ಪುಟ್ಟ ನೀರುಕಾಗೆ (Microcarbo niger) ಕಾಗೆಗಳ ಕುಟುಂಬಕ್ಕೆ ಸೇರಿದ ಹಕ್ಕಿ. ಇದು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಜೌಗು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಸುಮಾರು 50 ರಿಂದ 55 ಸೆಂಟಿಮೀಟರ್ ಉದ್ದವಿರುವ ಪುಟ್ಟ ನೀರುಕಾಗೆಯು ನುಣುಪಾದ, ಕಪ್ಪು, ಬಾತುಕೋಳಿಯಂತಹ ಜಲಪಕ್ಷಿಯಾಗಿದ್ದು, ಉದ್ದವಾದ, ಗಡುಸಾದ ಬಾಲ ಮತ್ತು ತುದಿಯಲ್ಲಿ ಚೂಪಾಗಿ ಬಾಗಿದ ತೆಳ್ಳನೆಯ ಕೊಕ್ಕನ್ನು ಹೊಂದಿದೆ. ಋತುವಿಗೆ ಅನುಗುಣವಾಗಿ ಇದರ ಮೈಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ.
ಸಂತಾನೋತ್ಪತ್ತಿ ಋತುವಿನಲ್ಲಿ, ವಯಸ್ಕ ಪಕ್ಷಿಯು ಹೊಳಪುಳ್ಳ, ಸಂಪೂರ್ಣ ಕಪ್ಪು ಗರಿಗಳನ್ನು ಹೊಂದಿರುತ್ತದೆ. ಪುಟ್ಟ ನೀರುಕಾಗೆಯು ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ ಭಾರತೀಯ ಉಪಖಂಡದಲ್ಲಿ ವ್ಯಾಪಕವಾಗಿ ವಿತರಿಸಲ್ಪಟ್ಟಿದೆ ಮತ್ತು ಪೂರ್ವಕ್ಕೆ ಜಾವಾದವರೆಗೆ ವಿಸ್ತರಿಸಿದೆ. ಇದು ಸಣ್ಣ ಹಳ್ಳಿಯ ಕೊಳಗಳು ಮತ್ತು ತೊರೆಗಳಿಂದ ಹಿಡಿದು ದೊಡ್ಡ ಸರೋವರಗಳು, ಜಲಾಶಯಗಳು, ಉಪ್ಪು ನೀರಿನ ಪ್ರದೇಶ, ಮತ್ತು ಉಬ್ಬರವಿಳಿತದ ಅಳಿವೆಗಳವರೆಗೆ ವ್ಯಾಪಕ ಶ್ರೇಣಿಯ ಜಲವಾಸಿ ಆವಾಸಸ್ಥಾನಗಳಲ್ಲಿ ಕಂಡುಬರುವ ಪಕ್ಷಿಯಾಗಿದೆ.
ಮುಳುಗುತಜ್ಞ: ಮೀನುಗಳ ಮೇಲೆಯೇ ಆಹಾರಕ್ಕಾಗಿ ಅವಲಂಬಿತವಾಗಿರುವ ಪುಟ್ಟ ನೀರುಕಾಗೆ ಈಜಿನಲ್ಲಿಯೂ ಪರಿಣತಿಯನ್ನು ಹೊಂದಿದೆ. ನೀರಿನ ಮೇಲ್ಮೈಯಿಂದ ಧುಮುಕಿ, ತಮ್ಮ ಜಾಲಪಾದಗಳನ್ನು (ವೆಬ್ಡ್ ಫೀಟ್) ಬಳಸಿ ನೀರಿನೊಳಗೆ ನುಗ್ಗುವ ಮೂಲಕ ಮೀನು ಹಿಡಿಯುತ್ತದೆ. ಅವು ಸಾಮಾನ್ಯವಾಗಿ ಆಳವಿಲ್ಲದ ನೀರಿನಲ್ಲಿ, ಸಾಮಾನ್ಯವಾಗಿ ಒಂದು ಮೀಟರ್‌ಗಿಂತ ಕಡಿಮೆ ಆಳದಲ್ಲಿ, ಸುಮಾರು 2 ರಿಂದ 8 ಸೆಂಟಿಮೀಟರ್ ಉದ್ದದ ಸಣ್ಣ ಮೀನುಗಳನ್ನು ಗುರಿಯಾಗಿಸಿ ಬೇಟೆಯಾಡುತ್ತವೆ ಎಂದು ಅಧ್ಯಯನಗಳು ಉಲ್ಲೇಖಿಸಿದೆ. ಅವು ಒಂಟಿಯಾಗಿ ಅಥವಾ ಕೆಲವೊಮ್ಮೆ ಸಣ್ಣ ಗುಂಪುಗಳಲ್ಲಿ ಆಹಾರವನ್ನು ಹುಡುಕುತ್ತವೆ.
