ಬೆಂಗಳೂರು: ಅಕ್ಟೋಬರ್ 25ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಗ್ರಹಣವು ಮಧ್ಯಾಹ್ನದ ನಂತರ ಸೂರ್ಯಾಸ್ತದ ಮೊದಲು ಕಾಣಿಸಿಕೊಳ್ಳಲಿದ್ದು, ಇದು ಹೆಚ್ಚಿನ ಸ್ಥಳಗಳಲ್ಲಿ ಗೋಚರಿಸುತ್ತದೆ. ಆದಾಗ್ಯೂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ (ಐಜ್ವಾಲ್, ದಿಬ್ರುಗಢ್, ಇಂಫಾಲ್, ಇಟಾನಗರ, ಕೊಹಿಮಾ, ಸಿಬ್ಸಾಗರ್, ಸಿಲ್ಚಾರ್, ತಮೆಲಾಂಗ್ ಇತ್ಯಾದಿ) ಇದನ್ನು ನೋಡಲು ಸಾಧ್ಯವಿಲ್ಲ. ಗ್ರಹಣದ ಅಂತ್ಯವು ಭಾರತದಲ್ಲಿ ಗೋಚರಿಸುವುದಿಲ್ಲ.
ದೇಶದ ವಾಯವ್ಯ ಭಾಗಗಳಲ್ಲಿ ಗರಿಷ್ಠ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿದ ಪ್ರಮಾಣವು ಸರಿಸುಮಾರು ಶೇಕಡ 40 ಮತ್ತು 50ರ ನಡುವೆ ಇರುತ್ತದೆ. ದೇಶದ ಇತರ ಭಾಗಗಳಲ್ಲಿ ಶೇಕಡಾವಾರು ವ್ಯಾಪ್ತಿಯು ಕಡಿಮೆ ಇರುತ್ತದೆ. ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾದ ಈಶಾನ್ಯ ಭಾಗಗಳು, ಪಶ್ಚಿಮ ಏಷ್ಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತದೆ. ಮುಂದಿನ ಸೂರ್ಯಗ್ರಹಣವು 2027 ಆಗಸ್ಟ್ 2ರಂದು ಭಾರತದಲ್ಲಿ ಗೋಚರಿಸಲಿದೆ.
ಬರಿಗಣ್ಣಿನಿಂದ ನೋಡಬೇಡಿ: ಸೂರ್ಯಗ್ರಹಣವನ್ನು ಕ್ಷಣ ಮಾತ್ರಕ್ಕೂ ಬರಿಗಣ್ಣಿನಿಂದ ನೋಡಬಾರದು. ಚಂದ್ರನು ಸೂರ್ಯನ ಹೆಚ್ಚಿನ ಭಾಗವನ್ನು ಆವರಿಸಿದಾಗಲೂ ಇದು ಕಣ್ಣುಗಳಿಗೆ ಶಾಶ್ವತ ಹಾನಿ ಉಟುಮಾಡುತ್ತದೆ, ಕುರುಡುತನಕ್ಕೆ ಕಾರಣವಾಗುತ್ತದೆ. ಅಲ್ಯೂಮಿನೈಸ್ಡ್ ಮೈಲಾರ್, ಕಪ್ಪು ಪಾಲಿಮರ್, ಶೇಡ್ ಸಂಖ್ಯೆ 14ರ ವೆಲ್ಡಿಂಗ್ ಗ್ಲಾಸ್‌ನಂತಹ ಸಮರ್ಪಕ ಫಿಲ್ಟರ್ ಬಳಸಬೇಕು ಅಥವಾ ದೂರದರ್ಶಕದ ಮೂಲಕ ಬಿಳಿ ಹಲಗೆಯಲ್ಲಿ ಸೂರ್ಯನ ಚಿತ್ರ ಪ್ರಕ್ಷೇಪಿಸುವ ಮೂಲಕ ಸೂರ್ಯಗ್ರಹಣ ವೀಕ್ಷಿಸುವುದು ಸುರಕ್ಷಿತ ವಿಧಾನವಾಗಿದೆ.