ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡೆ ವಾರ್ಡಿನ ಮಿಷನ್ ಗೋರಿ ರಸ್ತೆಯ ಅಗಲೀಕರಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕ ಕಾಮತ್, ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದೆ. ವಾಹನ ದಟ್ಟಣೆಯ ವಿಚಾರದಲ್ಲಿ ಬೆಂಗಳೂರಿಗೆ ಸರಿಸಮಾನವಾಗಿ ಬೆಳೆದುನಿಂತ ಮಂಗಳೂರಿನಲ್ಲಿ ರಸ್ತೆಗಳ ಅಗಲೀಕರಣ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿದೆ. ಮಣ್ಣಗುಡ್ಡೆ ವಾರ್ಡಿನ ಮಿಷನ್ ಗೋರಿ ರಸ್ತೆಯ ಅಗಲೀಕರಣಕ್ಕಾಗಿ 1.5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಯ ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಮ್ಮ ಆಡಳಿತ ವ್ಯವಸ್ಥೆ ಬದ್ಧವಾಗಿದೆ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಈಗಾಗಲೇ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ನಗರದ ಅನೇಕ ಕಡೆಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಿಷನ್ ಗೋರಿ ರಸ್ತೆ ಅಗಲೀಕರಣದಿಂದ ಈ ಭಾಗದ ಜನರಿಗೂ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಮನಪಾ ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್, ಜಗದೀಶ್ ಶೆಟ್ಟಿ ಬೋಳೂರು, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ವಸಂತ್ ಶೇಟ್, ಮೋಹನ್ ಆಚಾರ್, ಪಾಂಡುರಂಗ ಶೆಣೈ, ರಾಮಚಂದ್ರ ಭಂಡಾರಿ, ನಾರಾಯಣ ಭಟ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.