ನವದೆಹಲಿ: ರೂಪಾಯಿ ನೋಟಿನಲ್ಲಿ ಗಣೇಶ ಮತ್ತು ಲಕ್ಷ್ಮೀ ಚಿತ್ರ ಹಾಕುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮಹಾತ್ಮ ಗಾಂಧಿಜೀ ಫೋಟೋ ಜೊತೆ ಗಣೇಶ ಮತ್ತು ಲಕ್ಷ್ಮೀ ದೇವರುಗಳ ಫೋಟೋಗಳನ್ನು ಕೂಡ ಮುದ್ರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರೆನ್ಸಿ ನೋಟುಗಳಲ್ಲಿ ದೇವರ ಚಿತ್ರ ಇದ್ದರೆ ದೇಶದ ಜನರಿಗೆ ಆಶೀರ್ವಾದ ದೊರೆತಂತಾಗುತ್ತದೆ. ಐಶ್ವರ್ಯ, ಸಂಪತ್ತಿಗೆ ಲಕ್ಷ್ಮೀ ಅಧಿದೇವತೆಯಾದರೆ, ಗಣೇಶ ನಮ್ಮ ವಿಘ್ನಗಳನ್ನು ನಿವಾರಿಸುವ ದೇವರು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕೆಲವು ಸಂದರ್ಭಗಳಲ್ಲಿ ನಾವು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಅದಕ್ಕೆ ಸೂಕ್ತವಾದ ಫಲ ಸಿಗುವುದಿಲ್ಲ. ಆಗ ನಮಗೆ ದೇವರುಗಳ ಆಶೀರ್ವಾದ ಬೇಕಾಗುತ್ತದೆ. ಉದ್ಯಮಿಗಳು ತಮ್ಮ ಕೆಲಸದ ಸ್ಥಳದಲ್ಲಿ ಎರಡು ಹಿಂದೂ ದೇವರುಗಳ ವಿಗ್ರಹಗಳನ್ನು ಇಟ್ಟುಕೊಂಡು ಪ್ರತೀ ದಿನ ಕೆಲಸ ಆರಂಭಕ್ಕೆ ಮುನ್ನ ಪೂಜೆ ಮಾಡುತ್ತಾರೆ. ಕರೆನ್ಸಿ ನೋಟುಗಳ ಮೇಲೆ ದೇವರುಗಳ ಚಿತ್ರ ಇದ್ದರೆ ದೇಶದ ಆರ್ಥಿಕತೆಯ ಸುಧಾರಣೆಗಾಗಿ ನಮ್ಮ ಪ್ರಯತ್ನ ಫಲ ಕೊಡಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪ್ರತೀ ತಿಂಗಳು ಮುದ್ರಿಸುವ ಹೊಸ ನೋಟುಗಳಿಗೆ ದೇವರ ಚಿತ್ರಗಳನ್ನು ಹಾಕಿದರೆ ಸಾಕು, ಆಗ ಹಳೆಯ ನೋಟುಗಳನ್ನು ಹಿಂಪಡೆಯುವ ಪ್ರಶ್ನೆ ಬರುವುದಿಲ್ಲ.
ಇಂಡೋನೇಷ್ಯಾದಲ್ಲಿ ಹಿಂದೂಗಳ ಜನಸಂಖ್ಯೆ ಇರುವುದು ಶೇ. 2ಕ್ಕಿಂತ ಕಡಿಮೆ. ಅಲ್ಲಿಯ ಕರೆನ್ಸಿ ನೋಟುಗಳ ಮೇಲೆ ಗಣೇಶನ ಚಿತ್ರ ಮುದ್ರಿಸಲಾಗಿದೆ. ನಮ್ಮ ದೇಶದಲ್ಲಿ ಇದು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಕೇಜ್ರಿವಾಲ್, ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ದೀಪಾವಳಿ ಆಚರಣೆಗೆ ನಿಷೇಧ ಹೇರಿದ ಕೇಜ್ರಿವಾಲ್ ಈಗ ಯೂ ಟರ್ನ್ ಹೊಡೆಯುತ್ತಿದ್ದಾರೆ: ಬಿಜೆಪಿ
ದೀಪಾವಳಿಯ ಆಚರಣೆ ಸಂದರ್ಭದಲ್ಲಿ ಪಟಾಕಿ ಸಿಡಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಸರ್ಕಾರ ದೆಹಲಿ ಜನರಿಗೆ ಬೆದರಿಸಿ ದೀಪಾವಳಿ ಆಚರಣೆಯ ಮೇಲೆ ಕಡಿವಾಣ ಹಾಕಿ ಆಮ್ ಆದ್ಮಿ ಪಕ್ಷದ ಹಿಂದೂ-ವಿರೋಧಿ ನೀತಿಯನ್ನು ಅನಾವರಣಗೊಳಿದೆ. ಈಗ ರೂಪಾಯಿ ನೋಟಿನ ಮೇಲೆ ದೇವರ ಚಿತ್ರ ಎಂಬ ಹೇಳಿಕೆ ನೀಡಿ ಯೂ ಟರ್ನ್ ಹೊಡೆಯುವುದು ಕೇಜ್ರಿವಾಲ್ ಅವರ ಪೊಲಿಟಿಕಲ್ ಡ್ರಾಮಾ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.