ನವದೆಹಲಿ, ಮೇ 14: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಟರ್ಕಿ ಮತ್ತು ಅಜೆರ್ಬೈಜಾನ್ ದೇಶಗಳು ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ನೀಡಿರುವುದರಿಂದ ಕೋಟ್ಯಾಧಿಪತಿ ಹರ್ಷ್ ಗೋಯೆಂಕಾ ಭಾರತೀಯ ನಾಗರಿಕರು ಟರ್ಕಿ ಮತ್ತು ಅಜೆರ್ಬೈಜಾನ್‌ಗೆ ಪ್ರಯಾಣಿಸುವುದನ್ನು ಬಹಿಷ್ಕರಿಸುವಂತೆ ಕೇಳಿಕೊಂಡಿದ್ದಾರೆ. ಎಕ್ಸ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಭಾರತೀಯ ಪ್ರವಾಸಿಗರು 2024 ರಲ್ಲಿ ಎರಡೂ ರಾಷ್ಟ್ರಗಳ ಆರ್ಥಿಕತೆಗೆ 4,000 ಕೋಟಿ ರೂ.ಗಳಿಗೂ ಹೆಚ್ಚು ಕೊಡುಗೆ ನೀಡಿದ್ದಾರೆ. ಭಾರತೀಯ ಪ್ರಯಾಣಿಕರು ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಸಮಯ ಬಂದಿದೆ ಮತ್ತು ನಮ್ಮ ಶತ್ರುಗಳನ್ನು ಬೆಂಬಲಿಸುವ ದೇಶಗಳ ಆರ್ಥಿಕತೆಯನ್ನು ಬೆಂಬಲಿಸಬಾರದು ಎಂದು ಗೋಯೆಂಕಾ ಹೇಳಿದರು.
“ಭಾರತೀಯರು ಕಳೆದ ವರ್ಷ ಪ್ರವಾಸೋದ್ಯಮದ ಮೂಲಕ ಟರ್ಕಿ ಮತ್ತು ಅಜೆರ್ಬೈಜಾನ್‌ಗೆ 4,000+ ಕೋಟಿ ರೂ.ಗಳನ್ನು ಬೇರೆ ಬೇರೆ ರೀತಿಯಲ್ಲಿ ನೀಡಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಟರ್ಕಿ ಮತ್ತು ಅಜೆರ್ಬೈಜಾನ್ ಪಾಕಿಸ್ತಾನದೊಂದಿಗೆ ನಿಂತಿವೆ. ಭಾರತದಲ್ಲಿ ಮತ್ತು ಪ್ರಪಂಚದಲ್ಲಿ ಸಾಕಷ್ಟು ಸುಂದರ ಸ್ಥಳಗಳಿವೆ. ದಯವಿಟ್ಟು ಟರ್ಕಿ ಮತ್ತು ಅಜೆರ್ಬೈಜಾನ್ ಈ 2 ಸ್ಥಳಗಳನ್ನು ಬಿಟ್ಟುಬಿಡಿ. ಜೈ ಹಿಂದ್, ” ಎಂದು ಗೋಯೆಂಕಾ ಎಕ್ಸ್ ನಲ್ಲಿ ಬರೆದಿದ್ದಾರೆ.
‘ಬಾಯ್ಕಾಟ್ ಟರ್ಕಿ’ ಅಭಿಯಾನ ಆರಂಭ: ಭಾರತದ ಹಲವಾರು ಪ್ರವಾಸಿ ಕಂಪನಿಗಳು ‘ಬಾಯ್ಕಾಟ್ ಟರ್ಕಿ’ ಅಭಿಯಾನ ಆರಂಭಿಸಿವೆ. ಟರ್ಕಿ ಮತ್ತು ಅಜೆರ್ಬೈಜಾನ್ ಬುಕಿಂಗ್ಸ್ ರದ್ದು ಮಾಡಲು ಆರಂಭಿಸಿವೆ. ಇಕ್ಸಿಗೊ, ಈಸಿ ಮೈ ಟ್ರಿಪ್, ಕಾಕ್ಸ್ ಎಂಡ್ ಕಿಂಗ್ಸ್ ಕಂಪನಿಗಳು ಇನ್ನು ಮುಂದೆ ನಾವು ಟರ್ಕಿ ಪ್ರವಾಸವನ್ನು ಆಯೋಜಿಸುವುದಿಲ್ಲ ಎಂದು ಹೇಳಿದೆ. ಟರ್ಕಿಯ ಸೇವಾ ವಲಯದ ಜತೆ ಇನ್ನು ಮುಂದೆ ಒಪ್ಪಂದ ಮಾಡುವುದಿಲ್ಲ ಎಂದು ಗೋ ಹೋಮ್ಸ್ಟೇ ಹೇಳಿದೆ.




By
ForthFocus™