Saturday, January 18, 2025
Saturday, January 18, 2025

ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೇ

ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೇ

Date:

1979 ಇಸವಿಯಲ್ಲಿ ಪ್ರಧಾನಿ ವಿಪಿ ಸಿಂಗ್ ಅವರ ಕ್ಯಾಬಿನೆಟಲ್ಲಿ ರೈಲ್ವೇ ಮಂತ್ರಿ ಆಗಿ ಪ್ರತಿಜ್ಞೆ ಸ್ವೀಕಾರ ಮಾಡಿದ ಜಾರ್ಜ್ ಫರ್ನಾಂಡಿಸ್ ತಕ್ಷಣ ರೈಲ್ವೆ ಅಧಿಕಾರಿಗಳ ಸಭೆ ಕರೆದರು. ಅವರು ಅಂದು ಹೇಳಿದ್ದು ಎರಡೇ ಮಾತು – ನನ್ನ ಮನಸಿನಲ್ಲಿ ಎರಡು ಯೋಜನೆಗಳು ಇವೆ. ಒಂದು ಬಿಹಾರದ ಚಿಟ್ಟೌನಿ, ಮತ್ತೊಂದು ಕರ್ನಾಟಕದ ಕೊಂಕಣ ರೈಲ್ವೆ. ಮುಂದಿನ ಬಜೆಟ್ಟಿನಲ್ಲಿ ನಾನು ಅವುಗಳಿಗೆ ಹಣ ಮೀಸಲು ಇಡುತ್ತೇನೆ. ಅವೆರಡೂ ಪೂರ್ತಿ ಆಗಬೇಕು. 

ಆಗ ಪತ್ರಕರ್ತರು ಅವೆರಡು ಯೋಜನೆಗಳು ಮಾತ್ರ ಯಾಕೆ? ಎಂದು ಕೇಳಿದ್ದರು. ಅದಕ್ಕೆ ಜಾರ್ಜ್ ಹೇಳಿದ್ದು – ಒಂದು ನನಗೆ ವೋಟ್ ಹಾಕಿ ಗೆಲ್ಲಿಸಿದ ರಾಜ್ಯ. ಇನ್ನೊಂದು ನನ್ನ ಹುಟ್ಟಿದ ರಾಜ್ಯ! ಎರಡೂ ರಾಜ್ಯಗಳ ಋಣವನ್ನು ಮರೆಯಲು ಸಾಧ್ಯವೇ? ಜಾರ್ಜ್ ಅವರಿಗೆ ಮುಂದೆ ತಾನು ಏನು ಮಾಡಬೇಕು ಅನ್ನುವುದು ಸ್ಪಷ್ಟ ಆಗಿತ್ತು! ನಾನು ಇವತ್ತು ಕೊಂಕಣ ರೈಲ್ವೆ ಯೋಜನೆಯ ಅನುಷ್ಠಾನದ  ಬಗ್ಗೆ ಸವಿಸ್ತಾರವಾಗಿ  ಬರೆಯಬೇಕು. ಜಾರ್ಜ್ ಇಲ್ಲವಾದ್ರೆ ಅದು ಇವತ್ತಿಗೂ ಪೂರ್ತಿ ಆಗುತ್ತಿರಲಿಲ್ಲ ಅನ್ನುವುದು ವಾಸ್ತವ! 

70ರ ದಶಕದಲ್ಲಿ ಕರಾವಳಿಯ ಬೇರೆ ಬೇರೆ ಊರುಗಳಿಂದ ಮುಂಬೈಗೆ ಹೋಗಿ ಉದ್ಯಮ, ವ್ಯವಹಾರ ಆರಂಭ ಮಾಡಿದ್ದ ತುಳುವರಿಗೆ ಮುಂಬೈ ತಲುಪಲು ಆಗ 48 ಗಂಟೆ ಬೇಕಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಹರಿಯುತ್ತಿದ್ದ ದೊಡ್ಡ ದೊಡ್ಡ ನದಿಗಳಿಗೆ ಸೇತುವೆಗಳು ಆಗಿರಲಿಲ್ಲ. ತುಳುವರು ರಸ್ತೆ ಮಾರ್ಗದಲ್ಲಿ ಚಿಕ್ಕಮಗಳೂರಿಗೆ (ಕಡೂರು) ಹೋಗಿ ಅಲ್ಲಿಂದ ಟ್ರೈನ್ ಹಿಡಿದು ಮುಂಬಯಿ ತಲುಪುವಾಗ ಎರಡು ದಿನ, ಎರಡು ರಾತ್ರಿಗಳು ಕಳೆದು ಹೋಗುತ್ತಿದ್ದವು! ಬೇರೆ ಯಾವ ಮಾರ್ಗವು ಕೂಡ ಇರಲಿಲ್ಲ. 

