ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ವಿಶ್ವದಾದ್ಯಂತ ಯೋಗದ ಆಸಕ್ತಿ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 7ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಸೋಮವಾರ ಮುಂಜಾನೆ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಣ್ಣಿಗೆ ಕಾಣದ ವೈರಾಣುವಿನ ವಿರುದ್ಧ ಹೋರಾಡಲು ಯೋಗ ಪ್ರಬಲ ಅಸ್ತ್ರವಾಗಿದೆ. ದೇಶಾದ್ಯಂತ ವೈದ್ಯರು, ವೈದ್ಯಕೀಯ ಸಿಬ್ಬಂದಿ ತಮ್ಮಲ್ಲಿ ಬರುವ ಕೊರೊನಾ ಸೋಂಕಿತರನ್ನು ಯೋಗದೆಡೆಗೆ ಕರೆದೊಯ್ಯುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ಕಾಣಸಿಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಯೋಗವನ್ನು ಸುರಕ್ಷಾ ಕವಚದ ರೀತಿಯಲ್ಲಿ ಕೊರೊನಾ ಗುಣಪಡಿಸಲು ಉಪಯೋಗಿಸಲಾಗುತ್ತಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಯೋಗವು ಇಡೀ ಜಗತ್ತಿಗೆ ಭರವಸೆಯ ಕಿರಣವಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಕಳೆದ 2 ವರ್ಷಗಳಿಂದ ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲವಾದರೂ, ಯೋಗ ದಿನದ ಬಗ್ಗೆ ಉತ್ಸಾಹ ಕಡಿಮೆಯಾಗಿಲ್ಲ. ನಾವು ಕೋವಿಡ್ -19 ವಿರುದ್ಧ ಹೋರಾಡಬಹುದು ಎಂಬ ಭರವಸೆಯನ್ನು ಯೋಗ ನೀಡಿದೆ.
ನಿರಂತರವಾಗಿ ಪ್ರತಿನಿತ್ಯ ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶವು ಬಲಿಷ್ಠವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತದೆ. ಯೋಗವನ್ನು ಹೀಲಿಂಗ್ ಪ್ರಕ್ರಿಯೆಯಾಗಿಯೂ ವಿಶ್ವದೆಲ್ಲೆಡೆ ಬಳಸಲಾಗುತ್ತಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಯೋಗದ ಕೊಡುಗೆ ಅನನ್ಯವಾಗಿದೆ. ಕರೋನಾ ವೈರಸ್ ಅನ್ನು ಎದುರಿಸಲು ಯಾರೂ ಮಾನಸಿಕವಾಗಿ ಸಿದ್ಧರಿರಲಿಲ್ಲ ಆದರೆ ಯೋಗವು ಸೋಂಕಿನ ವಿರುದ್ಧ ಹೋರಾಡಲು ಆತ್ಮವಿಶ್ವಾಸವನ್ನು ವೃದ್ಧಿಸಿದೆ.
ದೇಶಾದ್ಯಂತ ಆನ್ ಲೈನ್ ತರಗತಿಗಳು ನಡೆಯುವಾಗ ಮೊದಲ ಹತ್ತು ನಿಮಿಷಗಳ ಕಾಲ ಯೋಗ ತರಗತಿಗಳು ನಡೆಯುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಯೋಗದಿಂದ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವು ಕೂಡ ವೃದ್ಧಿಸುತ್ತದೆ. ಋಷಿ ಮುನಿಗಳು ನಿರಂತರ ಯೋಗಾಭ್ಯಾಸ ವ್ಯಾಯಾಮ ಮಾಡಿದರಿಂದ ಅವರು ದೀರ್ಘಕಾಲದವರೆಗೆ ಬದುಕಿದರು. ಯೋಗದಲ್ಲಿ ದೀರ್ಘಾಯುಷ್ಯ ಕಲ್ಪಿಸುವ ಶಕ್ತಿಯಿದೆ. ಯಶಸ್ಸಿಗೆ ಯೋಗವೇ ಮದ್ದು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. ಪ್ರಾಣಾಯಾಮ, ಯೋಗಾಭ್ಯಾಸದಿಂದ ಶರೀರಕ್ಕೆ ಚೈತನ್ಯ ಸಿಗುತ್ತದೆ, ಇದರಿಂದ ನಮ್ಮ ಆಂತರಿಕೆ ಸಾಮರ್ಥ್ಯ ಕೂಡ ಹೆಚ್ಚಾಗುತ್ತದೆ. ಯೋಗದ ಬಲದಿಂದ ಎಲ್ಲಾ ನಕಾರಾತ್ಮಕ ವಿಚಾರಗಳ ಆಕ್ರಮಣದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಯೋಗವು ಒತ್ತಡದಿಂದ ಶಕ್ತಿಯಕಡೆಗೆ ಕರೆದೊಯ್ಯುತ್ತದೆ. ನಕಾರಾತ್ಮಕ ಸಂಗತಿಗಳನ್ನು ನಾಶಗೊಳಿಸಿ ಸೃಜನಶೀಲತೆ ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.
ಸುಮಾರು 190 ದೇಶಗಳಲ್ಲಿ ಕೋಟ್ಯಂತರ ಜನರು ಮನೆಯಲ್ಲಿಯೇ ಯೋಗ ದಿನವನ್ನು ಆಚರಿಸಿದರು.