ಉಡುಪಿ, ನ.13: ಉಡುಪಿ ಎಫ್‌ಎಂ ಸೇವೆಯ ಕಾರ್ಯಾರಂಭದಿಂದಾಗಿ ಕರಾವಳಿ ಪ್ರದೇಶದಲ್ಲಿ ಸಾರ್ವಜನಿಕ ಪ್ರಸಾರ ಮೂಲಸೌಕರ್ಯ ಬಲಪಡಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ. ಹೊಸ 1 ಕಿ.ವ್ಯಾ. ಎಫ್‌ಎಂ ಟ್ರಾನ್ಸ್ಮೀಟರ್ ಆಕಾಶವಾಣಿ ಮಂಗಳೂರಿನ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದ್ದು, ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಕಾಶವಾಣಿ ಕೇಳುಗರಿಗೆ ಗುಣಮಟ್ಟದ ರೇಡಿಯೋ ವಿಷಯವನ್ನು ತಲುಪಿಸುವ ಕಾರ್ಯ ಮಾಡಲಿದೆ ಎಂದು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಹೇಳಿದರು. ಅವರು ಶುಕ್ರವಾರ ಉಡುಪಿಯ ಅಜ್ಜರಕಾಡಿನ ಆಕಾಶವಾಣಿ ಕೇಂದ್ರದಲ್ಲಿ 101.9 MHz 1 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್‌ಎಂ ಪ್ರೇಷಕದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಈ ಸೇವೆಯ ಆರಂಭದಿಂದಾಗಿ ಮಾಹಿತಿ, ಶಿಕ್ಷಣ ಮತ್ತು ಮನರಂಜನೆಗೆ ವೇದಿಕೆಯನ್ನು ಒದಗಿಸುವುದರೊಂದಿಗೆ ಸ್ಥಳೀಯ ಸಂಸ್ಕೃತಿ, ಸಾಹಿತ್ಯ, ಸಂಗೀತ, ಕಲೆ ಮತ್ತು ಪ್ರಾದೇಶಿಕ ಸಂಪ್ರದಾಯಗಳನ್ನು ಉತ್ತೇಜಿಸಲಿದೆ. ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಮಹತ್ವದ ವಿಷಯಗಳ ಕುರಿತಾದ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರು ತೊಡಗಿಸಿಕೊಳ್ಳುವಿಕೆಗೂ ಅನುವು ಮಾಡಿಕೊಡಲಿದೆ ಎಂದರು. ರಾಜಧಾನಿ ಬೆಂಗಳೂರನ್ನು ಕರಾವಳಿಯ ಮೂಲಕ ಗೋವಾದ ಮಡಗಾಂವ್ ಸಂಪರ್ಕಿಸುವ ಮಹತ್ವದ ಕಾರ್ಯಕ್ರಮವಾದ ವಂದೇ ಭಾರತ್ ರೈಲಿಗೆ ಇಂದು ಪ್ರಧಾನ ಮಂತ್ರಿಗಳು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ಕೊಂಕಣ ರೈಲ್ವೆ ಮಾರ್ಗದ ಸಂಪೂರ್ಣ ದ್ವಿಗುಣೀಕರಣದ ಧ್ಯೇಯ ಹೊಂದಿದ್ದು, ಇದನ್ನು ಯಶಸ್ವಿಯಾಗಿ ಮಾಡಲಾಗುವುದು. ಕೊಂಕಣ ರೀಜಿಯನ್ ಹಾಗೂ ಕರಾವಳಿ ಕರ್ನಾಟಕದ ಎಲ್ಲಾ ರೈಲ್ವೆ ಇಲಾಖೆಯ ಯೋಜನೆಗಳಿಗೆ ಪ್ರಧಾನಮಂತ್ರಿಗಳು ಅನುಮೋದನೆ ನೀಡಿದ್ದು, ಮಾಸ್ಟರ್ ಪ್ಲಾನ್ ರೂಪಿಸಿ, ಮೇಲ್ದರ್ಜೆಗೇರಿಸುವ ಕೆಲಸವನ್ನು ಹಂತಹಂತವಾಗಿ ಮಾಡಲಾಗುವುದು ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕರ್ನಾಟಕದ ಬೆಂಗಳೂರು ಹಾಗೂ ಕರಾವಳಿ ಜೋಡಿಸಬಹುದಾದ ವಂದೇ ಭಾರತ್ ರೈಲನ್ನು ಉಡುಪಿ ಜಿಲ್ಲೆಗೆ ಕೊಡುಗೆಯಾಗಿ ನೀಡಲು ಸಚಿವರು ಬಂದಿದ್ದಾರೆ. ಮಂಗಳೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದ ಅವರು, ಜಿಲ್ಲೆಯ ಜನರಿಂದ ಎಫ್.ಎಂನ ಬೇಡಿಕೆ ಇದ್ದು, ಇಂದು ಸಚಿವರಿಂದ ಉದ್ಘಾಟನೆಗೊಂಡಿರುವುದು ಚಾರಿತ್ರಿಕ ಕ್ಷಣವಾಗಿದೆ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಬೆಂಗಳೂರು ಹಾಗೂ ಮಡಗಾಂವ್‌ವನ್ನು ಕರಾವಳಿ ಮೂಲಕ ಸಂಪರ್ಕಿಸುವ ವಂದೇ ಭಾರತ್ ರೈಲಿಗೆ ಇಂದು ಚಾಲನೆ ನೀಡುತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ರೈಲ್ವೆ ಪ್ರಯಾಣಿಕರ ಬೇಡಿಕೆಯಂತೆ ನಿಲ್ದಾಣದ ಪರಿಸರದಲ್ಲಿ ಹೊಸತನ ತರಲು ಹಾಗೂ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಮಂಗಳೂರು ಸಂಸದರಾದ ಬ್ರಿಜೇಶ್ ಚೌಟ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಆಕಾಶವಾಣಿ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಮಲ್ಲಿಕಾ ಅಜಿತ್ ಶೆಟ್ಟಿ ಹಾಗೂ ಡಾ. ಅನುಷಾ ಲೂಯಿಸ್ ನಿರೂಪಿಸಿದರು.




By
ForthFocus™