ದುಬೈ: ನ್ಯೂಜಿಲೆಂಡ್ ವಿರುದ್ಧ ಇಂದು ನಡೆದ ಟಿ20 ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯ 8 ವಿಕೆಟ್ ಗಳಿಂದ ಜಯಗಳಿಸಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕಾಂಗರೂಗಳು, ನ್ಯೂಜಿಲೆಂಡ್ ರನ್ ಪ್ರವಾಹಕ್ಕೆ ತಕ್ಕ ಮಟ್ಟಿನ ನಿಯಂತ್ರಣ ಹಾಕಿತು.
ನಾಯಕ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡಕ್ಕೆ ಆಧಾರವಾಗಿ ನಾಯಕನ ಆಟವನ್ನು ಆಡಿದರು. ಕೇವಲ 48 ಎಸೆತಗಳಿಂದ 85 ರನ್ ಗಳಿಸಿದ ವಿಲಿಯಮ್ಸನ್ ಕಾಂಗರೂ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ನ್ಯೂಜಿಲೆಂಡ್ 172 ರನ್ ಗಳಿಸಿತು.
ಗೆಲುವಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯ 7 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.
ಆರಂಭಿಕ ಆಟಗಾರ ಡೇವಿಡ್ ವಾರ್ನರ್ 38 ಎಸೆತಗಳಿಂದ 53, ಮಿಶೆಲ್ ಮಾರ್ಶ್ ಅಜೇಯ 77, ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ 28 ಜವಾಬ್ದಾರಿಯುತವಾಗಿ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.