ಕೋಗಿಲೆ (ಏಷಿಯನ್ ಕೋಯಲ್) ಎಂದಾಗ ಬಹುತೇಕ ಜನರಿಗೆ ಅದರ ಇಂಪಾದ ಧ್ವನಿ ನೆನಪಿಗೆ ಬರುತ್ತದೆ. ಆದರೆ, ಇಂಪಾದ, ಲಯಬದ್ಧ ಧ್ವನಿ ಗಂಡು ಕೋಗಿಲೆಯದ್ದು ಎಂದರೆ ತಪ್ಪಾಗದು. ಸೌಂದರ್ಯಕ್ಕೆ ಹೆಣ್ಣನ್ನೇ ವರ್ಣಿಸುವುದು ಒಂದೆಡೆಯಾದರೆ, ಕೆಲವು ಹಕ್ಕಿಗಳಲ್ಲಿ ಅದು ವಿರುದ್ಧವಾಗಿದೆ. ನವಿಲುಗಳಲ್ಲಿ ನೋಡುವುದಾದರೆ ಗಂಡು ನವಿಲಿಗೆ ಉದ್ದನೆಯ ಗರಿ ಇರುವುದು, ಅದೇ ರೀತಿ ಇಂಪಾಗಿ ಹಾಡುವುದು ಕೂಡ ಗಂಡು ಕೋಗಿಲೆ. ಹಾಗಾದರೆ ಹೆಣ್ಣು ಕೋಗಿಲೆಯ ಧ್ವನಿ ಹೇಗಿದೆ? ಅದರ ಧ್ವನಿ ತೀಕ್ಷ್ಣವಾದ, ಲಯಬದ್ಧವಾದ ‘ಕಿಕ್-ಕಿಕ್-ಕಿಕ್’ ಈ ರೀತಿ ಇರುತ್ತದೆ.
ಈಗ ವಿಷಯಕ್ಕೆ ಬರ್ತೆನೆ. ಹೆಣ್ಣು ಕೋಗಿಲೆಯನ್ನು ನೀವು ಈಗಾಗಲೇ ನಿಮ್ಮ ಮನೆಯ ಉದ್ಯಾನವನದಲ್ಲಿ, ತೆರೆದ ಕಾಡುಪ್ರದೇಶಗಳು, ಕೃಷಿ ಪ್ರದೇಶಗಳು ಮತ್ತು ನಗರ ಪ್ರದೇಶಗಳಲ್ಲಿಯೂ ಎಲ್ಲಿಯಾದರೂ ನೋಡಿರಬಹುದು. ಗಂಡು ಕೋಗಿಲೆಗಳಿಗಿಂತ ಹೆಣ್ಣು ಕೋಗಿಲೆಯ ಶರೀರದ ಬಣ್ಣ ವಿಶಿಷ್ಟವಾದದ್ದು ಮತ್ತು ಸಂತಾನೋಪ್ತತ್ತಿಯ ಸಂದರ್ಭದಲ್ಲಿ ತಂತ್ರಗಾರಿಕೆಯಲ್ಲಿ ಇದಕ್ಕೆ ಬಹಳ ಸಹಾಯ ಮಾಡುವುದೇ ಅದರ ದೇಹದ ಬಣ್ಣ.
ಹೆಣ್ಣು ಕೋಗಿಲೆಗೆ ಕಡು ಕಂದು ಬಣ್ಣದ ದೇಹವಿದ್ದು ಅದು ಬಿಳಿ ಮತ್ತು ಕೆನೆ ಬಣ್ಣದ ಚುಕ್ಕೆಗಳು ಮತ್ತು ಗೆರೆಗಳಿಂದ ದಟ್ಟವಾಗಿ ಆವೃತವಾಗಿರುತ್ತದೆ. ದೇಹದ ಕೆಳಭಾಗಗಳಲ್ಲಿ ಕಡು ಕಂದು ಬಣ್ಣದ ಪಟ್ಟಿಗಳಿದ್ದು ಕಣ್ಣುಗಳು ಗಂಡಿನಂತೆಯೇ ಆಕರ್ಷಕವಾದ ಕಡುಗೆಂಪು ಕೆಂಪು ಬಣ್ಣದಲ್ಲಿರುತ್ತವೆ. ಕೊಕ್ಕು ಸ್ವಲ್ಪ ಬಾಗಿದ ಹಾಗೆ ದಪ್ಪವಾಗಿರುತ್ತದೆ.
