಿ ಮಾಡಿದರು.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕೆ ಬೋಟ್ ಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಂದರಿನಲ್ಲಿ ಸುಗಮ ಚಟುವಟಿಕೆಗೆ ಜಾಗದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಲ್ಪೆ ಪಡುಕರೆಯಲ್ಲಿ ಸುಮಾರು 6 ಸಾವಿರ ಬೋಟ್ ನಿಲುಗಡೆ ಸಾಮರ್ಥ್ಯದ ಔಟರ್ ಹಾರ್ಬರ್ ನಿರ್ಮಾಣ ಹಾಗೂ ಪಡುಕೆರೆ ಸೇತುವೆ ಬಳಿ 500 ಮೀಟರ್ ಜೆಟ್ಟಿ ಹಾಗೂ 100 ಮೀಟರ್ ನಾಡದೋಣಿ ತಂಗುದಾಣದ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ನೀಡುವಂತೆ ಮನವಿ ಮಾಡಿದರು.
ಟೆಬ್ಮಾ ಶಿಪ್ ಯಾರ್ಡ್ ಈ ಹಿಂದೆ ನೀಡಿರುವ ಜಾಗದ ಲೀಸ್ ಅವಧಿ ಮುಗಿದ ಕೂಡಲೇ ಜಾಗವನ್ನು ಮೀನುಗಾರಿಕೆ ಇಲಾಖೆ ಹಿಂಪಡೆದು ಮೀನುಗಾರಿಕೆ ಚಟುವಟಿಕೆಗಳ ಬಳಕೆಗೆ ಅವಕಾಶ ಕಲ್ಪಿಸುವುದು, ಮಹಿಳಾ ಮೀನುಗಾರ ಶೂನ್ಯ ಬಡ್ಡಿದರ ಸಾಲ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್ ಗಳ ಮೂಲಕ ಅನುಷ್ಟಾನ, ಮೀನುಗಾರರ ಬಹುದಿನಗಳ ಬೇಡಿಕೆಗಳಾದ ಸೀ ಆಂಬ್ಯುಲೆನ್ಸ್, ಕಡಲ್ಕೊರೆತ ತಡೆಗೆ ತಡೆಗೋಡೆ ನಿರ್ಮಾಣ, ಬೋಟ್ ಮರು ನಿರ್ಮಾಣದ ಸಾಧ್ಯತಾ ಪ್ರಮಾಣ ಪತ್ರದ ಅವಧಿಯನ್ನು ಮರದ ಬೋಟಿಗೆ 5 ವರ್ಷ ಹಾಗೂ ಸ್ಟೀಲ್ ಬೋಟಿಗೆ 7 ವರ್ಷಕ್ಕೆ ಕಡಿತಗೊಳಿಸುವುದು, ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಪ್ರತಿ ವರ್ಷ ಡ್ರೆಜಿಂಗ್ ಕಾಮಗಾರಿ, ಮೀನುಗಾರಿಕೆ ದೋಣಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಡೀಸೆಲ್ ಹಾಗೂ ಸೀಮೆ ಎಣ್ಣೆ ಪೂರೈಕೆ, ಅಂತಾರಾಜ್ಯ ಮೀನುಗಾರಿಕೆ ಸಮನ್ವಯ ಸಮಿತಿ ರಚನೆ ಮಾಡುವಂತೆ ಸಚಿವರಲ್ಲಿ ಪ್ರಸ್ತಾಪಿಸಿದರು.
ಕರಾವಳಿ ಜಿಲ್ಲೆಯ ಮೀನುಗಾರಿಕೆ ಅಭಿವೃದ್ದಿ ಹಾಗೂ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೀನುಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಸಂಘಟನೆಗಳ ಮುಖಂಡರೊಂದಿಗೆ ಉಡುಪಿಯಲ್ಲಿ ಸಭೆ ನಡೆಸುವಂತೆ ಸಚಿವರಿಗೆ ಶಾಸಕ ಯಶ್ಪಾಲ್ ಸುವರ್ಣ ಸಲಹೆ ನೀಡಿದರು.