ದುಬೈ: ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯ ಅಭೂತಪೂರ್ವ ಪ್ರದರ್ಶನವನ್ನು ನೀಡುವ ಮೂಲಕ 5 ವಿಕೆಟ್ ಗಳ ಗೆಲುವಿನ ಸವಿಯನ್ನು ಕಂಡು ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಇಂದು ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯ, ಪಾಕಿಸ್ತಾನದ ಆರಂಭಿಕ ದಾಂಡಿಗರಿಂದ ದಂಡನೆಗೆ ಒಳಗಾಯಿತು.
ಆರಂಭಿಕ ಆಟಗಾರ ಮಹಮ್ಮದ್ ರಿಜ್ವಾನ್ 52 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 67 ರನ್ ಗಳಿಸಿ ನಾಯಕ ಬಾಬರ್ ಅಜಮ್ ರೊಂದಿಗೆ ಪಾಕಿಸ್ತಾನಕ್ಕೆ ಉತ್ತಮ ಆರಂಭ ನೀಡಿದರು.
ಬಳಿಕ ಸೇರಿಕೊಂಡ ಫಕರ್ ಜಮನ್ 32 ಎಸೆತಗಳನ್ನು ಎದುರಿಸಿ ಅಜೇಯ 55 ರನ್ ಗಳಿಸಿ ಕಾಂಗರೂ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು.
20 ಓವರ್ ಗಳಲ್ಲಿ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಆಸ್ಟ್ರೇಲಿಯಗೆ ದೊಡ್ಡ ಸವಾಲನ್ನೇ ನೀಡಿತು.
ಗೆಲುವಿನ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಕಾಂಗರೂಗಳಿಗೆ ವೇಗಿ ಶಹೀನ್ ಆಫ್ರಿದಿ, ಫಿಂಚ್ ಬಲಿ ಪಡೆಯುವ ಮೂಲಕ ಮೊದಲ ಆಘಾತ ನೀಡಿದರು.
ಡೇವಿಡ್ ವಾರ್ನರ್, ಮಿಶೆಲ್ ಮಾರ್ಶ್ ತಂಡವನ್ನು ಆಧರಿಸಿದರು. ಉತ್ತಮ ರನ್ ಗತಿಯನ್ನು ಹೊಂದಿದ ಆಸ್ಟ್ರೇಲಿಯಗೆ ಶಾದಬ್ ಖಾನ್ ಬ್ರೇಕ್ ಹಾಕಿದರು.
96 ರನ್ ಆಗುವಷ್ಟರಲ್ಲಿ ಕಾಂಗರೂಗಳ 5 ಪ್ರಮುಖ ಆಟಗಾರರು ಪೆವಿಲಿಯನ್ ಸೇರಿಯಾಗಿತ್ತು. ಪಂದ್ಯ ಸಂಪೂರ್ಣವಾಗಿ ಪಾಕ್ ಕಡೆಗೆ ತಿರುಗಿತ್ತು.
ಆದರೆ ಅನುಭವಿಗಳ ತಂಡ ಆಸ್ಟ್ರೇಲಿಯ ಛಲವನ್ನು ಬಿಡದೇ ತನ್ನ ನೈಜ ಹೋರಾಟದ ಕಿಚ್ಚನ್ನು ಪ್ರದರ್ಶಿಸಿತು. ಮಾರ್ಕಸ್ ಸ್ಟೊಯ್ನಿಸ್-ಮ್ಯಾಥಿವ್ ವೇಡ್ ಜೋಡಿ ಪಾಕ್ ಬೌಲರ್ ಗಳನ್ನು ಒತ್ತಡದ ನಡುವೆಯೂ ಮನಬಂದಂತೆ ದಂಡಿಸಿದರು.
ವೇಗಿ ಶಹೀನ್ ಆಫ್ರಿದಿ ಬೌಲಿಂಗ್ ನಲ್ಲಿ ಸತತ ಮೂರು ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿದ ಮ್ಯಾಥಿವ್ ವೇಡ್ ವೀರಾವೇಷದ ಮುಂದೆ ಪಾಕ್ ಪ್ರದರ್ಶನ ಮಂಕಾಯಿತು. 6 ಎಸೆತಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯ ಗೆಲುವಿನ ನಗೆಯೊಂದಿಗೆ ಫೈನಲ್ ಪ್ರವೇಶಿಸಿದೆ.
ಮ್ಯಾಥಿವ್ ವೇಡ್ 4 ಬಾನೆತ್ತರದ ಸಿಕ್ಸರ್, 2 ಬೌಂಡರಿಗಳ ಮೂಲಕ 17 ಎಸೆತಗಳಿಂದ ಅಜೇಯ 41 ರನ್ ಗಳಿಸಿದರೆ, ಮಾರ್ಕಸ್ ಸ್ಟೊಯ್ನಿಸ್ 31 ಎಸೆತಗಳಿಂದ ಅಜೇಯ 40 ರನ್ ಗಳಿಸಿದರು. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ನ್ಯೂಜಿಲೆಂಡ್ ನ್ನು ಎದುರಿಸಲಿದೆ.