Home ಸುದ್ಧಿಗಳು ಕ್ರೀಡೆ ಮೊದಲ ಏಕದಿನ- ದಕ್ಷಿಣ ಆಫ್ರಿಕಾಗೆ ಜಯ

ಮೊದಲ ಏಕದಿನ- ದಕ್ಷಿಣ ಆಫ್ರಿಕಾಗೆ ಜಯ

403
0

ಬೊಲಾಂಡ್ ಪಾರ್ಕ್ (ದಕ್ಷಿಣ ಆಫ್ರಿಕಾ): ಇಂದು ಭಾರತದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 31 ರನ್ ಗಳ ಆಕರ್ಷಕ ಗೆಲುವನ್ನು ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ನಾಯಕ ಟೆಂಬ ಬವುಮ (110) ಮತ್ತು ರಸ್ಸಿ ವಾನ್ ಡರ್ ಡುಸೆನ್ (129*) ಅವರ ಆಕರ್ಷಕ ಶತಕಗಳ ನೆರವಿನಿಂದ 50 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಬುಮ್ರಾ 2 ವಿಕೆಟ್ ಪಡೆದರು.

ಗೆಲುವಿನ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರ ಶಿಖರ್ ಧವನ್ ಉತ್ತಮ ಆರಂಭ ಒದಗಿಸಿಕೊಟ್ಟರು. 79 ರನ್ ಗಳಿಸಿದ ಧವನ್, ಕೇಶವ್ ಮಹಾರಾಜ್ ಗೆ ವಿಕೆಟ್ ಒಪ್ಪಿಸಿದರು.

7 ವರ್ಷಗಳ ಬಳಿಕ ಸಾಮಾನ್ಯ ಬ್ಯಾಟ್ಸ್ ಮನ್ ಆಗಿ ಬ್ಯಾಟ್ ಹಿಡಿದ ವಿರಾಟ್ ಕೊಹ್ಲಿ 51 ರನ್ ಗಳಿಸಿ ವಿದೇಶದಲ್ಲಿ ಅತ್ಯಧಿಕ ಏಕದಿನ ರನ್ ಗಳಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದರು. ವಿದೇಶ ನೆಲದಲ್ಲಿ ಅತ್ಯಂತ ಹೆಚ್ಚು ಏಕದಿನ ರನ್ ಗಳಿಸಿದ ಭಾರತೀಯ ಎಂಬ ದಾಖಲೆಯನ್ನು ಕೊಹ್ಲಿ ನಿರ್ಮಿಸಿದರು.

188 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡ ಕೆ.ಎಲ್.ರಾಹುಲ್ ಪಡೆಯ ಸ್ಥಿತಿ ಶೋಚನೀಯ ಇದ್ದಾಗ, ಶಾರ್ದುಲ್ ಠಾಕೂರ್ ಮತ್ತು ಜಸ್ಪ್ರೀತ್ ಬುಮ್ರಾ ಜವಾಬ್ದಾರಿಯುತವಾಗಿ ಆಟವಾಡಿ ಬಾಲ್ ಹಾಗೂ ರನ್ ನಡುವಿನ ಅಂತರವನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು.

ಲುಂಗಿ ಎನ್ಗಿಡಿ ಎಸೆದ 48ನೇ ಓವರಿನಲ್ಲಿ ಶಾರ್ದುಲ್ ಸತತ ಮೂರು ಎಸೆತಗಳಲ್ಲಿ ಒಂದು ಸಿಕ್ಸ್, 2 ಬೌಂಡರಿ ಮೂಲಕ ಅಬ್ಬರಿಸಿದರು.

ಶಾರ್ದುಲ್ ಠಾಕೂರ್ ಆಕರ್ಷಕ ಅರ್ಧ ಶತಕ ಗಳಿಸಿದರೆ, ಬುಮ್ರಾ 14 ರನ್ ಗಳಿಸಿದರು. ಮುರಿಯದ 9ನೇ ವಿಕೆಟ್ಗೆ ಈ ಜೋಡಿ 51 ರನ್ ಜೊತೆಯಾಟ ನೀಡಿದರೂ ಸೋಲನ್ನು ತಪ್ಪಿಸಲು ಆಗಲಿಲ್ಲ.

50 ಓವರುಗಳಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಲುಂಗಿ ಎನ್ಗಿಡಿ, ತಬ್ರೇಜ್ ಶಮ್ಸಿ, ಆಂಡಿಲ್ ಫೆಲುಕ್ವಾಯೊ ತಲಾ 2 ವಿಕೆಟ್ ಪಡೆದರು. ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಮುನ್ನಡೆಯಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.