ಮಂಗಳೂರು ಏ.9: ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು ಇಲ್ಲಿಯ ರೋವರ್ಸ್ ಮತ್ತು ರೇಂಜರ್ಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಎರಡು ದಿನಗಳ ವಾರ್ಷಿಕ ಶಿಬಿರವು ಪಿಲಿಕುಳದ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾದ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶೈಕ್ಷಣಿಕ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಭಾವನೆ, ನಾಯಕತ್ವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ. ಎಂ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಸ್ತು, ಏಕತೆ, ಸಹಕಾರ ಮತ್ತು ಉತ್ತಮ ಸಂವಹನವೇ ವಿದ್ಯಾರ್ಥಿಗಳ ಯಶಸ್ಸಿನ ಮೂಲ ಸ್ತಂಭಗಳು ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ನುಡಿದರು. ಈ ಎರಡು ದಿನಗಳ ಶಿಬಿರದಲ್ಲಿ ಶೈಕ್ಷಣಿಕ ಚಟುವಟಿಕೆಗಳಾದಂತಹ ಪ್ರಥಮ ಚಿಕಿತ್ಸೆಯ ಅರಿವು ಮತ್ತು ಪ್ರಾತ್ಯಕ್ಷಿಕೆಯನ್ನು ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ಇದರ ಜಿಲ್ಲಾ ಕಾರ್ಯದರ್ಶಿಯಾದ ಪ್ರತಿಮ್ ಕುಮಾರ್ ನೆರವೇರಿಸಿ, ಮಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ ಶಿಕ್ಷಕರಾದ ವೆಂಕಟ ರಾವ್ ರಾಷ್ಟ್ರಧ್ವಜದ ಮಹತ್ವದ ಬಗ್ಗೆ ತಿಳಿಸಿಕೊಟ್ಟು, ಕಾಲೇಜಿನ ಉಪನ್ಯಾಸಕರಾದ ಡಾ. ಅಶೋಕ್ ಸಿ. ಎಚ್ ಸೀಡ್ ಬಾಲ್ ಮಾಡುವ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟರು. ಶಿಬಿರ ಜ್ಯೋತಿಯನ್ನು ನಯನ ನೆರವೇರಿಸಿದರು. ಧ್ಯಾನದ ಮಹತ್ವದ ಬಗ್ಗೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಮೈತ್ರಿ ಬಿ, ಹಕ್ಕಿಗಳ ವೀಕ್ಷಣೆಯನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕಿರಣ್ ವಾಟಿಯವರು ನಡೆಸಿಕೊಟ್ಟರು.
ಎನ್.ಎಂ.ಸಿ ಕಾಲೇಜು ಸುಳ್ಯ ಇಲ್ಲಿಯ ಸಹಾಯಕ ಪ್ರಾಧ್ಯಾಪಕರಾದ ಡಾ ಅನುರಾಧ ಕುರುಂಜಿಯವರು ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ನಡೆಸಿಕೊಟ್ಟು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರಾದ ಸಚೇತ್ ಸುವರ್ಣರವರು ಸಿಪಿಆರ್ ತರಬೇತಿ, ಪಂಜ ಸ್ಥಳೀಯ ಸಂಸ್ಥೆಯ ಸ್ಕೌಟ್ ಮಾಸ್ಟರ್‌ರಾದ ಭರತ್ ನಾಟ್ಸ್ ತರಬೇತಿಯನ್ನು ನೀಡಿದರು. ಐಕ್ಯೂಎಸಿ ಸಂಯೋಜಕರಾದ ದೇವಿಪ್ರಸಾದ್ ಹಾಗೂ ಸಹ ಸಂಯೋಜಕರಾದ ಡಾ. ಜ್ಯೋತಿಪ್ರಿಯಾ ಉಪಸ್ಥಿತರಿದ್ದರು. ರೋವರ್ಸ್ ಮತ್ತು ರೇಂಜರ್ಸ್ನ ಕಾರ್ಯಕ್ರಮ ಸಂಯೋಜಕರಾದ ಡಾ. ಅಪರ್ಣ ಆಳ್ವ ಮತ್ತು ಇಕ್ಬಾಲ್, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಅಶೋಕ್ ಸಿ. ಎಚ್, ಡಾ ಜ್ಯೋತಿ ಪಿ. ಮತ್ತು ಮೈತ್ರಿ ಬಿ ಶಿಬಿರವನ್ನು ಸಂಘಟಿಸಿದರು.




By
ForthFocus™