Saturday, January 17, 2026
Saturday, January 17, 2026

ಕೊಪ್ಪ: ವೀರಮಾಸ್ತಿಗಲ್ಲು‌ ಮತ್ತು ವೀರಗಲ್ಲಿನ ಅಧ್ಯಯನ

ಕೊಪ್ಪ: ವೀರಮಾಸ್ತಿಗಲ್ಲು‌ ಮತ್ತು ವೀರಗಲ್ಲಿನ ಅಧ್ಯಯನ

Date:

ಕೊಪ್ಪ, ಡಿ.23: ತಾಲೂಕಿನ ಚಾವಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡ್ಪಳ್ಳಿ ಪ್ರದೇಶದಲ್ಲಿ ಸ್ಥಳೀಯರು ಮಾಸ್ತಿಬನ ಎಂದು ಪೂಜಿಸಿಕೊಂಡು, ಸಂರಕ್ಷಿಸಿಕೊಂಡು ಬರುತ್ತಿರುವ ಸ್ಥಳದಲ್ಲಿನ ಸ್ಮಾರಕಶಿಲ್ಪವನ್ನು ನಾಗಭೂಷಣರಾವ್ ಹಾಲ್ಮತ್ತೂರು ಅವರ ಪ್ರಾಥಮಿಕ ಮಾಹಿತಿಯ ಮೇರೆಗೆ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ. ಅಧ್ಯಯನದ ಮೂಲಕ ಸ್ಥಳೀಯರು ಮಾಸ್ತಿಯಮ್ಮ ಎಂದು ಕರೆದು ಪೂಜಿಸಿಕೊಂಡು ಬರುತ್ತಿರುವ ಈ ಸ್ಮಾರಕಶಿಲ್ಪವು ವೀರಮಾಸ್ತಿಕಲ್ಲಾಗಿದ್ದು ಇದು 15-16 ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಸಂಶೋಧನಾರ್ಥಿ ಅಭಿಪ್ರಾಯಪಟ್ಟಿದ್ದಾರೆ. ಈ ವೀರಮಾಸ್ತಿಕಲ್ಲು ನೆಲದಿಂದ ಸುಮಾರು 3 ಫೂಟ್ ಎತ್ತರ ಹಾಗೂ 2 ಫೂಟ್ ಅಗಲವಾಗಿದ್ದು, ಎರಡು ಪಟ್ಟಿಕೆಗಳನ್ನು ಹೊಂದಿದೆ. ಮೊದಲ ಅಥವಾ ಕೆಳಗಿನ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮರಣ ಹೊಂದಿದ ವೀರ ಹಾಗೂ ಆತನ ಸತಿಯು ಪದ್ಮಾಸನದಲ್ಲಿ ಕೈಮುಗಿದು ಕುಳಿತಿರುವಂತೆ ತೋರಿಸಲಾಗಿದೆ. ಈ ಪಟ್ಟಿಕೆಯಲ್ಲಿಯೇ ಬಿಲ್ಲು ಬಾಣ ಹಿಡಿದು ಹೋರಾಟ ಮಾಡುತ್ತಿರುವ ವೀರನ ಹಾಗೂ ಇದರ ಪಕ್ಕದಲ್ಲಿಯೇ ರಾಜಕತ್ತಿಯನ್ನು ತೋರಿಸಲಾಗಿದ್ದು, ವೀರನು ರಾಜನ ಪರವಾಗಿ ಯುದ್ಧದಲ್ಲಿ ಹೋರಾಡಿ ಮರಣ ಹೊಂದಿದ್ದು ಹಾಗೂ ಈತನ ಮರಣ ವಿಚಾರವು ತಿಳಿದ ನಂತರ ವೀರನ ಪತ್ನಿಯು ಸಹ ತನ್ನ ಸ್ವ ಇಚ್ಛೆಯಿಂದ ಪ್ರಾಣತ್ಯಾಗ ಮಾಡಿ ವೀರಮಾಸ್ತಿ ಎನಿಸಿಕೊಂಡಿದ್ದಾಳೆ ಎಂಬುದನ್ನು ಒಕ್ಕೈ ಕೆತ್ತನೆಯ ಮೂಲಕ ತೋರಿಸಲಾಗಿದೆ. ಸತಿಯು ತನ್ನ ಕೈಯಲ್ಲಿ ನಿಂಬೆಯನ್ನು ಹಿಡಿದಿರುವುದನ್ನು ಕಾಣಬಹುದು.