ಜಾರ್ಜ್ ತಾವು ಭರವಸೆ ಕೊಟ್ಟ ಹಾಗೆ ರೈಲ್ವೆ ಬಜ್ಜೇಟಲ್ಲಿ  ಕೊಂಕಣ್ ರೈಲ್ವೆಗೆ ಮಂಜೂರಾತಿ ಪಡೆದರು. ಒಂದಿಷ್ಟು ದುಡ್ಡು ಕೂಡ ಪಡೆದರು. ಆದರೆ ಅದು ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬ ಹಾಗೆ ಇತ್ತು. ಆದರೆ ಜಾರ್ಜ್ ಹಿಡಿದ ಹಠ ಬಿಡುವ ಜಾಯಮಾನದವರೆ ಅಲ್ಲವಲ್ಲ! 

ಮುಂದೆ ಒಂದೆರಡು ತಿಂಗಳ ಒಳಗೆ ಕೊಂಕಣ ರೈಲ್ವೆ ಕಂಪೆನಿ ಉದ್ಘಾಟನೆ ಆಯಿತು(1990 ಜುಲೈ 19). ಕೆಲವೇ ತಿಂಗಳ ಹಿಂದೆ ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತಿ ಆಗಿದ್ದ ಚೀಫ್ ಇಂಜಿನಿಯರ್ ಈ. ಶ್ರೀಧರನ್ ಅವರನ್ನು ಆ ಕಂಪೆನಿಯ ಮುಖ್ಯಸ್ಥರಾಗಿ ಬರಲು ಜಾರ್ಜ್ ವಿನಂತಿ ಮಾಡಿದರು. ಶ್ರೀಧರನ್ ಒಪ್ಪಿದರು. ಅವರಿಗೆ ಜಾರ್ಜ್ ಹೇಳಿದ್ದು ಒಂದೇ ಮಾತು – ಸರ್, ನೀವು ಕೆಲಸ ಮಾಡ್ತಾ ಹೋಗಿ. ದುಡ್ಡು ನಾನು ಹೊಂದಿಸುವೆ! 

ಮುಂದೆ ಶಿಲಾನ್ಯಾಸ ಕಾರ್ಯಕ್ರಮ ನಡೆದಾಗ ರೈಲ್ವೆ ಮಂತ್ರಿ ಜಾರ್ಜ್ ಹೇಳಿದ್ದು – ಮುಂದೆ ನಾನು ರೈಲ್ವೆ ಮಂತ್ರಿ ಆಗಿರುತ್ತೆನೋ, ಇಲ್ಲವೋ ಗೊತ್ತಿಲ್ಲ. ಎಂಟು ವರ್ಷಗಳ ಒಳಗೆ ಈ ಯೋಜನೆ ಪೂರ್ತಿ ಆಗುತ್ತದೆ. ಅದಕ್ಕೆ ಬೇಕಾದ ದುಡ್ಡು ನನ್ನ ಹೊಣೆ! ಜಾರ್ಜ್ ಫರ್ನಾಂಡಿಸ್ ನುಡಿದ ಹಾಗೆ ನಡೆದರು. ಸರಕಾರದ ದುಡ್ಡು ಸಾಲದೆ ಹೋದಾಗ ಪಬ್ಲಿಕ್ ಇಷ್ಯು ಮೂಲಕ ಫಂಡ್ಸ್ ಒಟ್ಟು ಮಾಡಿದರು. ಆ ಯೋಜನೆಯ ಫಲಾುಭವಿಗಳ ಸಭೆ ಕರೆದು ಭಿಕ್ಷಾ ಪಾತ್ರೆ  ಹಿಡಿದರು. ಜನರು ಹಿಂದೆ ಮುಂದೆ ನೋಡದೆ ಜಾರ್ಜ್ ಮೇಲೆ ಭರವಸೆ ಇಟ್ಟರು. ಜಾರ್ಜ್ ಅವರ ಕನ್ವಿನ್ಸಿಂಗ್ ಪವರ್ ಅದ್ಭುತ ಆಗಿತ್ತು. ಅವರ ಕೊಂಕಣಿ, ತುಳು, ಹಿಂದೀ, ಇಂಗ್ಲಿಷ್, ಮರಾಠಿ ಭಾಷೆಯ ಮಾತುಗಳು ಜನರಲ್ಲಿ ಭಾರೀ ಭರವಸೆ ಮೂಡಿಸಿದವು.

