ಕುಮಟಾ: ರಾತ್ರಿ ವೇಳೆ ಆಹಾರ ಅರಸಿ ಬಂದಿದ್ದ ಕಾಡುಹಂದಿಯೊಂದು ಆಯತಪ್ಪಿ ತೆರೆದ ಬಾವಿಗೆ ಬಿದ್ದು 7-8 ಗಂಟೆಯ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವನ್ಯಜೀವಿ ರಕ್ಷಕರ ಸಹಾಯದಿಂದ ರಕ್ಷಿಸಿದ ಘಟನೆ ಕುಮಟಾ ತಾಲೂಕಿನ ಗುಡ್ಕಾಗಲ್ ನಲ್ಲಿ ನಡೆದಿದೆ.
ಗುಡ್ಕಾಗಲಿನ ಬಲಿಂದ್ರ ಹರಿಕಂತ್ರ ಎಂಬುವವರ ಮನೆಯ 15 ಅಡಿ ಆಳದ ಬಾವಿಯಲ್ಲಿ ಕಾಡುಹಂದಿಯೊಂದು ಬಿದ್ದು ಮೇಲೆ ಬರಲಾರದೇ ನರಳುತ್ತಿತ್ತು. ಮನೆಯವರು ಬೆಳಗ್ಗಿನ ಜಾವ ನೀರು ತರಲು ಹೋದಾಗ ಗಮನಿಸಿ ಕುಮಟಾ ಅರಣ್ಯ ಇಲಾಖೆಗೆ ತಿಳಿಸಿದರು.
ತಕ್ಷಣ ಸ್ಥಳಕ್ಕೆ ಧಾವಿಸಿದ ಉಪವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ನಾಯ್ಕ, ಹೂವಣ್ಣ ಗೌಡ, ಅರಣ್ಯ ರಕ್ಷಕ ಪ್ರಮೋದ, ವನ್ಯಜೀವಿ ರಕ್ಷಕ ಪವನ ನಾಯ್ಕ, ಬೀರ ಗೌಡ, ಸುರೇಶ್ ನಾಯ್ಕ ಹಾಗೂ ಸ್ಥಳೀಯರು ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಡುಹಂದಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.