ಸಂತಾನೋತ್ಪತ್ತಿ ಸಂದರ್ಭದಲ್ಲಿ ಪರಾವಲಂಬಿ: ಹೆಣ್ಣು ಕೋಗಿಲೆಯ ಅತ್ಯಂತ ಗಮನಾರ್ಹ ಅಂಶವೆಂದರೆ ಸಂತಾನೋತ್ಪತ್ತಿಯ ಸಂದರ್ಭ. ಗೂಡನ್ನೇ ಕಟ್ಟದ ಹೆಣ್ಣು ಕೋಗಿಲೆ ತನ್ನ ಮರಿಗಳನ್ನು ತಾನಾಗಿ ಪೋಷಿಸುವುದಿಲ್ಲ. ಮುಖ್ಯವಾಗಿ ಕಾಗೆಗಳ ಕೆಲವೊಮ್ಮೆ ಮೈನಾ ಸೇರಿದಂತೆ ಇತರ ಹಕ್ಕಿಗಳ ಗೂಡುಗಳಲ್ಲಿ ತನ್ನ ಮೊಟ್ಟೆಗಳನ್ನು ಇಡುವ ಕೋಗಿಲೆ, ಇತರೆ ಹಕ್ಕಿಗಳು ಮೊಟ್ಟೆಗಳನ್ನು ಇಡುವ ಸಮಯ ಹತ್ತಿರ ಬಂದಾಗ ರಹಸ್ಯವಾಗಿ ತಾನೇ ಗೂಡಿಗೆ ಭೇಟಿ ನೀಡಿ ಮೊಟ್ಟೆಗಳನ್ನು ಇಡುತ್ತದೆ. ಇದರಲ್ಲಿ ಗಂಡು ಕೋಗಿಲೆಯ ಕೈವಾಡವೂ ಇದೆ. ಹೆಣ್ಣು ಕೋಗಿಲೆಯು ಇತರೆ ಹಕ್ಕಿಗಳ ಗೂಡಿನ ಬಳಿ ಹೊಂಚು ಹಾಕಿ ಕುಳಿತಾಗ ಗಂಡು ಕೋಗಿಲೆಯು ತನ್ನ ಜೋರಾದ ‘ಕುಹೂ ಕುಹೂ’ ಕರೆಯಿಂದ ಇತರೆ ಹಕ್ಕಿಗಳ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತದೆ. ಕೆಲವೊಮ್ಮೆ ಮೊಟ್ಟೆ ಇಡುವ ಮೊದಲು ಇತರ ಹಕ್ಕಿಗಳ ಮೊಟ್ಟೆಗಳಲ್ಲಿ ಒಂದನ್ನು ತೆಗೆದುಹಾಕುತ್ತದೆ ಅಥವಾ ತಿನ್ನುತ್ತದೆ. ಒಮ್ಮೆ ಕೋಗಿಲೆ ಮೊಟ್ಟೆಯನ್ನು ಇಟ್ಟ ನಂತರ, ಇತರ ಹಕ್ಕಿಗಳು ತಮ್ಮ ಮೊಟ್ಟೆಗಳೆಂದು ಭಾವಿಸಿ ಕಾವು ಕೊಟ್ಟು ಕೋಗಿಲೆ ಮರಿಯನ್ನು ಸಾಕುತ್ತವೆ. ಕೋಗಿಲೆ ಮರಿಯು ಇತರೆ ಹಕ್ಕಿಗಳ ಮರಿಗಳಿಗಿಂತ ಬೇಗನೆ ಅಂದರೆ 12 ರಿಂದ 14 ದಿನಗಳಲ್ಲಿ ಹೊರಬರುತ್ತದೆ.




By
ForthFocus™