ಪರಿಣಾಮಕಾರಿ ಹಾರಾಟಕ್ಕೆ ಸಿದ್ದತೆ: ನೀರುಕಾಗೆಗಳ ವಿಶಿಷ್ಟ ನಡವಳಿಕೆಯೆಂದರೆ ಅವು ರೆಕ್ಕೆಗಳನ್ನು ಚಾಚಿ ನೀರಿನ ಬದಿಯ ಬಂಡೆಗಳ ಮೇಲೆ ಅಥವಾ ಮರಗಳ ಮೇಲೆ ಕುಳಿತಿರುವುದನ್ನು ಕಾಣಬಹುದು. ಇದು ಸಾಮಾನ್ಯವಾಗಿ ಅವುಗಳ ಗರಿಗಳನ್ನು ಒಣಗಿಸುವ ವಿಧಾನ ಎಂದು ತಿಳಿಯಲಾಗಿದೆ, ಏಕೆಂದರೆ ಅವುಗಳ ಗರಿಗಳು ಸಂಪೂರ್ಣವಾಗಿ ಜಲನಿರೋಧಕವಾಗಿರುವುದಿಲ್ಲ. ರೆಕ್ಕೆಗಳಲ್ಲಿನ ತೇವಾಂಶವನ್ನು ಕಡಿಮೆ ಮಾಡುವ ಸಲುವಾಗಿ ಈ ರೀತಿ ರೆಕ್ಕೆಯನ್ನು ಒಣಗಿಸುವ ವಿಧಾನವನ್ನು ನೀರುಕಾಗೆ ಅಳವಡಿಸಿಕೊಂಡಿದೆ. ಸಾಮಾಜಿಕವಾಗಿ ಬೆರೆಯುವ ಈ ಪಕ್ಷಿ, ಸಾಮಾನ್ಯವಾಗಿ ಇತರ ಜಲಪಕ್ಷಿಗಳೊಂದಿಗೆ ಗುಂಪುಗೂಡಿ ಆಶ್ರಯ ಪಡೆಯುತ್ತವೆ. ಸಾಮಾನ್ಯವಾಗಿ ಶಾಂತವಾಗಿದ್ದರೂ, ಅವು ತಮ್ಮ ಗೂಡುಗಳು ಮತ್ತು ಆಶ್ರಯ ಸ್ಥಳಗಳಿಗೆ ಅಪಾಯ ಎದುರಾದಾಗ ರಕ್ಷಣೆಗೆ ಸಿದ್ಧವಾಗುತ್ತವೆ.
ಸಂತಾನೋತ್ಪತ್ತಿ: ಪುಟ್ಟ ನೀರುಕಾಗೆಯ ಸಂತಾನೋತ್ಪತ್ತಿ ಋತುವು ಅದರ ವ್ಯಾಪ್ತಿಯಾದ್ಯಂತ ಭೌಗೋಳಿಕವಾಗಿ ಬದಲಾಗುತ್ತದೆ. ಉದಾಹರಣೆಗೆ, ಉತ್ತರ ಭಾರತದಲ್ಲಿ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಸಂಭವಿಸುತ್ತದೆ, ಆದರೆ ದಕ್ಷಿಣ ಭಾರತದಲ್ಲಿ ನವೆಂಬರ್‌ನಿಂದ ಫೆಬ್ರವರಿವರೆಗೆ ಇರುತ್ತದೆ.
ಎರಡರಿಂದ ಆರು ಬಿಳಿ ಮೊಟ್ಟೆಗಳ ಗುಂಪನ್ನು ಇಡುವ ನೀರುಕಾಗೆ ಮೊದಲ ಮೊಟ್ಟೆಯಿಂದಲೇ ಕಾವುಕೊಡುವಿಕೆ ಪ್ರಾರಂಭವಾಗುತ್ತದೆ. ಮೃದುವಾದ ಪುಕ್ಕಗಳಿಂದ ಕೂಡಿದ ಮರಿಗಳು ಬೋಳು ಕೆಂಪು ತಲೆಯನ್ನು ಹೊಂದಿರುತ್ತವೆ ಮತ್ತು ಸುಮಾರು ಒಂದು ತಿಂಗಳ ನಂತರ ಗೂಡನ್ನು ಬಿಡಲು ಆರಂಭಿಸುತ್ತವೆ.
ಡಾ. ಗಣೇಶ್ ಪ್ರಸಾದ್ ಜಿ. ನಾಯಕ್




By
ForthFocus™