Home ಸುದ್ಧಿಗಳು ರಾಜ್ಯ ಸೋಂಕಿತರು ಮನೆಯಲ್ಲಿಯೇ ಇರಿ ಎಂದು ಸರ್ಕಾರವೇ ಹೇಳಿ ಗೊಂದಲ ಸೃಷ್ಟಿಸುತ್ತಿದೆ: ಸಿದ್ಧರಾಮಯ್ಯ

ಸೋಂಕಿತರು ಮನೆಯಲ್ಲಿಯೇ ಇರಿ ಎಂದು ಸರ್ಕಾರವೇ ಹೇಳಿ ಗೊಂದಲ ಸೃಷ್ಟಿಸುತ್ತಿದೆ: ಸಿದ್ಧರಾಮಯ್ಯ

430
0

ಬೆಂಗಳೂರು: ಕೊರೊನಾ ಉಲ್ಭಣಿಸುತ್ತಿದ್ದರೂ ರೋಗಿಗಳ ಆರೈಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ರಾಜ್ಯ ಸರ್ಕಾರ ಬೆಚ್ಚಗೆ ಮಲಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ಸೋಂಕಿನ ಜೊತೆ ಅದೇ ರೀತಿಯ ರೋಗ ಲಕ್ಷಣಗಳ ಶೀತ-ನೆಗಡಿ-ಜ್ವರಗಳ ಬಾಧೆಯೂ ಹೆಚ್ಚುತ್ತಿರುವುದರಿಂದ ಯಾವುದು ಕೊರೊನಾ ಯಾವುದು ಅಲ್ಲ ಎನ್ನುವುದನ್ನು ತಿಳಿದುಕೊಳ್ಳಲಾಗದೆ ಜನ ಗೊಂದಲದಲ್ಲಿದ್ದಾರೆ ಎಂದರು.

ಸೋಂಕಿತರು ಮನೆಯಲ್ಲಿಯೇ ಇರಿ ಎಂದು ಸರ್ಕಾರವೇ ಹೇಳಿ ಆ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಶೀತ, ಜ್ವರದಿಂದ ಬಳಲುತ್ತಿರುವವರಲ್ಲಿ ಶೇಕಡಾ 90-93ರಷ್ಟು ಜನ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ ಎಂದು ಹೇಳಿದ ಅವರು, ಇವರಲ್ಲಿ ಕೊರೊನಾ ಸೋಂಕಿತರೆಷ್ಟು? ಬೇರೆ ಕಾಯಿಲೆ ಪೀಡಿತರೆಷ್ಟು ಎನ್ನುವುದರ ಬಗ್ಗೆ ನಿಖರವಾದ ಮಾಹಿತಿ ಸರ್ಕಾರದಲ್ಲಿಯೂ ಇಲ್ಲ. ಇದು ಅಪಾಯಕಾರಿ ಅಲ್ಲವೇ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ಕೋವಿಡ್ ಚಿಕಿತ್ಸೆಗೆ ನಿಗದಿತ 1.94 ಲಕ್ಷ ಹಾಸಿಗೆಗಳಲ್ಲಿ 51,093 ಹಾಸಿಗೆಗಳು ಮಾತ್ರ ಸರ್ಕಾರಿ, ಉಳಿದೆಲ್ಲವೂ ಖಾಸಗಿ ಆಸ್ಪತ್ರೆಗಳಿಗೆ ಸೇರಿವೆ ಎಂದು ವರದಿಗಳು ಹೇಳುತ್ತಿವೆ. ಈ ವ್ಯವಸ್ಥೆ ಜನಹಿತಕ್ಕಾಗಿಯೇ? ಇಲ್ಲವೆ, ಖಾಸಗಿ ಆಸ್ಪತ್ರೆಗಳ ಹಿತಕ್ಕಾಗಿಯೇ? ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಕೊರೊನಾ ಸೋಂಕು ಶೀಘ್ರಗತಿಯಲ್ಲಿ ಹಳ್ಳಿಗಳಿಗೆ ಹರಡುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡದೆ ಕರ್ಫ್ಯೂ-ಲಾಕ್ ಡೌನ್ ಗಳನ್ನು ನಂಬಿ ಸರಕಾರ ಕೂತಿರುವುದು ಯಾಕೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.