ಇನ್ನು ಶ್ರೀಧರನ್ ಸಾಮರ್ಥ್ಯದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ! ಆತ ಮಹಾ ಕಾಯಕ ರಾಕ್ಷಸ! ತುಂಬಾ ಸ್ಟ್ರಾಂಗ್ ಆಗಿದ್ದ ಯುವಇಂಜಿನಿಯರಗಳ ತಂಡ ಕಟ್ಟಿಕೊಂಡ ಅವರು ಮುಂದಿನ ಎಂಟು ವರ್ಷ ಮಾಡಿದ್ದೆಲ್ಲವೂ ಅದ್ಭುತ! ಅತ್ಯಂತ ದುರ್ಗಮವಾದ  ಪರ್ವತ ಶ್ರೇಣಿ! ಜಾರುವ ದೊಡ್ಡ ಬಂಡೆಗಳು! ಒಂದು ಮಳೆಗೆ ಕುಸಿದು ಹೋಗುವ ಶೇಡಿ ಮಣ್ಣಿನ ನೆಲ! ಬೆಟ್ಟವನ್ನು ಅಗೆದು ಸುರಂಗ ಕೊರೆಯುವ ಸವಾಲು! ಅದು ಇಡೀ ಭಾರತದ ಅತೀ ಸಾಹಸದ ಮತ್ತು ಸವಾಲಿನ ಪ್ರಾಜೆಕ್ಟ್ ಆಗಿತ್ತು! ಮೂರು ರಾಜ್ಯಗಳ ಹೃದಯದ ಮೂಲಕ ಹಾದು ಹೋಗುವ 760 ಕಿಲೋಮೀಟರ್ ರೈಲ್ವೆ ಹಳಿಗಳು! 2000 ಸೇತುವೆಗಳು! 179 ದೊಡ್ಡ ಸೇತುವೆಗಳು! 92 ಸುರಂಗಗಳು! ಅದರಲ್ಲಿ ಕೆಲವು ಮೈಲುಗಟ್ಟಲೆ ಉದ್ದ ಇವೆ! ಆಗಾಗ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಕೆಲಸ ಕಷ್ಟ ಆಯ್ತು. ಆದರೆ ಶ್ರೀಧರನ್ ಕೆಲ್ಸ ನಿಲ್ಲಲು ಬಿಡಲಿಲ್ಲ! ಜಾರ್ಜ್ ಅವರನ್ನು ಬೆನ್ನು ಬಿಡಲಿಲ್ಲ! 