ADVERTISEMENT

ಎರಡನೇ ಪಟ್ಟಿಕೆ ಅಥವಾ ಮೇಲ್ಭಾಗದ ಪಟ್ಟಿಕೆಯ ಮಧ್ಯಭಾಗದಲ್ಲಿ ಶಿವಲಿಂಗವಿದ್ದು ಇದಕ್ಕೆ ಗಜಗಳು ಕುಂಭಾಭಿಷೇಕ ಮಾಡುವಂತೆ ಹಾಗೂ ಶಿವಲಿಂಗದ ಮುಂಭಾಗದಲ್ಲಿ ಶಿವನ ವಾಹನ ನಂದಿಯನ್ನು ತೋರಿಸಲಾಗಿದೆ. ರಾಜ್ಯಕ್ಕಾಗಿ/ರಾಜನ ಪರವಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಈ ವೀರನ ಬಲಿದಾನ ಹಾಗೂ ತನ್ನ ಪತಿಗಾಗಿ ಜೀವವನ್ನು ತ್ಯಾಗ ಮಾಡಿದ ಸತಿಯು ಅಜರಾಮರವಾಗಿರಬೇಕೆಂದು ಸೂರ್ಯ-ಚಂದ್ರರ ಕೆತ್ತನೆಯನ್ನು ಮಾಡಲಾಗಿದೆ.

ಈ ವೀರಮಾಸ್ತಿ ಕಲ್ಲಿನ ತಳಭಾಗದಲ್ಲಿ ಮಣ್ಣಿನಿಂದ ನಿರ್ಮಾಣ ಮಾಡಿರುವ 5 ದೊಡ್ಡ ಗಾತ್ರದ ಮಡಕೆಗಳು ಹಾಗೂ 2 ಸಣ್ಣ ಗಾತ್ರದ ಮಡಕೆಗಳಿದ್ದು, ಇವುಗಳು ಸ್ತ್ರೀಯನ್ನು (ಮನುಷ್ಯಾಕೃತಿ) ಹೋಲುವಂತೆ ಕಣ್ಣು, ಮೂಗು, ಬಾಯಿ ಹಾಗೂ ಸ್ತನಭಾಗದ ರಚನೆಯನ್ನು ಮಾಡಲಾಗಿರುತ್ತದೆ. ಮಲೆನಾಡಿನ ಹೆಚ್ಚಿನ ಸ್ಥಳಗಳಲ್ಲಿ ಮುಖ್ಯವಾಗಿ ಸ್ಥಳೀಯರು ದೇವಿಬನ ಎಂದು ಕರೆಯುವ ಜಾಗದಲ್ಲಿ ಮನುಷ್ಯಾಕೃತಿಯ ಮಡಕೆಗಳು ಸಿಕ್ಕಿರುವ ಪುರಾವೆಗಳಿವೆ. ಮುಖ್ಯವಾಗಿ ದೇವಿಬನಗಳಲ್ಲಿ ಇಂತಹ ಮಡಕೆಗಳನ್ನು ‘ಫಲವಂತಿಕೆ’ ಅಥವಾ ‘ಮಾತೃತ್ವ’ದ ರೂಪದಲ್ಲಿ ಹರಕೆಯಾಗಿ ಒಪ್ಪಿಸಲಾಗುತ್ತದೆ. ಅಂದರೆ ಸಂತಾನ ಪ್ರಾಪ್ತಿಗಾಗಿ, ಸುಖಕರ ಹೆರಿಗೆಗಾಗಿ, ಸಣ್ಣ ಮಕ್ಕಳಿಗೆ ರೋಗಗಳು ಬಂದಂತ ಸಂದರ್ಭದಲ್ಲಿ ಅಥವಾ ಬರದಂತೆ ಮನುಷ್ಯ ರೂಪದ ಮಡಕೆಗಳನ್ನು ಒಪ್ಪಿಸಲಾಗುತ್ತದೆ. (ಇದೇ ರೀತಿ ಹುಲಿಬನಗಳನ್ನು ಸಹ ಕಾಣಬಹುದು. ಇಲ್ಲಿ ಕಾಡುಪ್ರಾಣಿಗಳಿಂದ ಸಾಕುಪ್ರಾಣಿಗಳ ಹಾಗೆಯೇ ಕೃಷಿಭೂಮಿ ರಕ್ಷಣೆಗಾಗಿ ಪ್ರಾಣಿರೂಪದ ಹೆಚ್ಚಾಗಿ ಹುಲಿ ಆಕೃತಿಯನ್ನು ಹೊಂದಿರುವ ಮಡಕೆಗಳನ್ನು ಒಪ್ಪಿಸಲಾಗುತ್ತದೆ). ಹೆಚ್ಚಾಗಿ ಇಂತಹ ಜಾನಪದ ಆಚರಣೆಗಳನ್ನು/ಹರಕೆಗಳನ್ನು ತಮ್ಮ ಸುಖ-ಕಷ್ಟಗಳ ಸಂದರ್ಭದಲ್ಲಿ ಮಾಡಲಾಗುತ್ತಿತ್ತು. ಅಧ್ಯಯನದ ದೃಷ್ಟಿಯಿಂದ ಈ ವೀರಮಾಸ್ತಿ ಕಲ್ಲಿನ ತಳಭಾಗದಲ್ಲಿ ದೊರೆತಿರುವ ವಿವಿಧ ಗಾತ್ರದ ಮಡಕೆಗಳು ನಂತರದ ಕಾಲಕ್ಕೆ ಅಂದರೆ ಸುಮಾರು 17-18ನೇ ಶತಮಾನಕ್ಕೆ ಸೇರಿರುತ್ತದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯಪಟ್ಟಿದ್ದಾರೆ.

