ಉಡುಪಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ನಿರ್ದೇಶನದ ಅಡಿಯಲ್ಲಿ ಮಹಿಳೆಯರ ಅಭ್ಯುದಯದ ಗುರಿಯೊಂದಿಗೆ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರಗಳನ್ನು, ರಾಜ್ಯ ಸರಕಾರ ಆರ್ಥಿಕ ಸಂಕಷ್ಟದ ಕಾರಣ ನೀಡಿ ಮುಚ್ಚುವ ಆದೇಶ ಹೊರಡಿಸಿರುವುದು ವಿಷಾದನೀಯ. ಇದು ಆಳುವ ಬಿಜೆಪಿ ಸರಕಾರದ ಮಹಿಳಾ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ಸರಕಾರದ ನಿಲುವನ್ನು ಖಂಡಿಸಿದೆ.
ವರದಕ್ಷಿಣೆ, ಕೌಟುಂಬಿಕ ಧೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳವೇ ಮೊದಲಾದ ವೈಯಕ್ತಿಕ ಸಮಸ್ಯೆಗಳನ್ನು ತಮ್ಮ ಆತ್ಮಗೌರವದ ಪ್ರಶ್ನೆಯಾಗಿ ಪರಿಗಣಿಸಿ ಆರಕ್ಷಕ ಠಾಣೆಗಳಿಗೆ ದೂರು ನೀಡಲು ಹಿಂಜರಿಯುತ್ತಿದ್ದ ಮಹಿಳೆಯರಿಗೆ, ಈ ಸಾಂತ್ವನ ಕೇಂದ್ರಗಳು ನ್ಯಾಯ ಒದಗಿಸಿ ಬದುಕು ಕಟ್ಟಿಕೊಡುತ್ತಿದ್ದುವು. ಪ್ರಕರಣದ ಆದ್ಯತೆ ಮತ್ತು ಅಗತ್ಯತೆಯನ್ನು ಅನುಲಕ್ಷಿಸಿ ಸಂತ್ರಸ್ತರಿಗೆ 10 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿತ್ತು. ರಾಜ್ಯದಲ್ಲಿ ಲೈಂಗಿಕ ಧೌರ್ಜನ್ಯ ಉತ್ತುಂಗ ಸ್ಥಿತಿಯಲ್ಲಿರುವ ಈ ಕಾಲಘಟ್ಟದಲ್ಲಿ ಈ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ಸರಕಾರದ ನಡೆ ಬೇಜವಾಬ್ದಾರಿಯದ್ದಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಸರಕಾರ ಈ ಸಾಂತ್ವನ ಕೇಂದ್ರಗಳಿಗೆ ಕಳೆದ 7 ತಿಂಗಳಿಂದ ಅನುದಾನ ಬಿಡುಗಡೆಗೊಳಿಸಿಲ್ಲ. ರಾಜ್ಯದ 196 ಕೇಂದ್ರಗಳಲ್ಲಿ ಈಗಾಗಲೇ 74 ಕೇಂದ್ರಗಳನ್ನು ಮುಚ್ಚಲಾಗಿದ್ದು ಉಳಿದವುಗಳನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿದೆ. ಪರಿಣಾಮವಾಗಿ ಇದನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಸಾವಿರಕ್ಕೂ ಹೆಚ್ಚು ನೌಕರರು ಬೀದಿಗೆ ಬೀಳುವಂತಾಗಿದೆ. ಇದು ಮಹಿಳೆಯರ ಪಾಲಿನ ಮರಣ ಶಾಸನ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.