ಜಾರ್ಜ್ ಭರವಸೆ ಕೊಟ್ಟ ಹಾಗೆ ಕೇವಲ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ರತ್ನಾಗಿರಿ ಯಲ್ಲಿ ಕೊಂಕಣ ರೈಲ್ವೆ ಮಾರ್ಗವನ್ನು ಉದ್ಘಾಟನೆ ಮಾಡಿದರು. ಆಗ ಕೇಂದ್ರ ರಕ್ಷಣಾ ಮಂತ್ರಿ ಆಗಿದ್ದ ಜಾರ್ಜ್ ಫರ್ನಾಂಡಿಸ್ ಅಂದು ವೇದಿಕೆಯಲ್ಲಿ ಇದ್ದು ಆನಂದ ಭಾಷ್ಪವನ್ನು ಸುರಿಸಿದರು! ತನ್ನ ತಂದೆ ತೀರಿ ಹೋದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು! ಅಂದು ಮಂಗಳೂರು ಮುಂಬೈ ನಡುವೆ ಮೊದಲ ಟ್ರೈನ್ ಓಡಿತ್ತು! 

ಅದುವರೆಗೆ ಮಂಗಳೂರು ಮುಂಬೈ ನಡುವೆ ಪ್ರಯಾಣಕ್ಕೆ 48 ಗಂಟೆ ತೆಗೆದುಕೊಳ್ಳುತ್ತಿದ್ದ ತುಳುವರು ಕೇವಲ 15 ಗಂಟೆಯಲ್ಲಿ ಮುಂಬೈ ತಲುಪಿದ್ದರು! ದೂರವು 1200 KM ನಿಂದ 760 KM ಗೆ ಇಳಿದಿತ್ತು! ಅತ್ಯಂತ ಆಕರ್ಷಕವಾದ 59 ಸ್ಟೇಶನಗಳು ಕೂಡ ಮುಗಿದು ಬಿಟ್ಟಿದ್ದವು. ತುಳುವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಶ್ರೀಧರನ್ ಈ ಪ್ರಾಜೆಕ್ಟ್ ಪೂರ್ತಿ ಮಾಡಿ ಇನ್ನೊಂದು ಪ್ರಾಜೆಕ್ಟ್ ಹಿಂದೆ ಹೋದರು. ಅವರೆಲ್ಲಿ ವಿಶ್ರಾಂತಿ ಪಡೆಯುತ್ತಾರೆ? 

ಬದುಕಿದ್ದರೆ ಅವರಿಗೆ ಇಂದು 91 ವರ್ಷ ಆಗಿರುತ್ತಿತ್ತು! ಅವರಿಂದು ಬದುಕಿಲ್ಲ. ಆದರೆ ಪ್ರತೀ ದಿನವೂ ರೈಲಿನಲ್ಲಿ ಪ್ರಯಾಣ ಮಾಡುವ ಜನರ ಹೃದಯದಲ್ಲಿ ಅವರು ಜೀವಂತ ಇರುತ್ತಾರೆ. ಉಡುಪಿ ಇಂದ್ರಾಳಿ ಜಂಕ್ಷನ್ ನಿಂದ ರೈಲ್ವೆ ನಿಲ್ದಾಣದ ತನಕ ಹೋಗುವ ರಸ್ತೆಗೆ ಅವರ ಹೆಸರು ಇಡಲಾಗಿದೆ. ಆದರೆ ನಾಮಫಲಕ ಎಲ್ಲೋ ಮರೆಯಾಗಿದೆ! ಅಂತಹ ವ್ಯಕ್ತಿಯ ಬಗ್ಗೆ ಈ ನಿರ್ಲಕ್ಷ ಸಲ್ಲದು.

-ರಾಜೇಂದ್ರ ಭಟ್ ಕೆ.
ಜೇಸಿಐ ರಾಷ್ಟ್ರ‍ೀಯ ತರಬೇತುದಾರರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು, ಜ.17: ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ...

ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ- ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ತುರ್ತು ಸಭೆ

ಮಂಗಳೂರು, ಜ.17: ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ...

ಸಾಲಿಗ್ರಾಮ: ಯುವ ವೇದಿಕೆ 8ನೇ ವಾರ್ಷಿಕೋತ್ಸವ

ಕೋಟ, ಜ.17: ಯುವ ವೇದಿಕೆಯ ಸಮಾಜಮುಖಿ ಕಾರ್ಯಗಳು ಅತ್ಯಂತ ಪ್ರಶಂಸನೀಯ ಎಂದು...

ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್ ಚೇರ್ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ, ಜ.17: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...
error: Content is protected !!