Home ಸುದ್ಧಿಗಳು ಪ್ರಾದೇಶಿಕ 12 ವರ್ಷಗಳ ಬಳಿಕ ಹೆತ್ತಬ್ಬೆಯ ಮಡಿಲು ಸೇರಿದ ಮಗ; ನಾಗರಿಕ ಸಮಿತಿಯ ಸೇವೆಗೆ ಶ್ಲಾಘನೆ

12 ವರ್ಷಗಳ ಬಳಿಕ ಹೆತ್ತಬ್ಬೆಯ ಮಡಿಲು ಸೇರಿದ ಮಗ; ನಾಗರಿಕ ಸಮಿತಿಯ ಸೇವೆಗೆ ಶ್ಲಾಘನೆ

581
0

ಉಡುಪಿ: ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಉಡುಪಿಯಲ್ಲಿ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ಯುವಕನ ಮನವೊಲಿಸಿ, ಕುಂದಾಪುರ ತಾಲೂಕಿನ, ವಕ್ವಾಡಿಯಲ್ಲಿರುವ ಮನೆಗೆ ಮಂಗಳವಾರ ಸೇರಿಸಿದ್ದಾರೆ. ಕಾಣೆಯಾಗಿರುವ ಮಗ 12 ವರ್ಷಗಳ ಬಳಿಕ ಮನೆಗೆ ಬಂದಿರುವುದು ಹೆತ್ತಬ್ಬೆಯಲ್ಲಿ ಸಂತಸ ಮೂಡಿಸಿತು. ಮನೆಯಲ್ಲಿ ಹಬ್ಬದ ವಾತಾವರಣ ಕಂಡುಬಂದಿತು. ನಾಗರಿಕ ಸಮಿತಿಯ ಮಾನವೀಯ ಸೇವಾ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಾಕ್ತವಾಗಿದೆ.

ಉಡುಪಿ ನಗರ ಪರಿಸರದಲ್ಲಿ ಕೆಲವು ವರ್ಷಗಳಿಂದ ಅಪರಿಚಿತ ಯುವಕನೊರ್ವ ನೆಲೆಕಂಡಿದ್ದ. ಉದರ ಹಸಿವು ತಣಿಸಲು ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರಲ್ಲಿ ಭಿಕ್ಷೆಯನ್ನು ಯಾಚಿಸುತ್ತಿದ್ದನು. ರಾತ್ರಿಯ ಸಮಯವನ್ನು ಬಸ್ಸು ನಿಲ್ದಾಣ, ಅಂಗಡಿ ಜಗುಲಿಯಲ್ಲಿ ಮಲಗಿ ದಿನ ಕಳೆಯುತ್ತಿದ್ದನು. ರಾತ್ರಿಯ ಹೊತ್ತು ಯುವಕ ಅನುಮಾನಸ್ಪದವಾಗಿ ತಿರುಗಾಡುವ ಸಮಯದಲ್ಲಿ ಗಸ್ತು ಪೋಲಿಸರ ಲಾಠಿಯ ರುಚಿಯನ್ನು ಹಲವಾರು ಬಾರಿ ಕಂಡಿದ್ದನು. ಮನೆ ಸೇರುವಂತೆ ಪೊಲೀಸರು ಬುದ್ದಿ ಹೇಳಿ ಪ್ರಯಾಣದ ಖರ್ಚಿಗೆ ಹಣವನ್ನು ನೀಡಿದ್ದರು. ಆದರೆ ಯುವಕ ಮಾತ್ರ ಅಲೆಮಾರಿಯಂತೆ ದಿನಗಳ ಕಳೆಯುತ್ತಿದ್ದನು. ಸದೃಢ ಯುವಕನ ಭಿಕ್ಷಾಟನೆ ಕಂಡು ನಾಗರಿಕ ಸಮಿತಿಯ ಕಾರ್ಯಕರ್ತರು, ಭಿಕ್ಷಾಟನೆ ನಿಷೇಧ ಕಾಯ್ಧೆ ಜಾರಿಯಲ್ಲಿದೆ, ಭಿಕ್ಷೆ ಬೇಡುವುದು ಅಪರಾಧವಾಗಿದೆ. ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ. ಹೀಗೆಂದು ಬುದ್ದಿ ಹೇಳಿ ಯುವಕನ ಮನವೊಲಿಸಿದ್ದರು. ಕೊನೆಗೆ ಮನ ಪರಿವರ್ತನೆಗೊಂಡ ಯುವಕ ತನ್ನನ್ನು ಮನೆಗೆ ಸೇರಿಸುವಂತೆ ವಿನಂತಿಸಿಕೊಂಡಿದ್ದಾನೆ.

ಯುವಕ ವಕ್ವಾಡಿ ತೆಂಕಬೆಟ್ಟು ಇಲ್ಲಿಯ ನಿವಾಸಿ ಪ್ರಶಾಂತ್ ಶೆಟ್ಟಿ (37 ವ) ಎಂದು ತಿಳಿದುಬಂದಿತು. ವಕ್ವಾಡಿಯ ಸಾಮಾಜಿಕ ಕಾರ್ಯಕರ್ತೆ ಅಂಬಿಕಾ ಅವರ ಸಹಕಾರದಿಂದ ನಾಗರಿಕ ಸಮಿತಿಯ ಕಾರ್ಯಕರ್ತರು, ಯುವಕನನ್ನು ವಾಹನದಲ್ಲಿ ಕರೆದೊಯ್ದು ಹೆತ್ತಬ್ಬೆಯ ಮಡಿಲಿಗೆ ಒಪ್ಪಿಸಿದರು. ಆವಾಗ ಸಮಿತಿಯ ಕಾರ್ಯಕರ್ತರಿಗೆ ಯುವಕ ಮನೆಯಿಂದ ಕಾಣೆಯಾಗಿ 12 ವರ್ಷಗಳಾಗಿರುವುದು, ಮನೆ ಮಂದಿ ಹುಡುಕಾಟ ನಡೆಸಿರುವುದು, ತಾಯಿಯಿಂದ ತಿಳಿದುಬಂದಿತು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು, ನಗರದಲ್ಲಿ ಭಿಕ್ಷಾಟನೆ ನಡೆಸುತ್ತಿರುವ ಸದೃಢ ಯುವಕರನ್ನು ಮನವೊಲಿಸಿ ಭಿಕ್ಷಾಟನೆಯಿಂದ ಹೊರತರುವ ಸೇವಾ ಕಾರ್ಯದಲ್ಲಿ ನಿರತವಾಗಿದೆ. ಈಗಾಗಲೇ ಸಮಿತಿಯವರು 50 ಕ್ಕೂ ಅಧಿಕ ಭಿಕ್ಷುಕರನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಿರುವರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.