ಬೆಂಗಳೂರು, ಡಿ.14: ಹಿರಿಯ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಭಾನುವಾರ ವಿಧಿವಶರಾದರು. ಅವರಿಗೆ ೯೪ ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಗಂಭೀರ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ನಾಯಕರಿಗೆ ಮಾರ್ಗದರ್ಶಕರಾಗಿದ್ದ ಅವರು, ಆರು ಬಾರಿ ಶಾಸಕರಾಗಿದ್ದರು. ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾಧ್ಯಕ್ಷರಾಗಿದ್ದರು. ಜೂನ್ 16, 1931 ರಂದು ದಾವಣಗೆರೆ ಜಿಲ್ಲೆಯ ಶಾಮನೂರು ಗ್ರಾಮದಲ್ಲಿ ಜನಿಸಿದ ಅವರು, ದಾವಣಗೆರೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಡಿಆರ್‌ಎಂ ವಿಜ್ಞಾನ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ಪಡೆದರು.
ಅವರು ಮೊದಲು 1994 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು. ವರ್ಷಗಳಲ್ಲಿ, ಅವರು 1994, 2004, 2008, 2013, 2018 ಮತ್ತು 2023 ರಲ್ಲಿ ದಾವಣಗೆರೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದಾರೆ. 1997 ರಲ್ಲಿ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. ತಮ್ಮ ಕ್ಷೇತ್ರ ಮತ್ತು ರಾಜ್ಯದಲ್ಲಿ ಪ್ರಸಿದ್ಧ ನಾಯಕರಾಗಿರುವ ಶಿವಶಂಕರಪ್ಪ ಅವರು, ಬಾಪೂಜಿ ಶಿಕ್ಷಣ ಸಂಸ್ಥೆಗಳ ಮೂಲಕ ಈ ಪ್ರದೇಶದ ಶಿಕ್ಷಣವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಗಣ್ಯರ ಸಂತಾಪ: ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದಾರೆ. ರಾಜಕಾರಣ ಮಾತ್ರವಲ್ಲದೆ ಶಿಕ್ಷಣ, ಉದ್ಯಮ, ಸಮಾಜಸೇವೆ ಕ್ಷೇತ್ರಗಳಲ್ಲಿಯೂ ಯಶಸ್ಸು ಗಳಿಸಿ ಮಾದರಿ ವ್ಯಕ್ತಿತ್ವದ ಸಾಧಕರಾಗಿದ್ದರು. ನೇರ ನಡೆನುಡಿಯ ಅವರು ಸಚಿವರಾಗಿಯೂ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವಾಗಿದೆ ಎಂದು ಗಣ್ಯರು ಸಂತಾಪ ಸೂಚಿಸಿದಾರೆ.
ಮೃತರು ಪತ್ನಿ ಪಾರ್ವತಮ್ಮ, ಪುತ್ರಿಯರಾದ ಡಾ. ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ ಮತ್ತು ಮೀನಾ, ಪುತ್ರರಾದ ಎಸ್ ಎಸ್ ಬಕ್ಕೇಶ್, ಎಸ್ ಎಸ್ ಗಣೇಶ್, ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.




By
ForthFocus™