ಬ್ರಹ್ಮಾವರ, ನ.15: ಉಡುಪಿ ಶ್ರೀ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಚಿತ್ರದುರ್ಗ ಶ್ರೀ ಬಸವ ಮಾದಾರ ಚನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಶನಿವಾರ ಸಂಜೆ ನೀಲಾವರ ಗ್ರಾಮದಲ್ಲಿರುವ ಶ್ರೀ ವಿಶ್ವೇಶತೀರ್ಥ ಸ್ಮೃತಿವನಕ್ಕೆ ಭೇಟಿ ನೀಡಿದರು. ಶ್ರೀ ವಿಶ್ವೇಶತೀರ್ಥರ ಪುತ್ಥಳಿಗೆ ಈರ್ವರೂ ಮಾಲಾರ್ಪಣೆಗೈದು ಗೌರವ ಸಮರ್ಪಿಸಿ, ಫೋಟೋ ಗ್ಯಾಲರಿ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಅಳವಡಿಸಲಾದ ಸೋಲಾರ್ ಹೈಮಾಸ್ಕ್ ಲೈಟ್ ಗಳಿಗೆ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿಯವರು ಚಾಲನೆ ನೀಡಿದರು. ನೀಲಾವರ ಗೋಶಾಲೆಗೂ ಭೇಟಿ ನೀಡಿ ಕೃಷ್ಣ ದೇವರ ದರ್ಶನ ಪಡೆದು ಈ ಎರಡೂ ಸ್ಥಳಗಳಿಗೆ ಭೇಟಿ ನೀಡಿರುವುದು ತುಂಬ ಸಂತಸ ತಂದಿದೆ. ಶ್ರೀ ವಿಶ್ವೇಶತೀರ್ಥರು ನಮಗೆಲ್ಲ ಯಾವತ್ತಿಗೂ ಪ್ರೇರಣೆಯ ಸೆಲೆಯಾಗಿದ್ದಾರೆ. ಅವರ ಸ್ಥಳದಲ್ಲಿ ಎರಡು ಕ್ಷಣ ನಿಂತರೂ ಅಮೂಲ್ಯವಾದುದು. ಅವರು ಹಚ್ಚಿದ ಸಮಾನತೆಯ ದೀಪಕ್ಕೆ ಎಣ್ಣೆ ಹೊಯ್ಯುವ ಕರ್ತವ್ಯ ನಮಗಿದೆ. ಎಂದರು. ಈರ್ವರು ಯತಿಗಳಿಗೂ ಪೇಜಾವರ ಮಠ ಸಂಸ್ಥಾನದ ವತಿಯಿಂದ ಭಕ್ತಿ ಗೌರವ ಸಮರ್ಪಿಲಾಯಿತು.
ಗೋಶಾಲೆಯ ಕೋಶಾಧಿಕಾರಿ ಎಂ ಎಂ ಲಕ್ಷ್ಮೀನಾರಾಯಣ ರಾವ್, ಅರ್ಚಕ ಪ್ರಶಾಂತ್ ಆಚಾರ್ಯ, ವ್ಯವಸ್ಥಾಪಕ ಆಶ್ರಿತ್, ಕಾರ್ಯಕರ್ತರಾದ ಸತೀಶ್ ಕುಮಾರ್, ಸ್ಥಳೀಯ ಮುಖಂಡರಾದ ಕಮಲಾಕ್ಷ ಹೆಬ್ಬಾರ್, ಹರೀಶ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ ಸೆಲ್ಕೊ ಸಂಸ್ಥೆಯ ಪ್ರವೀಣ್ ಕುಮಾರ್ ಮೊದಲಾದವರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಯತಿದ್ವಯರನ್ನು ಬರಮಾಡಿಕೊಂಡು ಸ್ಥಳದ ಬಗ್ಗೆ ವಿವರಿಸಿದರು.




By
ForthFocus™