ಈ ವೀರಮಾಸ್ತಿ ಕಲ್ಲಿನಿಂದ ಅನತಿ‌ ದೂರದಲ್ಲಿ ಮತ್ತೊಂದು ವೀರಗಲ್ಲಿದ್ದು, ಇದು 5 ಫೂಟ್ ಎತ್ತರ ಹಾಗೂ 2.5ಫೂಟ್ ಅಗಲವಾಗಿದ್ದು ಕಾಲಮಾನದ ದೃಷ್ಟಿಯಿಂದ ಇದು ಸಹ 15-16ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಲ್ಕು ಪಟ್ಟಿಕೆಗಳನ್ನು ಹೊಂದಿರುವ ಈ ವೀರಗಲ್ಲಿನ ಮೊದಲ ಅಥವಾ ಕೆಳಗಿನ ಪಟ್ಟಿಕೆಯಲ್ಲಿ ವೀರಾವೇಶದಿಂದ ವೀರರು ಎದುರಾಳಿಗಳ ಪಡೆಯೊಂದಿಗೆ ಹೋರಾಟ ಮಾಡುವ ಕೆತ್ತನೆಯನ್ನು ತೋರಿಸಲಾಗಿದೆ. ನಂತರದ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ಇಬ್ಬರು ವೀರರನ್ನು ಅಪ್ಸರೆ/ದೇವಕನ್ನಿಕೆಯರು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವ ಚಿತ್ರಣವನ್ನು ಕಾಣಬಹುದು. ಮೂರನೇ ಪಟ್ಟಿಕೆಯಲ್ಲಿ ಪರಲೋಕ ಸೇರಿದ ಇಬ್ಬರೂ ವೀರರು ಪದ್ಮಾಸನದಲ್ಲಿ ಕುಳಿತಿರುವ ಮುನಿಗಳಿಗೆ ಕೈ ಮುಗಿದು ಕುಳಿತುಕೊಂಡು ನಮಸ್ಕರಿಸುವ ಕೆತ್ತನೆಯನ್ನು ಮಾಡಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಪೂಜಿಸುತ್ತಿರುವ (ಗಂಟೆ ಮತ್ತು ಆರತಿ ಮಾಡುವ) ಮುನಿಯನ್ನು ಹಾಗೂ ಶಿವನ ವಾಹನವಾದ ನಂದಿಯನ್ನು ತೋರಿಸಲಾಗಿದೆ. ಹಾಗೆಯೇ ರಾಜ್ಯ/ರಾಜನಿಗಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿದ ಈ ವೀರರ ತ್ಯಾಗ ಅಜರಾಮರವಾಗಿರಬೇಕೆಂದು ಸೂರ್ಯ-ಚಂದ್ರರ ಕೆತ್ತನೆಯನ್ನು ಮಾಡಲಾಗಿದೆ.

ADVERTISEMENT

ಒಟ್ಟಿನಲ್ಲಿ ಸ್ಥಳೀಯರು ಈ ಎರಡೂ ಸ್ಮಾರಕ ಶಿಲ್ಪಗಳನ್ನು ಮಾಸ್ತಿಬನದ ಹೆಸರಿನಲ್ಲಿ ಸಂರಕ್ಷಿಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದ ಕಾರ್ಯ ಎಂದು ಸಂಶೋಧನಾರ್ಥಿಯು ಹೇಳಿದ್ದಾರೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕೆಳದಿ ವಸ್ತುಸಂಗ್ರಹಾಲಯದ ನಿರ್ದೇಶಕರಾದ ಡಾ.‌ ಶಂಭುಲಿಂಗಮೂರ್ತಿ ಎಚ್.ಎಂ ಹಾಗೂ ಕ್ಯುರೇಟರ್ ಶ್ರುತೇಶ್ ಆಚಾರ್ಯ ‌ಮೂಡುಬೆಳ್ಳೆ ಸಹಕಾರ ನೀಡಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!