ಬೆಳಗಾವಿ: ಮತಾಂತರ ನಿಷೇಧ ಕಾಯ್ದೆಯ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ವಿರೋಧ ಪಕ್ಷಗಳ ಗದ್ದಲ ಮತ್ತು ವಿರೋಧದ ನಡುವೆ ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ ದೊರೆತಿದೆ.
ಗೃಹ ಸಚಿವರ ಹೇಳಿಕೆ: ಈ ವಿಧೇಯಕ, ಸಮಾಜದಲ್ಲಿ ಶಾಂತಿ, ಸಾಮರಸ್ಯ ಕಾಪಾಡಲು ಸಹಕಾರಿಯಾಗಲಿದೆ. ಇದು ಯಾವುದೇ ಧರ್ಮದ ವಿರುದ್ಧವಲ್ಲ. ಸಮಾಜದಲ್ಲಿ ಪಿಡುಗಾಗಿ ಪರಿಣಮಿಸಿರುವ ಬಲವಂತದ ಹಾಗೂ ಆಮಿಷದ ಮತಾಂತರವನ್ನು ತಡೆಗಟ್ಟುವ ಅಗತ್ಯವಿದೆ. ಸ್ವ ಇಚ್ಛೆಯಿಂದ ಯಾರಾದರೂ ಮತಾಂತರವಾದರೆ ಅಸಮ್ಮತಿ ಇಲ್ಲ.
ಇದು ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿಲ್ಲ. ಬಲವಂತದ, ಮೋಸದ ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಈ ಮಸೂದೆ ಸಹಕಾರಿಯಾಗಲಿದೆ.
ಪ್ರತಿ ಧರ್ಮದ ಅಸ್ಮಿತೆ ಕಾಪಾಡಲು ಈ ಕಾನೂನು ತರಲಾಗುತ್ತಿದೆ. ಈ ಬಗ್ಗೆ ಯಾರೂ ಭಯಪಡಬೇಕಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಪ್ರತಿಕ್ರಿಯೆ: ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021’ ಅನ್ನು ವಿಧಾನಸಭೆ ಅಂಗೀಕರಿಸಿದ್ದು, ನಮ್ಮ ಪಕ್ಷದ ಎಲ್ಲ ಶಾಸಕರನ್ನು ಅಭಿನಂದಿಸುತ್ತೇನೆ.
ವಂಚನೆಯ, ಬಲವಂತದ ಅಥವಾ ಆಮಿಷದ ಮತಾಂತರ ಎನ್ನುವ ಪಿಡುಗನ್ನು ಕಿತ್ತೊಗೆಯಬೇಕು ಎನ್ನುವುದು ಪಕ್ಷದ ಹಾಗೂ ಸರ್ಕಾರದ ಬದ್ಧತೆ. ಈ ನಿಟ್ಟಿನಲ್ಲಿ ವಿಧೇಯಕದ ಅನುಮೋದನೆ ಚರಿತ್ರಾರ್ಹವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.