ಪಾಟ್ನಾ, ನ.20: ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಗುರುವಾರ ಬೆಳಿಗ್ಗೆ 10 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಜೆ ಪಿ ನಡ್ಡಾ, ಚಿರಾಗ್ ಪಾಸ್ವಾನ್ ಮತ್ತು ಎನ್ ಡಿಎಯ ಹಲವಾರು ಇತರ ಉನ್ನತ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಒಟ್ಟು 27 ಸಚಿವರು ಹೊಸ ಬಿಹಾರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ, ದಿಲೀಪ್ ಜೈಸ್ವಾಲ್, ಮಂಗಲ್ ಪಾಂಡೆ, ನಿತಿನ್ ನಬಿನ್ ಮತ್ತು ರಾಮ್ ಕೃಪಾಲ್ ಯಾದವ್ ಸೇರಿದಂತೆ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೆಡಿಯುನ ಲೆಶಿ ಸಿಂಗ್, ಶ್ರೋವನ್ ಕುಮಾರ್, ಬಿಜೇಂದ್ರ ಪ್ರಸಾದ್ ಯಾದವ್, ಜಮಾ ಖಾನ್ ಮತ್ತು ಅಶೋಕ್ ಚೌಧರಿ ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿತ್ತು. ಎನ್‌ಡಿಎಯಲ್ಲಿ, ಬಿಜೆಪಿ 89 ವಿಧಾನಸಭಾ ಸ್ಥಾನಗಳಲ್ಲಿ, ಜೆಡಿ (ಯು) 85 ಸ್ಥಾನಗಳಲ್ಲಿ, ಎಲ್‌ಜೆಪಿ (ಆರ್) 19 ಸ್ಥಾನಗಳಲ್ಲಿ, ಹಿಂದೂಸ್ತಾನಿ ಅವಾಮ್ ಮೋರ್ಚಾ 5 ಸ್ಥಾನಗಳಲ್ಲಿ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ 4 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ವಿರೋಧ ಪಕ್ಷದ ಮಹಾಘಟಬಂಧನ್ ಕೇವಲ 35 ಸ್ಥಾನಗಳನ್ನು ಗೆದ್ದಿತ್ತು.




By
ForthFocus™